ದಕ್ಷಿಣ ಆಫ್ರಿಕಾದಲ್ಲಿ ಪೈಲೆಟ್ ಊರಿನಲ್ಲಿ ದೈವಪಾತ್ರಿ

ಕಿನ್ನಿಗೋಳಿ: ಪೂರ್ವ ದಕ್ಷಿಣ ಆಫ್ರಿಕಾದಲ್ಲಿ ಆರಿಕ್ ಎರ್ (auric air) ವಿಮಾನ ಸಂಸ್ಥೆಯಲ್ಲಿ ಪೈಲೆಟ್ ಆಗಿದ್ದು ಆಧುನಿಕ, ಐಷಾರಾಮಿ ಶ್ರೀಮಂತ ಬದುಕು ಕಾಣುವ ಎಲ್ಲ ಅವಕಾಶಗಳಿರುವ ಇಪ್ಪತ್ತೊಂಭತ್ತರ ಹರೆಯದ ವಿದ್ಯಾವಂತ ಯುವಕ ಮನೋಜ್ ಪೂಜಾರಿ ಕರಾವಳಿ ತುಳುನಾಡಿನ ಜಾನಪದ ಆರಾಧನೆಯಾದ ದೈವಾರಾಧನೆಯಲ್ಲಿ ದೈವಪಾತ್ರಿಯಾಗಿ ದೈವಶಕ್ತಿ ಭಕ್ತಿಗೆ ಸಾಕ್ಷಿಯಾಗಿದ್ದಾರೆ.
ಮೂಲತಃ ಎಳತ್ತೂರು ಮನೋಜ್ ಪೂಜಾರಿ ಮೂಲ್ಕಿ ಸಮೀಪದ ಕಾಂತಾಬಾರೆ ಬೂದಾಬಾರೆ ಗರಡಿಯ ಗುಡ್ಡೆ ಜುಮಾದಿ (ಧೂಮಾವತಿ) ದೈವದ ಪಾತ್ರಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ.
ಮೂಲ್ಕಿ ಒಂಭತ್ತು ಮಾಗಣೆಗೆ ಸಂಬಂಧಿಸಿದ ಕಾರಣಿಕ ಪುರುಷರಾದ ಕಾಂತಾಬಾರೆ ಬೂದಾಬಾರೆ ಹಲವಾರು ಪವಾಡಗಳನ್ನು ಮಾಡಿದ ವೀರಪುರುಷರು. ಇವರ ಗರಡಿ ಕೂಡ ಪ್ರಸಿದ್ಧವಾಗಿದೆ. ಅನೇಕ ವರುಷಗಳ ಕಾಲ ಅಜೀರ್ಣಾವಸ್ಥೆಯಲ್ಲಿದ್ದ ಗರಡಿಯ ಗುಡ್ಡೆ ಜುಮಾದಿ, ಜಾರಂದಾಯ ಅಣ್ಣಪ್ಪ ಪಂಜುರ್ಲಿ ದೈವಸ್ಥಾನದ ದುಸ್ಥಿತಿಯ ಬಗ್ಗೆ ಕುಟುಂಬಿಕರು ನಾಗದರ್ಶನದಲ್ಲಿ ಕೇಳಿಕೊಂಡಾಗ ನಿಮ್ಮ ಕುಟುಂಬದಲ್ಲಿ ಹುಟ್ಟುವ ಮಗುವೊಂದಕ್ಕೆ ಹದಿನೆಂಟು ವರುಷ ತುಂಬಿದಾಗ ದೈವಸ್ಥಾನ ಜೀರ್ಣೋದ್ಧಾರವಾಗಲಿದೆ. ಎಂದು ದೇವರ ನುಡಿಯಲ್ಲಿ ಉತ್ತರ ಬಂದಿತ್ತು.
ಸುಂದರ ಪೂಜಾರಿ ಹಾಗೂ ಗೋಪಿ ದಂಪತಿಗಳ ಪುತ್ರ ಮನೋಜ್ ಮೂಲ್ಕಿ ನಾರಾಯಣಗುರು ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಕಲಿತು ಮುಲ್ಕಿ ವಿಜಯಾ ಕಾಲೇಜಿನಲ್ಲಿ ಪಿಯುಸಿ ಪೂರೈಸಿದರು. ಡೆಹ್ರಡೂನ್‌ನಲ್ಲಿ ಎಎಂಇ ಕಲಿತರು. ಮನೋಜ್ ಹುಟ್ಟಿ ವರುಷ ಹದಿನೆಂಟಾದಾಗ ಗರಡಿಯ ದೈವಸ್ಥಾನ ಜೀರ್ಣೋದ್ಧಾರಗೊಂಡಿತು. ಆ ಸಂದರ್ಭ ದೈವಗಳಿಗೆ ಪೂಪೂಜನದ(ಮುಕ್ಕಾಲ್ದಿ) ಸೇವೆಗೆ ತೊಡಗಿಕೊಳ್ಳಬೇಕಾಯಿತು. 2003ರಲ್ಲಿ ದೈವದ ಪೂಪೂಜನದ ಸೇವೆಗೆ ತೊಡಗಿಕೊಳ್ಳುವ ವರೆಗೆ ಸರಿಯಾಗಿ ಕೋಲಗಳನ್ನು ನೋಡಿದವರೇ ಅಲ್ಲ. ಆದರೆ 2004ರಲ್ಲಿ ಎಳತ್ತೂರು ಮಜಲಗುತ್ತುವಿನ ಜಾರಂದಾಯ ದೈವದ ಮುಗ(ಮೊಗ) ಹಿಡಿಯುವ ಕಾಯಕವನ್ನು ಆರಂಭಿಸಿದ್ದರು. ಅಜ್ಜ ಕೋಟು ಪೂಜಾರಿ ಕೊಲ್ಲೂರು ತಿರ್ಥಗುಡ್ಡೆಯ ಕಾಂತಾಬಾರೆ ಬೂದಾಬಾರೆಯರ ದೈವಸ್ಥಾನದಲ್ಲಿ ದರ್ಶನಕ್ಕೆ ನಿಲ್ಲುತ್ತಿದ್ದರು. ಈ ಹಿನ್ನಲೆಯ ಕುಟುಂಬದ ಹುಡುಗನಾದ ಮನೋಜ್ 2008ರಲ್ಲಿ ಪೈಲೆಟ್ ಆಗಲು ತರಬೇತಿಗೆ ಸೇರಿದ್ದರು. 2010ರಲ್ಲಿ ಲೈಸನ್ಸ್ ಸಿಕ್ಕಿತ್ತು. ಬಳಿಕ ಪೂರ್ವ ದಕ್ಷಿಣ ಆಫ್ರಿಕಾದಲ್ಲಿ ಪೈಲೆಟ್ ಆದರು. ತಾಂಜಾನಿಯಾ, ಯುಗಾಂಡಾ, ಕಾಂಗೋ, ರೇಮುಂಡಾ ದೇಶಗಳಲ್ಲಿ ಸುತ್ತಾಡುವ ಆರಿಕ್ ಎರ್ ಕಂಪನಿಯಲ್ಲಿ ಪೈಲೆಟ್ ಆಗುವ ಮುಂಚೆ ಜ್ಯೂಬಾ ಕಂಪನಿಯ ವಿಮಾನಗಳಲ್ಲಿ ಪೈಲೆಟ್ ಆಗಿದ್ದರು.
ಆದರೆ ಹುಟ್ಟೂರು ಅದರಲ್ಲೂ ಕುಟುಂಬದವರು ನಂಬಿಕೊಂಡು ಬಂದಿರುವ ಕಾಂತಾಬಾರೆ ಬೂದಾಬಾರೆಯರ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಆದಿ ಕಿಲ್ಲಾಡಿ, ನಡುಮಾನಾಡಿ (ಮಾನಂಪಾಡಿ) ಹಾಗೂ ಪುರುಪು ಗುಡ್ಡೆಸಾನಗಳಲ್ಲಿ ಮಾತ್ರ ಇರುವ ಗುಡ್ಡೆ ಜುಮಾದಿ (ಗುಡ್ಡೆ ಧೂಮಾವತಿ) ದೈವದ ಸೇವೆಗೆ ಸಮರ್ಪಿತವಾಗಿದ್ದ ಮನೋಜ್ ಭಾನುವಾರ ನಡೆದ ತುಡರಬಲಿ ಸಂದರ್ಭ ದೈವಪಾತ್ರಿಯಾಗಿದ್ದಾರೆ. ಕಳೆದ ವರ್ಷ ದೈವದಿಂದ ಎಣ್ಣೆ ಪಡೆದು, ಈ ವರ್ಷದ ಮಾರ್ಚ್ 6 ರಂದು ಗಡಿ ಹಿಡಿದವರು ಮಾನಾಡಿಯ ದೈವಪಾತ್ರಿ ಯಾದವ ಪೂಜಾರಿ ಅವರಿಂದ ನೋಡಿ ಕೇಳಿ ಆರಾಧನಾ ಕ್ರಮವನ್ನು ಕಲಿತಿದ್ದಾರೆ. ಆದರೆ ದೈವ ಆವೇಶದ ಬಳಿಕ ಹೇಳುವ ನುಡಿಗಟ್ಟುಗಳು ಇವು ಯಾವುದೂ ಗೊತ್ತಾಗುವುದಿಲ್ಲ. ಅದು ದೈವದಿಂದಲೇ ಆಗುವಂತಹದ್ದು. ನಮ್ಮ ಗೋಚರದಲ್ಲಿ ಇರುವುದಿಲ್ಲ ಎನ್ನುತ್ತಾರೆ ಮನೋಜ್.
ಅತ್ಯುತ್ತಮವಾಗಿ ಇಂಗ್ಲಿಷ್, ಹಿಂದಿ ಭಾಷೆಗಳನ್ನು ಮಾತನಾಡಬಲ್ಲ ಮನೋಜ್ ಎಳತ್ತೂರು ಜಾರಂದಾಯ ದೈವಸ್ಥಾನದಲ್ಲಿ ಜಾರಂದಾಯ ದೈವದ ಮೊಗ ಹಿಡಿಯುವ ಸಂದರ್ಭ ದೈವ ಮೈಯೊಳಗೆ ಆವೇಶವಾಗುವುದನ್ನು ವಿವರಿಸಲು ಆಗುವುದಿಲ್ಲ. ಆದರೆ ಕರೆಂಟ್‌ನಂತಹ ಶಕ್ತಿ ದೇಹದೊಳಗೆ ಬರುವಂತಹ ಅನುಭವವಾಗುತ್ತದೆ. ಆಮೇಲಿನದ್ದು ಗೊತ್ತಾಗುವುದಿಲ್ಲ ಎನ್ನುತ್ತಾರೆ. ಕಳೆದ ಶುಕ್ರವಾರ ಹಾಗೂ ಮಂಗಳವಾರ ಎಳತ್ತೂರು ಮಜಲಗುತ್ತುವಿನಲ್ಲಿ ನಡೆದ ನೇಮದಲ್ಲಿ ಜಾರಂದಾಯನ ಮೊಗ ಹಿಡಿದಿದ್ದಾರೆ. ಶನಿವಾರ ಕಾಂತಾಬಾರೆ ಬೂದಾಬಾರೆ ದೈವಸ್ಥಾನದಲ್ಲಿ ನಡೆಯಲಿರುವ ನೇಮದಲ್ಲಿ ಗುಡ್ಡೆ ಜುಮಾದಿಯ ದೈವಪಾತ್ರಿಯಾಗಿ ಸೇವೆ ಮಾಡಲಿದ್ದಾರೆ.
ತಾನು ಸೇವೆ ಮಾಡುವ ಗ್ರಾಮ ದೈವ, ರಾಜನ್ ದೈವಗಳು ಯಾವಾಗಲೂ ಎಲ್ಲೂ ಬರುವಂತಹವಲ್ಲ. ಕೊಡಿಯಡಿ, ನಡೆಯಲ್ಲಿ, ಭೇಟಿಯ ಸಂದರ್ಭ ಹೀಗೆ ಆಯಾಯ ಕಾಲದಲ್ಲಿ ಇಂತಹದ್ದೇ ಸ್ಥಳದಲ್ಲಿ ಮಾತ್ರ ಬರುವಂತಹುಗಳು. ವಿಮಾನದಲ್ಲಿ ಪೈಲೆಟ್ ಆಗಿದ್ದಾಗ, ತನ್ನ ಜೀವನದಲ್ಲೂ ನಂಬಿದ ದೈವಗಳು ರಕ್ಷಣೆ ನೀಡಿ ಕಾಪಾಡಿದ್ದಾವೆ ಎಂಬುದು ಅನುಭವಕ್ಕೆ ಬಂದಿದೆ. ದೈವಗಳು ಸತ್ಯ. ಅದರ ಅನುಭವಗಳೂ ಸತ್ಯ ಎನ್ನುತ್ತಾರೆ ಪೈಲೆಟ್ ಮನೋಜ್ ಪೂಜಾರಿ.

Kinnigoli-22031701 Kinnigoli-22031702 Kinnigoli-22031703 Kinnigoli-22031704 Kinnigoli-22031705 Kinnigoli-22031706 Kinnigoli-22031707

Comments

comments

Comments are closed.

Read previous post:
ಮಾರ್ಚ್ 28-31ಅತ್ತೂರು ನೇಮೋತ್ಸವ

ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ಅತ್ತೂರು ಕೆಮ್ರಾಲ್ ಕಿಲೆಂಜೂರು ಗ್ರಾಮಕ್ಕೆ ಒಳಪಟ್ಟ ಶ್ರೀ ಅರಸು ಕುಂಜಿರಾಯ ದೈವಸ್ಥಾನದಲ್ಲಿ ಮಾರ್ಚ್ 28ರಿಂದ 31ರ ವರೆಗೆ ವರ್ಷಾವಧಿ ಜಾತ್ರಾ ಮಹೋತ್ಸವ ನಡೆಯಲಿದೆ ಮಾರ್ಚ್...

Close