ಬಿಳಿ ನೊಣ ಬಾಧೆ – ಸಂಶೋಧನಾ ತಂಡ ಭೇಟಿ

ಮೂಲ್ಕಿ: ಮೂಲ್ಕಿಯ ಪರಿಸರದಲ್ಲಿ ಕಳೆದ ಐದು ತಿಂಗಳುಗಳಿಂದ ತೆಂಗು,ಹಣ್ಣುಹಂಪಲು ಸಹಿತ ಬೆಳೆ ,ತರಕಾರಿ ಇಳುವರಿ ನಾಶಕ್ಕೆ ಕಾರಣವಾದ ಬಿಳಿ ಪಾರಗಿತ್ತಿ ಧಾಳಿ ಪ್ರದೇಶವಾದ ಕಾರ್ನಾಡು ಧರ್ಮಸ್ಥಾನ ಪರಿಸರಕ್ಕೆ ಶುಕ್ರವಾರ ಕಾಸರಗೋಡಿನ ಕೇಂದ್ರೀಯ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಹಾಗೂ ತೋಟಗಾರಿಕಾ ಇಲಾಖಾಧಿಕಾರಿಗಳು ಭೇಟಿ ನೀಡಿ ಸ್ಥಳೀಯರಿಗೆ ಪರಿಹಾರ ಸೂಚಿಸಿದ್ದಾರೆ.
ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆಯ ಮುಖ್ಯ ವಿಜ್ಞಾನಿ ಡಾ.ವಿನಾಯಕ ಹೆಗ್ಡೆ ಮಾಹಿತಿ ನೀಡಿ ಅಮೇರಿಕಾ ಮತ್ತು ಯೂರೋಪ್ ದೇಶಗಳಲ್ಲಿ ಕಂಡುಬರುತ್ತಿದ್ದ ಈ ರೋಗ 2016ರಲ್ಲಿ ತಮಿಳುನಾಡು ಸಮುದ್ರ ದಡದಲ್ಲಿ ಪತ್ತೆಯಾಗಿತ್ತು ಅಲ್ಲಿನ ರೈತರು ಕೀಟ ನಿರ್ಮೂಲನಕ್ಕೆ ವಿಷ ರಾಸಾಯಿನಿಕಗಳನ್ನು ಬಳಸಿದ ಪರಿಣಾಮ ಈ ಕೀಟವು ಬಲವರ್ದಿಸಿಕೊಂಡು ಹರಡಲು ಕಾರಣವಾಗಿದೆ. ಈ ಕೀಟದಿಂದ ಮಾನವರಿಗೆ ಅಲರ್ಜಿ ಬಿಟ್ಟರೆ ಯಾವೂದೇ ಅಡ್ಡ ಪರಿಣಾಮ ಬಾರದು ತೆಂಗಿನ ಅಡಿಕೆ ಮರಗಳಿಗೆ ಹೆಚ್ಚಾಗಿ ಅಂಟುವ ಈ ರೋಗದಿಂದ ಗಿಡಗಳ ಎಲೆಗಳು ಆಹಾರ ತಯಾರಿಸಲಾಗದೆ ಸೊರಗಿ ಒಣಗುತ್ತದೆ ಸರಿಯಾಗಿ ನೀರು ಬಿಡುವುದು ಮತ್ತು ಬೇವಿನೆಣ್ಣೆಯನ್ನು ನೀರಿಗೆ ಮಿಶ್ರಮಾಡಿ ಸಿಂಪಡಿಸುವುದರಿಂದ ನಿಯಂತ್ರಣ ಸಾಧ್ಯ ಈ ಕೀಟಗಳನ್ನು ತಡೆಯಲು ಹಳದಿ ಬಣ್ಣದ ಪೇಪರ್ ಅಥವಾ ರಟ್ಟನ್ನು ಹರಳೆಣ್ಣೆ ತಾಗಿಸಿ ತೆಂಗಿನ ಕಾಂಡ ಅಥವಾ ಎತ್ತರದ ಕೋಲು ಬಳಸಿ ನೇತಾಡಿಸಿದರೆ ಈ ಕೀಟ ಗಳು ಅದಕ್ಕೆ ಅಂಟಿಕೊಂಡು ಸಾಯುತ್ತವೆ. ಈ ರೋಗವನ್ನು ಶಾಶ್ವತವಾಗಿ ಹೋಗಲಾಡಿಸಲು ಬಿರು ಮಳೆಯೊಂದೇ ಪರಿಹಾರ ಎಂದರು.
ತೋಟಗಾರಿಕಾ ಇಲಾಖಾ ಉಪನಿರ್ದೇಶಕ ಯೋಗೀಶ್ ಎಚ್.ಆರ್. ಮಾತನಾಡಿ, ಈ ಸ್ಟಿಕಿ ಟ್ರ್ಯಾಪ್‌ನ್ನು(ಅಂಟು ಬಲೆ) ಸಾಂಕೇತಿಕವಾಗಿ ಇಬ್ಬರು ರೈತರಿಗೆ ನೀಡಲಾಗುವುದು.ಬೇಡಿಕೆ ಇದ್ದಲ್ಲಿ ತಲಾ ರೂ.22 ರಂತೆ ನೀಡಲಾಗುವುದು. ರೈತರೇ ಈ ಟ್ರ್ಯಾಪನ್ನು ತಯಾರಿಸಬಹುದು. ಇಲಾಖೆ ವತಿಯಿಂದ ಯಾವುದೇ ರಾಸಾಯನಿಕ ಬಳಸಲು ಪ್ರಚೋದನೆ ಮಾಡುವುದಿಲ್ಲ ಇದರಿಂದ ತೆಂಗಿನ ಎಳನೀರುಗಳಿಗೆ ವಿಷ ಪ್ರಾಶನವಾಗಿ ಅಪಾಯವಾಗುವ ಭೀತಿ ಇದೆ.ಅದರ ಬದಲು ಇತರ ಜೈವಿಕ ಹತೋಟಿ ಕ್ರಮಗಳನ್ನು ಮಾತ್ರ ರೈತರಿಗೆ ಹೇಳಲಾಗುವುದು ಎಂದರು.
ಸಂಸ್ಥೆಯ ಹಿರಿಯ ವಿಜ್ಞಾನಿ ಡಾ.ಚಂದ್ರಿಕಾ ಮೋಹನ್ ಮಾತನಾಡಿ, ಕೇರಳದ ಪಾಲಕ್ಕಾಡ್,ತ್ರಿಶೂರು ಹಾಗೂ ದಕ್ಷಿಣ ಕೇರಳಗಳಲ್ಲಿ ಈ ಬಾಧೆ ವ್ಯಾಪಕವಾಗಿ ಕಂಡುಬಂದಿದ್ದು,ತಾನಾಗಿಯೇ ಹತೋಟಿಗೆ ಬಂದಿದೆ.ರೋಗ ಬಾಧೆ ತೀವ್ರವಾಗಿದ್ದರೆ ಮಾತ್ರ ಬೇವಿನ ಎಣ್ಣೆಸ್ಪ್ರೇ ಮಾಡಿ ಹತೋಟಿಗೆ ತರಬಹುದು. ಸುರುಳಿಯಾಗಿ ಮೊಟ್ಟೆ ಇಡುವ ಈ ರೋಗ ಬಾಧೆಯಿಂದ ತೆಂಗು ಅಥವಾ ಹಣ್ಣುಹಂಪಲುಗಳಿಗೆ ಮಾರಕ ಬಾಧೆಯಿಲ್ಲ. ಕೇವಲ ಇಳುವರಿ ಮಾತ್ರ ಕುಂಠಿತವಾಗುತ್ತದೆ. ಸೊಪ್ಪು ತರಕಾರಿಗಳಿಗೆ ಸಮಸ್ಯೆಯಾಗುತ್ತದೆ. ಬೇಸಿಗೆ ಕಾಲದಲ್ಲಿ ಮಾತ್ರ ಕಂಡುಬರುವ ಈ ಕಾಯಿಲೆ ಈ ಬಾರಿ ಕೇರಳದಲ್ಲಿ ಮತ್ತೆ ಕಂಡುಬಂದು ಇದೀಗ ಕರಾವಳಿಗೂ ಲಗ್ಗೆ ಇಟ್ಟಿದೆ. ಜಿಲ್ಲೆಯ ಮೂಲ್ಕಿ ಮತ್ತು ಮೂಡಬಿದಿರೆಯಲ್ಲಿ ಕಂಡುಬಂದಿದ್ದು, ಮೂಲ್ಕಿಯಲ್ಲಿ ಅಧಿಕವಾಗಿ ಕಾಣಿಸಿಕೊಂಡಿದೆ.ಅದಕ್ಕೆ ಯಾವುದೇ ರಾಸಾಯನಿಕ ಸ್ಪ್ರೇ ಬಳಸುವ ಅಗತ್ಯವಿಲ್ಲ.ಇವು ಮರವನ್ನು ಕೊಲ್ಲುವುದಿಲ್ಲ.ಇಳುವರಿ ಮಾತ್ರ ಕಡಿಮೆಯಾಗುತ್ತದೆ ಎಂದವರು ಹೇಳಿದ್ದಾರೆ. ನೀರನ್ನು ಜೆಟ್ ಸ್ಪ್ರೇ ಮಾಡಬಹುದು: ಬಾಧೆ ಪೀಡಿತ ಗಿಡಗಳಿಗೆ ಕೇವಲ ನೀರನ್ನೂ ಸ್ಪ್ರೇ ಮಾಡಿ ರೋಗ ಹತೋಟಿಗೆ ತರಲು ಸಾಧ್ಯವಿದೆ ಬೇವಿನ ಎಣ್ಣೆ ನೀರಿಗೆ ಬೆರೆಸಿ ಸ್ಪ್ರೇ ಮಾಡಿದರೂ ಒಳ್ಳೆಯದು.ಎಲೆಗಳ ಮೇಲ್ಭಾಗದ ಕಪ್ಪು ಬಣ್ಣತೆಗೆಯಲು ಗಂಜಿ ನೀರನ್ನು(ಸ್ಟಾರ್ಚ್) ಸ್ಪ್ರೇ ಮಾಡಬಹುದು ಎಂದು ಹೇಳಿದ್ದಾರೆ.
ದಮ್ಮ ಮತ್ತು ಕೆಮ್ಮು: ಸ್ಥಳೀತ ಸಾರ್ವಜನಿಕರು ವಿಜ್ಞಾನಿಗಳಿಗೆ ಗಿಡಗಳ ಸ್ಯಾಂಪಲ್ ನೀಡಿ ಇತ್ತೀಚಿನ ದಿನಗಳಲ್ಲಿ ದಮ್ಮು ಹಾಗೂ ಕೆಮ್ಮು ಗುಣವಾಗುವುದೇ ಇಲ್ಲ ಹಿಂದೆ ಒಂದೆರಡು ಬಾರಿ ಮದ್ದು ತಂದರೆ ಗುಣ ಕಾಣಿಸುತ್ತಿತ್ತು ಆದರೆ ಈಗ ಅದು ಉಲ್ಬಣಗೊಳ್ಳುತ್ತದೆ ಎಂದು ದೂರಿದರು. ನಮ್ಮ ಹರಿವೆ ಹಾಗೂ ಬಸಳೆ ಸೊಪ್ಪು ಉಪಯೋಗಿಸಲು ಅಸಾಧ್ಯ ಸ್ಥಿತಿ ಉಂಟಾಗಿದೆ ಎಂದು ಸಾರ್ವಜನಿಕರು ಕೃಷಿ ವಿಜ್ಞಾನಿಗಳಿಗೆ ಮಾಹಿತಿ ನೀಡಿದರು. ಈ ಸಂದರ್ಭ ಮಾತನಾಡಿದ ವಿಜ್ಞಾನಿ ಡಾ.ವಿನಾಯಕ ಹೆಗ್ಡೆ , ಗಿಡದ ಎಲೆಯ ರಸ ಹೀರಿ ಈ ಹುಳುಗಳು ಶ್ರವಿಸುವ ಸಿಹಿ ವಸ್ತುವಿನ ಮೇಲೆ ಫಂಗಲ್ ತರಹದ ವಸ್ತು ಉತ್ಪನ್ನವಾಗುತ್ತಿದ್ದು ಅವನ್ನು ತಿನ್ನಲು ಜೈವಿಕ ಸರಣಿಯ ಕೀಟಗಳು ಪ್ರಕೃತಿಯಲ್ಲಿ ಬಹಳವಿದೆ ಆದರೆ ಹುಳುಗಳ ಸಂಖ್ಯೆ ಅಧಿಕವಾದರೆ ಮಾತ್ರ ಈ ಫಂಗಲ್‌ಗಳು ಗಾಳಿಯಲ್ಲಿ ಮಿಶ್ರಣಗೊಂಡು ಅಲರ್ಜಿ ಕೆಮ್ಮು ಮುಂತಾದ ಸಮಸ್ಯೆಗೆ ಕಾರಣವಾಗಬಹುದು ಎಂದರು.
ಈಸಂದರ್ಭ ತೋಟಗಾರಿಕಾ ಇಲಾಖೆಯ ತಾಲೂಕು ಸಹಾಯಕ ನಿರ್ದೇಶಕಿ ಸೀಮಾ,ಕೇಂದ್ರೀಯ ಸಂಶೋಧನಾ ಸಂಸ್ಥೆಯ ಕೀಟ ರೋಗ ತಜ್ಞೆ ಡಾ.ಪ್ರತಿಭಾ,ಕೃಷಿ ವಿಜ್ಞಾನ ಕೇಂದ್ರದ ವಿಷಯ ತಜ್ಞೆ ರಶ್ಮಿ,ಉಳ್ಳಾಲ ಗೇರು ಸಂಶೋಧನಾ ಕೇಂದ್ರದ ಕೀಟ ತಜ್ಞ ಶರತ್‌ಬಾಬು ಆಗಮಿಸಿದ್ದರು.
ಮೂಲ್ಕಿ ನಗರ ಪಂಚಾಯಿತಿ ಅಧ್ಯಕ್ಷ ಸುನಿಲ್ ಆಳ್ವ ಹಾಗೂ ಆರೋಗ್ಯಾಧಿಕಾರಿ ಲಿಲ್ಲಿ ನಾಯರ್ ಅಧಿಕಾರಿಗಳಿಗೆ ಸ್ಥಳದ ಮಾಹಿತಿ ನೀಡಿದರು.ಕಾರ್ನಾಡು ಧರ್ಮಸ್ಥಾನ ಬಾಧೆ ಪೀಡಿತ ಪ್ರದೇಶಗಳಲ್ಲಿ ಸುತ್ತಾಡಿದ ತಂಡವು ಸ್ಯಾಂಪಲ್ ಸಂಗ್ರಹಿಸಿ ಪರೀಕ್ಷೆಗಾಗಿ ಕೊಂಡೊಯ್ದರು.

Mulki-30031703 Mulki-30031704

Comments

comments

Comments are closed.

Read previous post:
Kinnigoli-22031701
ದಕ್ಷಿಣ ಆಫ್ರಿಕಾದಲ್ಲಿ ಪೈಲೆಟ್ ಊರಿನಲ್ಲಿ ದೈವಪಾತ್ರಿ

ಕಿನ್ನಿಗೋಳಿ: ಪೂರ್ವ ದಕ್ಷಿಣ ಆಫ್ರಿಕಾದಲ್ಲಿ ಆರಿಕ್ ಎರ್ (auric air) ವಿಮಾನ ಸಂಸ್ಥೆಯಲ್ಲಿ ಪೈಲೆಟ್ ಆಗಿದ್ದು ಆಧುನಿಕ, ಐಷಾರಾಮಿ ಶ್ರೀಮಂತ ಬದುಕು ಕಾಣುವ ಎಲ್ಲ ಅವಕಾಶಗಳಿರುವ ಇಪ್ಪತ್ತೊಂಭತ್ತರ ಹರೆಯದ...

Close