ಐಕಳ ಕಂಬಳ : ಜನರ ನಿರಾಶೆ

ಕಿನ್ನಿಗೋಳಿ: ಅವಿಭಜಿತ ದಕ್ಷಿಣಕನ್ನಡ ಉಡುಪಿ ಜಿಲ್ಲೆಯಾದ್ಯಂತ ಆಗಮಿಸುವ ನೂರಕ್ಕೂ ಅಧಿಕ ಜೋಡಿ ಕೋಣಗಳು, ಜಾತ್ರೆಯ ಸಡಗರ ಹಾಗೂ ಜನಜಂಗುಳಿ ಇದು ಕಂಬಳದಲ್ಲಿ ಕಾಣ ಸಿಗುವ ವೈಭವದ ಹಳ್ಳಿ ಸೊಗಡು.
ಇತಿಹಾಸ ಪ್ರಸಿದ್ದ ಐಕಳ ಕಾಂತಾಬಾರೆ ಬೂದಾಬಾರೆ ಜೋಡುಕರೆ ಕಂಬಳ ನೂರಾರು ವರ್ಷಗಳಿಂದ ಸಂಪ್ರದಾಯದಂತೆ ನಡೆಯುತ್ತಿತ್ತು. ಆದರೆ ಕೋರ್ಟ್ ತಡೆ ಹಾಗೂ ರಾಷ್ಟ್ರಪತಿಗಳ ಅಂಕಿತ ಮುದ್ರೆ ಬೀಳದೆ ಇದ್ದುದರಿಂದ ಶನಿವಾರ ಐಕಳ ಕಂಬಳ ಸಂಪ್ರದಾಯಿಕವಾಗಿಯೂ ನಡೆಯದೆ ಗ್ರಾಮೀಣ ಕೃಷಿ ಬದುಕಿನ ಕೃಷಿಕರ ಮತ್ತು ಜನರ ಮನದಾಳದಲ್ಲಿ ನಿರಾಶೆ ಮೂಡಿಸಿತ್ತು.
ಧಾರ್ಮಿಕ ನಂಬಿಕೆಯ ಹಾಗೂ ಕೇವಲ ಸಂಪ್ರದಾಯಿಕವಾಗಿ ನಡೆಸಲು ಶನಿವಾರ ಉದ್ದೇಶಿಸಲಾಗಿದ್ದು ಕೆಲವು ಜನರು ಜಿಲ್ಲಾಡಸಳಿತಕ್ಕೆ ನೀಡಿದ ದೂರು ಹಾಗೂ ಅಧಿಕಾರಿಗಳ ವಿರೋಧದಿಂದ ಕಂಬಳ ರದ್ದಾಗಿದೆ. ಸ್ಥಳಕ್ಕೆ ಮುಲ್ಕಿ ವಿಶೇಷ ತಹಶೀಲ್ದಾರರು, ಗ್ರಾಮಕರಣಿಕರು, ಪಶು ವೈದ್ಯರು, ಪೋಲಿಸರು ಮತ್ತಿತರ ಅಧಿಕಾರಿಗಳು ಭೇಟಿ ನೀಡಿ ಕೋರ್ಟ್ ಆದೇಶದಂತೆ ಕಂಬಳ ನಡೆಸದಂತೆ ಸಂಘಟಕರಿಗೆ ಸೂಚಿಸಿದ್ದರು. ಇದಕ್ಕೊಪ್ಪಿದ ಸಂಘಟಕರು ಕಂಬಳದ ಕರೆಯ ಬಳಿ ಒಂದು ಜತೆ ಜಟ್ಟಿ ಕೋಣಗಳನ್ನು ತಂದು ಪೂಜೆ ಸಲ್ಲಿಸಿ ಕಂಬಳ ಕಾರ್ಯಕ್ರಮವನ್ನು ಕೊನೆಗೊಳಿಸಿದರು.

ಈ ಸಂದರ್ಭ ಐಕಳ ಕಾಂತಾಬಾರೆ ಬೂದಾಬಾರೆ ಕಂಬಳ ಸಮಿತಿ ಐಕಳ ಕಾರ್ಯಾಧ್ಯಕ್ಷ ಐಕಳ ಬಾವ ಡಾ. ದೇವಿಪ್ರಸಾದ್ ಶೆಟ್ಟಿ, ಸಂಚಾಲಕ ಮುರಳೀಧರ ಶೆಟ್ಟಿ, ಕಾರ್ಯದರ್ಶಿ ಚಿತ್ತರಂಜನ್ ಭಂಡಾರಿ, ಜಗದೀಶ ಅಧಿಕಾರಿ, ಅದಾನಿ ಮತ್ತು ಉಡುಪಿ ಪವರ್ ಕಾರ್ಪೋರೇಶನ್ ಆಡಳಿತ ನಿರ್ದೇಶಕ ಕಿಶೋರ್ ಆಳ್ವ, ಪ್ರಕಾಶ್ ಶೆಟ್ಟಿ ಪಡುಹಿತ್ಲು, ಕೃಷ್ಣ ಮಾರ್ಲ, ಐಕಳ ಜಯಪಾಲ ಶೆಟ್ಟಿ, ಲೀಲಾಧರ ಶೆಟ್ಟಿ, ಶಶಿಧರ ಐಕಳ, ಸಂಜೀವ ಶೆಟ್ಟಿ ಸ್ಥಳಂತಗುತ್ತು, ಅಶೋಕ್ ಶೆಟ್ಟಿ, ಲೋಕನಾಥ ಶೆಟ್ಟಿ, ಉಪತಹಶೀಲ್ದಾರ ನಿತ್ಯಾನಂದ ದಾಸ್, ಗ್ರಾಮ ಕರಣಿಕ ಮಂಜುನಾಥ, ಪಶುವೈದ್ಯಾಧಿಕಾರಿ ಡಾ. ಸತ್ಯಶಂಕರ್ ಮತ್ತಿತರರು ಉಪಸ್ಥಿತರಿದ್ದರು.
ಮೂಲ್ಕಿ ಪೋಲೀಸ್ ನಿರೀಕ್ಷಕ ಅನಂತಪದ್ಮನಾಭ ನೇತ್ರತ್ವದಲ್ಲಿ ಸೂಕ್ತ ಬಂದೋಬಸ್ತು ಮಾಡಲಾಗಿತ್ತು.
ಸಾಂಪ್ರದಾಯಿಕ ಕಂಬಳದಲ್ಲಿ ಕುಟುಂಬದ ನಾಗದೇವರ ಸನ್ನಿಧಿಯಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮ, ದೈವಗಳಿಗೆ ವಿಶೇಷ ಪೂಜೆ ಸಲ್ಲಿಸಿ ಎರು ಬಂಟ ಕೋಲದೊಂದಿಗೆ ಕರೆಯ ಬಳಿ ಬಂದು ಮನೆಯ ಜಟ್ಟಿ ಕೋಣಗಳನ್ನು ಓಡಿಸುವ ಕ್ರಮ ಇದ್ದು ಶನಿವಾರ ಯಾವ ಕಟ್ಟು ಕಟ್ಟಳೆ ಕ್ರಮವೂ ನಡೆಸಲಾಗಿಲ್ಲ. ಕಾಕತಾಳೀಯ ಎಂಬಂತೆ ಕುಟುಂಬದಲ್ಲಿ ಸೂತಕವೂ ಬಂದ ಕಾರಣ ಕಂಬಳದ ರೀತಿ ರಿವಾಜುಗಳು ನಡೆಯಲಿಲ್ಲ. ಮುಂದಿನ ತಿಂಗಳು ಕೋರ್ಟ್ ತೆರವಿನ ಬಳಿಕ ಕಂಬಳ ನಡೆಯುವ ಸಾಧ್ಯತೆ ಇದೆ.

ನೂರಾರು ವರ್ಷಗಳಿಂದ ನಡೆದುಕೊಂಡು ಬರುತ್ತಿದ್ದ ಐಕಳ ಕಾಂತಾಬಾರೆ ಬೂದಾಬಾರೆ ಕಂಬಳಕ್ಕೆ ದೊಡ್ದ ಇತಿಹಾಸ ಆಧಾರ ಕುರುಹುಗಳಿವೆ. ಬ್ರಿಟೀಷ್ ಸರಕಾರದ ಆಡಳಿತ ಇದ್ದ ಕಾಲದಿಂದಲೂ ಕಂಬಳ ನಡೆಯುತ್ತಿದ್ದು ಕೋರ್ಟ್ ತಡೆಯಾಜ್ಜೆಯಿಂದಾಗಿ ಸಂಪ್ರದಾಯಿಕ ಕಂಬಳ ನಡೆಸಲು ಅಸಾಧ್ಯವಾಗಿವೆ. ಸರಕಾರ ಮಟ್ಟದಲ್ಲೂ ಕಂಬಳಕ್ಕೆ ಪೂರಕ ಭರವಸೆ ದೊರಕಿದ್ದು ರಾಷ್ಟ್ರಪತಿಗಳ ಅಂಕಿತ ಹಾಗೂ ಕೋರ್ಟ್ ತೆರವಿಗೆ ಕಾಯುತ್ತಿದ್ದೇವೆ. ಕಂಬಳ ಅಭಿಮಾನಿಗಳಿಗೆ ತುಂಬಾ ನಿರಾಸೆ ಆಗಿದೆ. ನಮ್ಮ ಕುಟುಂಬದ ಹಿರಿಯರು ದೈವಾಧೀನರಾಗಿದ್ದು ಸೂತಕದ ಛಾಯೆಯಿಂದ ಸಂದರ್ಭ ಧಾರ್ಮಿಕ ಕಾರ್ಯಕ್ರಮಗಳು ಕೂಡಾ ನಡೆಸುವ ಕ್ರಮ ಇಲ್ಲದ ಕಾರಣ ಸಂಪ್ರದಾಯಬದ್ದ ಕಂಬಳ ನಡೆಸಲಾಗಲಿಲ್ಲ. ಸಂಪ್ರದಾಯವನ್ನು ಮುರಿಯಲು ಸಾದ್ಯವಿಲ್ಲ, ಕಂಬಳವನ್ನು ತಾತ್ಕಾಲಿಕವಾಗಿ ಮುಂದೂಡಿ ಮುಂದಿನ ತಿಂಗಳು ನಡೆಸುತ್ತೇವೆ.
ಐಕಳ ಬಾವ ಡಾ. ದೇವಿಪ್ರಸಾದ್ ಶೆಟ್ಟಿ
ಕಾರ್ಯಾಧ್ಯಕ್ಷರು ಕಾಂತಾಬಾರೆ ಬೂದಾಬಾರೆ ಕಂಬಳ ಸಮಿತಿ ಐಕಳ

Kinnigoli-25031701 Kinnigoli-25031702 Kinnigoli-25031703 Kinnigoli-25031704

Comments

comments

Comments are closed.

Read previous post:
ಮಾ.26: ತೋಕೂರು ಸತ್ಯನಾರಾಯಣ ಪೂಜೆ

ಕಿನ್ನಿಗೋಳಿ: ಹಳೆಯಂಗಡಿ ಸಮೀಪದ ತೋಕೂರು ಯುವಕ ಸಂಘ ಮತ್ತು ಮಹಿಳಾ ಮಂಡಳಿಯ ಜಂಟಿ ಆಶ್ರಯದಲ್ಲಿ ತೋಕೂರು ಶ್ರಿ ಸುಬ್ರಹ್ಮಣ್ಯ ಮಹಾಗಣಪತಿ ದೇವಳದ ವಠಾರದಲ್ಲಿ ಮಾ.26 ಭಾನುವಾರ ಸಂಜೆ 5ಕ್ಕೆ...

Close