ಯಕ್ಷಗಾನಕ್ಕೆ ಒತ್ತು ಕೊಟ್ಟ ಪಾವಂಜೆ ಬ್ರಹ್ಮರಥೋತ್ಸವ

ಕಿನ್ನಿಗೋಳಿ : ಬ್ರಹ್ಮರಥದಲ್ಲಿ ಯಕ್ಷಗಾನ ಪ್ರತಿಕೃತಿಗಳ ಅನಾವರಣ, ರಥದ ಸುತ್ತಲೂ ಯಕ್ಷಗಾನದ ಉಬ್ಬುಶಿಲ್ಪಗಳು, 18 ಕಲಾವಿದರಿಂದ ರಥ ರಚನೆ

ಕರ್ನಾಟಕದ ಕರಾವಳಿ ಜಿಲ್ಲೆಗಳು (ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ), ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಯಕ್ಷಗಾನವು ಮನೆ ಮಾತಾಗಿದೆ.ನಮ್ಮ ಸಂಸ್ಕೃತಿ, ಆಚರಣೆ ಮತ್ತು ಸಂಪ್ರದಾಯವನ್ನು ಮೈವೆತ್ತಿದಂತಿರುವ ಯಕ್ಷಗಾನ ಕಲೆ ನಮ್ಮ ನಾಡಿನ ವಿಶೇಷತೆಗಳಲ್ಲೊಂದು. ಯಕ್ಷಗಾನ ಒಂದು ಶಾಸ್ತ್ರೀಯ ಕಲೆ. ಕರಾವಳಿ ಜಿಲ್ಲೆಗಳಾದ ಉತ್ತರಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಹಾಗೂ ಶಿವಮೊಗ್ಗ, ಚಿಕ್ಕಮಗಳೂರು, ಕಾಸರಗೋಡು ಜಿಲ್ಲೆಗಳಲ್ಲಿ ಪ್ರಚಲಿತವಿರುವ ಯಕ್ಷಗಾನ ಇಲ್ಲಿನ ಜನರ ಜೀವನಾಡಿ.

ಯಕ್ಷಗಾನದ ಕ್ಷೇತ್ರಕ್ಕೆ ವಿಶಿಷ್ಟ ಛಾಪು ಮೂಡಿಸಿದ ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಳದಲ್ಲಿ ತಾ. 18 ಮಂಗಳವಾರ ನಡೆಯಲಿರುವ ಬ್ರಹ್ಮರಥೋತ್ಸವದಲ್ಲಿ ರಥ ಯಕ್ಷಗಾನದ ಪರಿಕಲ್ಪನೆ ಮೂಡಿಸಲಿದೆ. ಯಕ್ಷಗಾನದ ಪ್ರತಿಕೃತಿಗಳು, ಮುಖವಾಡಗಳು, ರಂಗಸ್ಥಳದ ಪರಿಕಲ್ಪನೆಯ ಬಾಗಿಲುಗಳು ಹೀಗೆ ಹಲವಾರು ಶೈಲಿಯನ್ನು ರಥದಲ್ಲಿ ಮೂಡಿಸಿ ಯಕ್ಷಗಾನದ ಬಗ್ಗೆ ಅರಿವು ಉಳಿಸಿ ಬೆಳೆಸುವ ಕಾರ್ಯದಲ್ಲಿ ತೊಡಗಿದ್ದು ಪಾವಂಜೆ ಸುಬ್ರಹ್ಮಣ್ಯ ದೇವರ ರಥೋತ್ಸವ ವೈಶಿಷ್ಠತೆಗೆ ಹೆಸರಾಗಲಿದೆ.

ಚಿಕ್ಕಮಗಳೂರಿನ ವೇದವಿಜ್ಞಾನ ಕೇಂದ್ರದ ಶ್ರೀ ಕೆ. ಎಸ್. ನಿತ್ಯಾನಂದ ಸ್ವಾಮಿಗಳ ಪರಿಕಲ್ಪನೆ ಹಾಗೂ ಮಾರ್ಗದರ್ಶನದಲ್ಲಿ ಕಲಾವಿದ ರವಿ ಹಳೆಯಂಗಡಿ ನೇತೃತ್ವದ ಯಕ್ಷವರ್ಣ ಕಲಾತಂಡದ 18 ಕಲಾವಿದರು ಸುಮಾರು ಒಂದು ತಿಂಗಳ ಕಾಲ ದುಡಿದು ಈ ಯಕ್ಷ ರಥವನ್ನು ನಿರ್ಮಿಸಿದ್ದು ಆಸಕ್ತಿ ಹೊಂದಿದವರಿಗೆ ಅಧ್ಯಯನಪೂರ್ಣವಾಗಲಿದೆ.

ಸಾಮಾನ್ಯವಾಗಿ ಬ್ರಹ್ಮ ರಥದ ಸುತ್ತಲೂ ಚಿತ್ರಪಟಗಳಿರುತ್ತವೆ. ಅಷ್ಟದಿಕ್ಪಾಲಕರು, ಆಯಾಯ ದೇವರಿಗೆ ಸಂಬಂಧಿಸಿದ ಗಣಗಳು ಹೀಗೆ ವಿವಿಧ ಮೂರ್ತಿ ಅಥವಾ ಚಿತ್ರಗಳಿರುತ್ತವೆ. ಅದೇ ರೀತಿ ಸುಬ್ರಹ್ಮಣ್ಯ ದೇವರ ಗಣಗಳನ್ನು ಯಕ್ಷಗಾನ ಶೈಲಿ ಪ್ರತಿಕೃತಿಯಲ್ಲಿ ನಿರ್ಮಿಸಿ ರಥದ ಸುತ್ತಲೂ ಕಟ್ಟುವ ಕೆಲಸ ಆಗಿದೆ.
ಐದು ಅಡಿ ಉದ್ದದ ಇಂದ್ರದ್ಯುಮ್ನ, ನರ, ಗರುಡ, ನಾಗ, ಮಹಾಪ್ರಭು, ಕಿನ್ನರ ಕಿಂಪುರುಷ, ಮಣಿಗ್ರೀವ ಹೀಗೆ ಯಕ್ಷಗಾನ ಪ್ರತಿಕೃತಿಗಳನ್ನು ನಾಜೂಕಾಗಿ ಪರಂಪರೆಯನ್ನು ಉಳಿಸಿಕೊಂಡು ನಿರ್ಮಿಸಲಾಗಿದೆ.
ಮೇಲ್ಭಾಗದಲ್ಲಿ ಇಪ್ಪತ್ತು ವೇಷಗಳ ಉಬ್ಬುಶಿಲ್ಪಗಳು, ಪರಂಪರೆಯ ಯಕ್ಷಗಾನ ಮುಖವರ್ಣಿಕೆಯಂತೆ ದೇವೇಂದ್ರ, ಶೃಂಗಿ, ಅರ್ಜುನ, ಶಶಿಪ್ರಭೆ, ಪ್ರಮೀಳೆ, ಹನುಮಂತ, ಅಭಿಮನ್ಯು, ರಕ್ತಬೀಜ, ಮತ್ಸ್ಯವಾಹನ, ಶುಂಭ, ನಿಶುಂಭ, ಪರಶುರಾಮ, ವೀರವರ್ಮ, ಜಾಂಬವ, ಅಶ್ವತ್ಥಾಮ ಹೀಗೆ ಸುಂದರವಾದ ಉಬ್ಬುಶಿಲ್ಪಗಳು ಅಧ್ಯಯನಶೀಲವಾಗಿವೆ. ಇತ್ತೀಚಿನ ದಿನಗಳಲ್ಲಿ ಯಕ್ಷಗಾನದಲ್ಲಿ ಇತ್ತೀಚಿಗೆ ವಿರಳವಾಗಿರುವ ಗೆಜ್ಜೆ, ಕಾಲ್ ಕಡಗ, ಕಾಲ್‌ದಿಂಬು, ಕಾಲ್ ಮುಳ್ಳು ಗಳನ್ನು ಮಾಡಲಾಗಿದೆ. ಶಿವಕುಮಾರ ಉಜಿರೆ ಅವರು ಉಬ್ಬುಶಿಲ್ಪಗಳನ್ನು ನಿರ್ಮಿಸಿ ಕೊಟ್ಟಿದ್ದಾರೆ. ಯಕ್ಷಗಾನದಲ್ಲಿ ಬಳಸುವ ಪಂಚವರ್ಣ ಬಣ್ಣಗಳಾದ ಕೆಂಪು, ಕಪ್ಪು, ಬಿಳಿ, ಹಸಿರು, ಹಳದಿ ಬಣ್ಣಗಳನ್ನೇ ರಥದಲ್ಲೂ ಉಪಯೋಗಿಸಲಾಗಿದ್ದು ರಥದ ಬಾಗಿಲುಗಳು ರಂಗಸ್ಥಳದ ಮಾದರಿಯನ್ನು ಹೋಲುತ್ತಿವೆ.

ಸುಬ್ರಹ್ಮಣ್ಯ ದೇವರಿಗೆ ಸಂಬಂಧಿಸಿದ ರಥವಾಗಿದ್ದರಿಂದ ಮಂತ್ರಿ, ಸೇನಾಧಿಪತಿ, ಭಕ್ತ ಮುಂತಾದ ಮೂರ್ತಿಗಳನ್ನು ರಚಿಸಲಾಗಿದೆ. ಯಕ್ಷಗಾನದ ವಿಗ್ರಹಗಳನ್ನು ಪರಂಪರೆಯಂತೆ ಅಧ್ಯಯನಪೂರ್ಣವಾಗಿರುವಂತೆ, ಮಾದರಿಯಂತೆ ಯಕ್ಷಗಾನದ ಮುಖವರ್ಣಿಕೆ ಹಾಗೂ ವಿಗ್ರಹಗಳನ್ನು ನಿರ್ಮಿಸಲಾಗಿದೆ. ಮಂಗಳವಾರದ ಬ್ರಹ್ಮರಥೋತ್ಸವ ವಿಶಿಷ್ಟವೆನಿಸಲಿದೆ.
– ವಿದ್ಯಾಶಂಕರ್, ಶ್ರೀ ಕ್ಷೇತ್ರ ಪಾವಂಜೆ.

ಸುಮಾರು ಒಂದು ತಿಂಗಳ ಶ್ರಮದಲ್ಲಿ ಯಕ್ಷವರ್ಣ ಸಂಸ್ಥೆಯ ಯಕ್ಷಗಾನ ಶೈಲಿಯ ಸ್ಮರಣಿಕೆ ಹಾಗೂ ಶಿರೋಭೂಷಣಗಳು ತಯಾರಿಯ ೧೮ ಜನರ ತಂಡ ಕಾರ್ಯ ನಿರ್ವಹಿಸಿದ್ದೇವೆ. ಇದೀಗ ರಂಗದಿಂದ ನಿರ್ಗಮಿಸುತ್ತಿರುವ ಪುರಾತನ ಶೈಲಿಯ ಯಕ್ಷಗಾನದ ಮುಖವರ್ಣಿಕೆ ಹಾಗೂ ವಸ್ತ್ರಾಭರಣಗಳನ್ನು ಪ್ರತಿಕೃತಿಗಳನ್ನು ನಿರ್ಮಿಸಿ ಜನರಿಗೆ ಮನದಟ್ಟುವಾಗುವಂತೆ ಪ್ರಯತ್ನ ಪಟ್ಟಿದ್ದೇವೆ
ರವಿ ಹಳೆಯಂಗಡಿ
ಯಕ್ಷವರ್ಣ ಸಂಸ್ಥೆ

ರಥ ಹಳೆಯದಾಗಿದ್ದರಿಂದ ಶ್ರೀ ಕೆ. ಎಸ್. ನಿತ್ಯಾನಂದ ಸ್ವಾಮಿಗಳ ಮಾರ್ಗದರ್ಶನದಂತೆ ಶಾಸ್ತ್ರೀಯವಾಗಿ ಬ್ರಹ್ಮ ರಥದಲ್ಲಿ ಪೂರ್ವಕಾಲದಲ್ಲಿ ಇದ್ದಂತಹ ದೇವರ ಪರಿವಾರಗಳ ಚಿತ್ರಪಟಗಳಿಗೆ ಯಕ್ಷಗಾನದ ರೂಪ ಕೊಡಲಾಗಿದೆ. ಯಕ್ಷಗಾನ ಉಬ್ಬು ಚಿತ್ರ ಹಾಗೂ ಪ್ರತಿಕೃತಿಗಳ ಸ್ವರೂಪಗಳು ಜೀವಂತಿಕೆಯ ಪಾತ್ರದಾರಿಗಳಂತೆ ನೈಜವಾಗಿ ಮೂಡಿಬಂದಿದೆ.

ಡಾ.ಯಾಜಿ ನಿರಂಜನ ಭಟ್
ಧರ್ಮದರ್ಶಿಗಳು
ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಳ

ಬ್ರಹ್ಮ ರಥದಲ್ಲಿ ಈ ರೀತಿಯ ಪ್ರಯೋಗ ವಿಶಿಷ್ಟವಾಗಿದೆ. ಕರಾವಳಿಯ ಯಕ್ಷಗಾನದ ವೇಷ ಭೂಷಣಗಳು ಹಾಗೂ ಕಲಾ ಸಂಪತ್ತು ಸರ್ವರಿಗೂ ತಿಳಿಯಲು ಇದು ಸಹಾಯಕವಾಗಿದೆ.

ಶಿವಕುಮಾರ ಉಜಿರೆ
ಉಬ್ಬುಶಿಲ್ಪಿ

Kinnigoli-18041701 Kinnigoli-18041702Kinnigoli-18041703 Kinnigoli-18041704

 

Comments

comments

Comments are closed.