ಶ್ರೀ ಭಗವತಿ ದೇವಳ ಸಸಿಹಿತ್ಲು ನಡಾವಳಿ

ಕಿನ್ನಿಗೋಳಿ: ಸಮುದ್ರ ತೀರದಲ್ಲಿರುವ ಐತಿಹಾಸಿಕ ಪ್ರಸಿದ್ಧ ಮುಕ್ಕ ಸಸಿಹಿತ್ಲು ಶ್ರೀ ಭಗವತಿ ದೇವಳದ ನಡಾವಳಿ ಮಹೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.
ಈ ಪ್ರಯುಕ್ತ ದೇವಳದಲ್ಲಿ ಭಜನಾ ಕಾರ್ಯಕ್ರಮ, ನಾಗತಂಬಿಲ, ಮಹಾಪೂಜೆ, ಅನ್ನ ಪ್ರಸಾದ ವಿತರಣೆ ಉರುಳುಸೇವೆ ಹಾಗೂ ಕಂಚಿಲು ಸೇವೆಗಳು ನಡೆದವು.
ಉರುಳು ಸೇವೆ ಜೊತೆಗೆ ಕಂಚಿಲು ಬಲಿ ಹಾಗೂ ಭಗವತಿ ಮಾತೆಯ ಮೂರ್ತಿ ಬಲಿಯೂ ಏಕಕಾಲದಲ್ಲಿ ನಡೆಯಿತು.

ಅನಾದಿ ಕಾಲದಲ್ಲಿ ಸಸಿಹಿತ್ಲಿಗೆ ಮಾತೆ ಭಗವತಿ ತನ್ನ ಸಹೋದರಿಯರ ಜೊತೆ ಬಂದಾಗ ಮೊದಲು ದೇವಿಯ ಬಾಯಾರಿಕೆ ನೀಗಿಸಿದವನು ಮೂರ್ತೆದಾರಿಕೆ ಮಾಡುತ್ತಿದ್ದ ಬಿಲ್ಲವ ತೀಯಾ ಸಮುದಾಯದ ಬಡವ, ಆತನ ಭಕ್ತಿಗೆ ಮೆಚ್ಚಿದ ದೇವಿ ಮುಂದೆ ತನ್ನ ಕ್ಷೇತ್ರದ ಸೇವೆ ಮಾಡುವ ಭಾಗ್ಯವನ್ನು ದೇವಿ ಆತನ ಸಮುದಾಯದವರಿಗೆ ನೀಡಿದರು. ಹೀಗಾಗಿ ಇಂದಿಗೂ ಸಸಿಹಿತ್ಲು ಕ್ಷೇತ್ರದ ಪೂಜಾ ಕೈಂಕರ್ಯ ನಡೆಸುವವರು ತೀಯಾ ಸಮುದಾಯದವರೇ ಆಗಿದ್ದಾರೆ.

ಕಂಚೀಲು ಸೇವೆ
ಮಕ್ಕಳ ಬಗ್ಗೆ ಯಾವುದೇ ರೀತಿಯ ಹರಕೆ ಹೊತ್ತವರು ಮಕ್ಕಳನ್ನು (ಗಂಡಾದರೆ ವರನಂತೆ ಹೆಣ್ಣಾದರೆ ವಧುವಿನಂತೆ ) ಸಿಂಗರಿಸಿ ನಡಾವಳಿ ದಿನ ಸೂರ್ಯ ಅಸ್ತನಾಗುವ ಹೊತ್ತಿಗೆ ಕ್ಷೇತ್ರಕ್ಕೆ ಕರೆತಂದು ಅಂಗಣದಲ್ಲಿ ಹೊಸ ಚಾಪೆ ಮೇಲೆ ಸ್ವಸ್ಥಿಕೆ ಇಟ್ಟು ದೀಪ ಹಚ್ಚಿ ಮಕ್ಕಳನ್ನು ಕುಳ್ಳಿರಿಸುತ್ತಾರೆ. ಹಾಗೂ ಸೂರ್ಯೊದಯದ ಹೊತ್ತಿಗೆ ಮಡಸ್ನಾನ ಮತ್ತು ಮೂರ್ತಿ ಬಲಿ ವೇಳೆ ಮಕ್ಕಳನ್ನು ಸಂಬಂಧದಲ್ಲಿ ಮಾವ ಬೀಳುವ ವ್ಯಕ್ತಿ ಎತ್ತಿ ಹಿಡಿದು ಕ್ಷೇತ್ರಕ್ಕೆ ಮೂರು ಸುತ್ತಿನ ಪ್ರದಕ್ಷಿಣೆ ಹಾಕುತ್ತಾರೆ. ಕಂಚಿಲು ಸೇವೆ ಹೆಚ್ಚಾಗಿ ಮಕ್ಕಳಿಗೆ ಮಾತ್ರ ಸೇವೆ ಮಾಡಿಸುತ್ತಾರೆ. ಮಡಸ್ನಾನ ಮತ್ತು ಮೂರ್ತಿ ಬಲಿ ವೇಳೆ ಮಕ್ಕಳನ್ನು ಎತ್ತಿ ಹಿಡಿದು ಕ್ಷೇತ್ರಕ್ಕೆ ಮೂರು ಸುತ್ತಿನ ಪ್ರದಕ್ಷಿಣೆ ಹಾಕಿ ತಮ್ಮ ಹರಕೆ ತೀರಿಸುತ್ತಾರೆ

ಉರುಳು ಸೇವೆ
ವಿಭಿನ್ನವಾದ ಉರುಳು ಸೇವೆಯು ಸಸಿಹಿತ್ಲು ಕ್ಷೇತ್ರದಲ್ಲಿ ನಡೆಯುತ್ತಿದೆ. ದೇವಳದಲ್ಲಿ ನಡೆಯುವ ಉರುಳು ಸೇವೆ ದೇವಳದ ಪ್ರಾಂಗಣದ ಒಳಗೆ ಪ್ರಾಕೃತಿಕವಾಗಿ ಇರುವ ಮರಳ ಮೇಲೆ ನಡೆಯುತ್ತದೆ. ಕೇವಲ ಗಂಡಸರು ಮಾತ್ರ ಮಾಡುತ್ತಾರೆ. ಉರುಳು ಸೇವೆ ಮಾಡುವವರು ನಡಾವಳಿ ಜಾತ್ರೆಯ ಎರಡು ದಿನ ಮುನ್ನ ಒಪ್ಪೊತ್ತಿನ ಊಟವನ್ನು ಮಾಡಿ ವ್ರತ ಆಚರಣೆ ನಡೆಸುತ್ತಾರೆ. ನಡಾವಳಿ ದಿನ ಮುಂಜಾನೆ ಸೂರ್ಯೋದಯಕ್ಕೆ ಮುನ್ನ ಯಾವುದೇ ಜಾತಿ ಮತ ಪಂಥ ಪಂಗಡಗಳ ಬೇದವಿಲ್ಲದೆ ದೇವಳದ ತೀರ್ಥ ಪ್ರೋಕ್ಷಣೆ ಮಾಡಿಸಿ ಅಂಗಣಕ್ಕೆ ಬಂದು ಕ್ಷೇತ್ರಕ್ಕೆ ಮೂರು ಸುತ್ತು ಉರುಳು ಸೇವೆ ಮಾಡುತ್ತಾರೆ. ಈ ಉರುಳು ಸೇವೆ ಮಾತ್ರ ಒಂದು ವಿಶಿಷ್ಠ ಸಂಪ್ರದಾಯ ನಂಬಿಕೆಯಾಗಿ ಇಂದಿಗೂ ಸಸಿಹಿತ್ಲು ಕ್ಷೇತ್ರದಲ್ಲಿ ನಡೆಯುತ್ತಿದೆ. ಕರಾವಳಿಯ ಪುಣ್ಯ ಕ್ಷೇತ್ರಗಳಲ್ಲಿ ಇಂತಹ ಸೇವೆ ಸಸಿಹಿತ್ಲು ಕ್ಷೇತ್ರದಲ್ಲಿ ಮಾತ್ರ ಕಂಡುಬರುತ್ತಿದೆ.
ಈ ಉರುಳು ಸೇವೆಯ ಜೊತೆಗಿನ ಇನ್ನೊಂದು ವಿಶೇಷ ಎಂದರೆ ಉರುಳು ಸೇವೆ ಜೊತೆಗೆ ಕಂಚಿಲು ಬಲಿ ಹಾಗೂ ಭಗವತಿ ಮಾತೆಯ ಮೂರ್ತಿ ಬಲಿಯೂ ಏಕಕಾಲದಲ್ಲಿ ನಡೆಯುತ್ತದೆ. ಕಂಚೀಲು ಮತ್ತು ಉರುಳು ಸೇವೆ ಹರಕೆ ಹೊತ್ತವರ ಅಭಿಲಾಷೆಯನ್ನು ದೇವಿ ಈಡೇರಿಸುತ್ತಾಳೆ ಎನ್ನುವ ನಂಬಿಕೆ ಇದೆ. ಈ ಕಾರಣದಿಂದಲೇ ಸಸಿಹಿತ್ಲು ನಡಾವಳಿಯ ಉರುಳು ಸೇವೆಗೆ ವರುಷ ವರುಷ ಭಕ್ತರ ಸಂಖ್ಯೆ ಅಕವಾಗುತ್ತಲೇ ಇದೆ.

Kinnigoli-20041701Kinnigoli-20041702Kinnigoli-20041703Kinnigoli-20041704Kinnigoli-20041705Kinnigoli-20041706

Comments

comments

Comments are closed.

Read previous post:
Kinnigoli19041707
ವಿವಿಧೋದ್ದೇಶ ನೂತನ ಶಾಖೆ ಉದ್ಘಾಟನೆ

ಕಿನ್ನಿಗೋಳಿ: ಕರಾವಳಿ ಜಿಲ್ಲೆಗಳಲ್ಲಿ ಸಹಕಾರಿ ಸಂಘಗಳಿಂದ ಮಧ್ಯಮ ಹಾಗೂ ಬಡ ವರ್ಗದ ಕುಟುಂಬಗಳಿಗೆ ಆರ್ಥಿಕ ಸಹಾಯ ಮತ್ತು ವ್ಯವಸ್ಥೆಗಳನ್ನು ನೀಡುತ್ತಿರುವುದರಿಂದ ಜನರಿಗೆ ತುಂಬಾ ಅನುಕೂಲವಾಗಿದೆ ಎಂದು ದಕ್ಷಿಣ ಕನ್ನಡ...

Close