ಎ.30-ಮೇ 5: ಬಪ್ಪನಾಡು ದೇವಳದಲ್ಲಿ ಶತಚಂಡಿಕಾಧ್ವರ ಮತ್ತು ಶ್ರೀದುರ್ಗೆಗೆ ಸ್ವರ್ಣಲೇಪಿತ ರಜತ ಕವಚ ಸಮರ್ಪಣೆ

ಮೂಲ್ಕಿ : ಬಪ್ಪನಾಡು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ನೇತೃತ್ವದಲ್ಲಿ ಬಪ್ಪನಾಡು ದೇವಳದ ಆಡಳಿತದ ಸಂಪೂರ್ಣ ಸಹಕಾರದೊಂದಿಗೆ ಲೋಕಕಲ್ಯಾಣಾರ್ಥವಾಗಿ ಬಪ್ಪನಾಡು ದೇವಳದ ಎದುರು ನಿರ್ಮಿಸಲಾದ ಬೃಹತ್ ಯಾಗಮಂಟಪದಲ್ಲಿ ಎಪ್ರಿಲ್ 30 ರಿಂದ ಮೇ 5 ರತನಕ ಶ್ರೀ ಶತಚಂಡಿಕಾಧ್ವರ ಮತ್ತು ಶ್ರೀ ದುರ್ಗೆಗೆ ಸ್ವರ್ಣಲೇಪಿತ ರಜತ ಕವಚ ಸಮರ್ಪಣೆಯ ವಿವಿಧ ಧಾರ್ಮಿಕ ವಿಧಿವಿಧಾನಗಳು ನಡೆಯಲಿದೆ.
ಶನಿವಾರ ದೇವಳದ ಸಭಾಂಗಣದಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಸಮಿತಿಯ ಅಧ್ಯಕ್ಷ ಚಂದ್ರಶೇಖರ ಸುವರ್ಣ ಈ ಬಗ್ಗೆ ಮಾಹಿತಿ ನೀಡಿದರು.
ಮೇ 5 ರಂದು ನಡೆಯುವ ಶ್ರೀ ಶತಚಂಡಿಕಾಧ್ವರವು ಕ್ಷೇತ್ರದ ತಂತ್ರಿ ಶಿಬರೂರು ಗೋಪಾಲಕೃಷ್ಣ ತಂತ್ರಿ,ಅರ್ಚಕರಾದ ಕೃಷ್ಣದಾಸ ಭಟ್ ಮತ್ತು ಶ್ರೀಪತಿ ಭಟ್,ವಿದ್ವಾಂಸ ವಾದಿರಾಜ ಭಟ್ ಮತ್ತು ಕೃಷ್ಣದಾಸ ಎನ್.ಭಟ್ ನೇತೃತ್ವದಲ್ಲಿ ನಡೆಯಲಿದೆ ಎಂದವರು ತಿಳಿಸಿದ್ದಾರೆ.
9 ಮಾಗಣೆಯಲ್ಲದೆ ಇತರ ಪ್ರದೇಶದ ಲಕ್ಷಾಂತರ ಭಕ್ತರು ಈ ಪವಿತ್ರ ಕಾರ್ಯದಲ್ಲಿ ಭಾಗವಹಿಸಲಿದ್ದು,ಮಾಗಣೆಯ ಸುಮಾರು 32 ಗ್ರಾಮ ವ್ಯಾಪ್ತಿಯ 300 ಕ್ಕೂ ಅಧಿಕ ಸಂಘ ಸಂಸ್ಥೆಗಳು ಕಾರ್ಯಕ್ರಮದ ಸಮಿತಿಯಲ್ಲಿ ಸಹಭಾಗಿಗಳಾಗಿ ಭಾಗವಹಿಸುತ್ತಿವೆ.
ಶ್ರೀ ಮಾರ್ಕಾಂಡೇಯ ಪುರಾಣದಲ್ಲಿ ಉಲ್ಲೇಖಿಸಲಾದ ಶ್ರೀ ದೇವಿ ಮಹಾತ್ಮೆಯ 700 ಮಂತ್ರಮಯ ಶ್ಲೋಕಗಳ ಪಠಣದ ಮೂಲಕ ಭಕ್ತ ಜನರ ಮನೋಕಾಮನೆಗಳನ್ನು ಈಡೇರಿಸುವ ಶ್ರೀ ಶತಚಂಡಿಕಾಧ್ವರವು ಲೋಕಕಲ್ಯಾಣಾರ್ಥವಾಗಿ ಭಕ್ತಾಭೀಷ್ಠಫ್ರದಾತ್ರಿ ಶ್ರೀ ದುರ್ಗಾದೇವಿಯ ಪ್ರೀತ್ಯರ್ಥವಾಗಿ ಶೃದ್ಧಾಭಕ್ತಿಯಿಂದ ನಡೆಸಲಾಗುತ್ತಿದೆ.
ಬ್ರಾಹ್ಮರಾಧನೆ,ಸುವಾಸಿನಿ ಆರಾಧನೆ,ಮಹಾಅನ್ನಸಂತರ್ಪಣೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಯಾಗ ಸಂಪನ್ನಗೊಳ್ಳುವುದಲ್ಲದೆ ನಿತ್ಯವೂ ಧಾರ್ಮಿಕ ಸಭಾ ಚಿಂತನಾ ಪ್ರವಚನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.
100 ಬಾರಿ ಶ್ರೀ ಚಂಡಿಕಾ ಪಾರಾಯಣ ಮಾಡಿ ಅದಕ್ಕೆ ಅನುಸಾರವಾಗಿ ಪ್ರಾರ್ಥನೆ,ತರ್ಪಣ,ನಮಸ್ಕಾರ ಮುಂತಾದ ಕಾರ್ಯಕ್ರಮಗಳು ನಡೆದ ಬಳಿಕ ಯಾಗ ಕುಂಡದಲ್ಲಿ ಅಗ್ನಿ ಜನನ ಸಂಸ್ಕಾರ,ಶ್ರೀ ದೇವಿಗೆ ಸುಮಧುರ ದ್ರವ್ಯಗಳಿಂದ ಪರಮಾನ್ನ ದ್ರವ್ಯವನ್ನು 10 ಹೋತ್ರಗಳು ಏಕಕಾಲದಲ್ಲಿ ಸಪ್ತಪತಿ ಮಂತ್ರಗಳನ್ನು ಪಠಿಸುವ ಮೂಲಕ ಯಾಗಕ್ಕೆ ಆಹುತಿ ನಡೆಯುವುದು.ರಾತ್ರಿ ಶ್ರೀ ದೇವಿ ಸನ್ನಿಧಿಯಲ್ಲಿ ಮಹಾರಂಗಪೂಜೆ ನಡೆದು ಮಂಗಲ ಮಂತ್ರಾಕ್ಷತೆ ನಡೆಯಲಿದೆ.

ಹೊರೆ ಕಾಣಿಕೆ ಮೆರವಣಿಗೆ:

ಎ.30 ಮಧ್ಯಾಹ್ನ 3.30 ಕ್ಕೆ ಕಾರ್ನಾಡು ಗಾಂಧಿ ಮೈದಾನದಿಂದ ಬೃಹತ್ ಹೊರೆಕಾಣಿಕೆ ಮೆರವಣಿಗೆ ನಡೆಯಲಿದ್ದು, ಉದ್ಯಮಿ ಸಂದೇಶ್ ಶೆಟ್ಟಿ ಉದ್ಗಾಟಿಸಲಿರುವರು.
ಸಂಜೆ 7 ಗಂಟೆಗೆ ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿ ಭದ್ರದೀಪ ಪ್ರಜ್ವಲಿಸುವರು.ಪಟೇಲ್ ವೆಂಕಟೇಶ್ ರಾವ್‌ರವರು ಉಗ್ರಾಣ ಮುಹೂರ್ತ ನೆರವೇರಿಸಲಿರುವರು.

ಧಾರ್ಮಿಕ ಚಿಂತನಾ ಸಭೆ:

ಮೇ ಒಂದರಿಂದ ಯಾಗ ಮಂಟಪದಲ್ಲಿ ಧಾರ್ಮಿಕ ವಿಧಿವಿಧಾನಗಳು ನಡೆಯಲಿದ್ದು,ಸಂಜೆ ಸಭಾ ವೇದಿಕೆಯಲ್ಲಿ ಗಣ್ಯರು ಹಾಗೂ ವಿದ್ವಾಂಸರಿಂದ ಧಾರ್ಮಿಕ ಚಿಂತನಾ ಸಭೆ,ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.
ಮೂಲ್ಕಿಯ ಇತಿಹಾಸದಲ್ಲಿ ಮೊದಲ ಬಾರಿಗೆ ನಡೆಯುವ ಈ ಕಾರ್ಯದಲ್ಲಿ ಸುಮಾರು ಒಂದು ಲಕ್ಷಕ್ಕೂ ಅಧಿಕ ಭಕ್ತರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಸುವರ್ಣ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಪರವಾಗಿ ಹರಿಕೃಷ್ಣ ಪುನರೂರು, ದೇವಳದ ಅನುವಂಶಿಕ ಮೊಕ್ತೇಸರ ದುಗ್ಗಣ್ಣ ಸಾವಂತರು,ಆಡಳಿತ ಹಾಗೂ ಅನುವಂಶಿಕ ಮೊಕ್ತೇಸರ ಎನ್.ಎಸ್.ಮನೋಹರ ಶೆಟ್ಟಿ,ನಾಗೇಶ್ ಬಪ್ಪನಾಡು, ಸಂಜೀವ ದೇವಾಡಿಗ,ಮೂಲ್ಕಿ ನಪಂ ಅಧ್ಯಕ್ಷ ಸುನಿಲ್ ಆಳ್ವ ಉಪಸ್ಥಿತರಿದ್ದರು.

Comments

comments

Comments are closed.

Read previous post:
Kinnigoli-27041703
ಸುರಗಿರಿ – ಹೊರೆ ಕಾಣಿಕೆ ಮೆರವಣಿಗೆ

ಕಿನ್ನಿಗೋಳಿ : ಕಿನ್ನಿಗೋಳಿ ಸಮೀಪದ ಸುರಗಿರಿ ಶ್ರೀ ಮಹಾಲಿಂಗೇಶ್ವರ ದೇವಳದ ಬ್ರಹ್ಮಕಲಶೋತ್ಸವ ಮತ್ತು ವರ್ಷಾವಧಿ ಉತ್ಸವದ ಪ್ರಯುಕ್ತ, ಅಮ್ಮಣ್ಣಬೆಟ್ಟು ಕರೆ, ಅತ್ತೂರು ಗ್ರಾಮ, ಮತ್ತಿತರ ಕಡೆಗಳಿಂದ ಹೊರೆ ಕಾಣಿಕೆ...

Close