ಮೂಲ್ಕಿ ನಗರ ಪಂಚಾಯಿತಿ ಮಾಸಿಕ ಸಭೆ

ಮೂಲ್ಕಿ: ಮೂಲ್ಕಿ ಕೆ.ಎಸ್.ರಾವ್ ನಗರದ ಲಿಂಗಪ್ಪಯ್ಯ ಕಾಡು ಪ್ರದೇಶದಲ್ಲಿ ಅಕ್ರಮ ಚಟುವಟಿಕೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಮಹಿಳೆಯರು ಮತ್ತು ಹೆಣ್ಣು ಮಕ್ಕಳು ರಸ್ತೆಯಲ್ಲಿ ನಡೆಯಲೂ ಭಯಪಡುವ ವಾತಾವರಣ ನಿರ್ಮಾಣವಾಗಿದೆ ಎಂದು ನಗರ ಪಂಚಾಯಿತಿ ವಿರೋಧ ಪಕ್ಷದ ನಾಯಕಿ ವಿಮಲಾ ಪೂಜಾರಿ ದೂರಿದರು.
ಮೂಲ್ಕಿ ನಗರ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಮಾಸಿಕ ಸಭೆಯಲ್ಲಿ ಮಾತನಾಡಿದರು. ಲಿಂಗಪ್ಪಯ್ಯಕಾಡಿನ ಜನನಿಬಿಡ ಪ್ರದೇಶದಲ್ಲಿ ಅವ್ಯಾಹತವಾಗಿ ಮಟ್ಕಾ, ಗಾಂಜಾ,ಜುಗಾರಿ, ಮನೆಮನೆಯಲ್ಲಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿದೆ ಅದು ಸಾಲದು ಎಂಬಂತೆ ಎರಡು ಬಾರ್ ವೈನ್ ಶಾಪ್ ವಕ್ಕರಿಸಿಕೊಂಡಿದೆ. ಶಾಲೆಯ ಮಕ್ಕಳು ಮದ್ಯ ತರಲು ಹೋಗುತ್ತಿರುವುದನ್ನು ಕಂಡಿದ್ದೇವೆ ಎಂದು ವಿಮಲಾ ಪೂಜಾರಿ ಆರೋಪಿಸಿದರು. ಈ ಪ್ರದೇಶದಲ್ಲಿ ನಡೆಯುವ ಅಕ್ರಮಗಳ ಬಗ್ಗೆ ಪೋಲೀಸರಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ ದೂರು ನೀಡಿದ ಸಂದರ್ಭ ಪೋಲೀಸರೇ ಅಕ್ರಮ ವ್ಯಕ್ತಿಗಳಿಗೆ ಮಾಹಿತಿ ನೀಡುತ್ತಾರೆ ಎಂದು ಆಕ್ರೋಷ ವ್ಯಕ್ತಪಡಿಸಿದರು.
ಬಿಜಾಪುರ ಕಾಲನಿಯಲ್ಲಿ ಒಮ್ಮೆಲೆ ಮೂರು ಬಾರ್‌ಗಳು ತಲೆಯೆತ್ತಿದ್ದು, ಯಾವದೋ ಸಂಘಟನೆಯ ಅರ್ಜಿಯ ಮೇರೆಗೆ ಅವರಿಗೆ ನಿರಪೇಕ್ಷಣಾ ಪತ್ರ ನೀಡಲಾಗಿದೆ.ನಪಂ ಯಾವ ಆಧಾರದ ಮೇಲೆ ಅವರಿಗೆ ಉದ್ಯಮ ಪರವಾನಗಿ ನೀಡಿದೆ ಎಂದು ವಿಮಲಾ ಪೂಜಾರಿ ಪ್ರಶ್ನಿಸಿದರು. ಇತ್ತೀಚೆಗೆ ಹಲವಾರು ಗೂಡಂಗಡಿಗಳು ತಲೆ ಎತ್ತಿ ಸಂಜೆ ಹೊತ್ತು ಮಹಿಳೆಯರಿಗೆ ನಡೆದಾಡಲು ಅಸಾಧ್ಯವಾಗಿದೆ ಈ ಬಗ್ಗೆ ಪ್ರತೀ ದಿನವೂ ಮಹಿಳೆಯರು ದೂರು ತೆಗೆದುಕೊಂಡು ನಮ್ಮ ಮನೆಗೆ ಬರುತ್ತಿದ್ದಾರೆ ಈ ಪ್ರದೇಶದ ಸದಸ್ಯರಾದ ನಮ್ಮನ್ನು ವಿಶ್ವಾಸಕ್ಕೆ ಪಡೆಯದೆ ಅನುಮತಿ ನೀಡಿರುವುದು ಅಕ್ಷಮ್ಯ ನಮಗೆ ಬೆಲೆ ಇಲ್ಲವೇ ಎಂದು ಸದಸ್ಯೆ ಕಲಾವತಿ ಪ್ರಶ್ನಿಸಿದರು. ನಪಂ ಮಾಸಿಕ ಸಭೆಯಲ್ಲೇ ಅವರ ಮನವಿಗೆ ಪರವಾನಗಿ ನೀಡಲಾಗಿದೆ. ಕಾನೂನು ಉಲ್ಲಂಘಿಸಿದರೆ ಸೂಕ್ತ ಕ್ರಮ ಕೈಗೊಳ್ಳೊಲು ಪೋಲೀಸರಿದ್ದಾರೆ ಸುನಿಲ್ ಆಳ್ವ ಉತ್ತರಿಸಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಮೂಲ್ಕಿ ಠಾಣಾ ಉಪನಿರೀಕ್ಷಕ ಚಂದ್ರಶೇಖರಯ್ಯ ಈ ಬಗ್ಗೆ ಸೂಕ್ತ ಮಾಹಿತಿ ನೀಡಿದಲ್ಲಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಆಶ್ವಾಸನೆ ನೀಡಿದರು.
ನಿರಂತರ ವಿದ್ಯುತ್ ಕಡಿತ: ಕಳೆದ ಒಂದು ತಿಂಗಳಿಂದ ಮೂಲ್ಕಿ ವ್ಯಾಪ್ತಿಯಲ್ಲಿ ಹಬ್ಬಹರಿದಿನಗಳಂದು ದಿನವಿಡೀ ವಿದ್ಯುತ್ ಇಲ್ಲ.ಇದೀಗ ಪ್ರತಿದಿನ ಹಗಲು ರಾತ್ರಿ ವಿದ್ಯುತ್ ಕಡಿತ ಮಾಡುತ್ತಿದ್ದಾರೆ.ಚೌತಿಯಂದು ಸಂಪೂರ್ಣ ವಿದ್ಯುತ್ ಕಡಿತ ಮಾಡಲಾಗಿದೆ ಈ ಬಗ್ಗೆ ನಪಂ ಸಂಭಂದಿತ ಇಲಾಖೆಗೆ ತಿಳಿಸಬೇಕು ಸದಸ್ಯ ಶೈಲೇಶ್ ಕುಮಾರ್ ಹಾಗೂ ವಿಮಲಾ ಪೂಜಾರಿ ಆಗ್ರಹಿಸಿದರು.
ನಪಂ ಅಧ್ಯಕ್ಷ ಸುನಿಲ್ ಆಳ್ವ ಉತ್ತರಿಸಿ, ಈ ಬಗ್ಗೆ ಈಗಾಗಲೇ ಮೂಲ್ಕಿ ಮೆಸ್ಕಾಂ ಎಸ್‌ಒ ರವರಿಗೆ ತಿಳಿಸಲಾಗಿದೆ.110ಕೆವಿ ಮುಖ್ಯ ಫೀಡರ್ ಸಮಸ್ಯೆಯ ಬಗ್ಗೆ ತಿಳಿಸಿದ್ದಾರೆ.ಮಂಗ ಮತ್ತು ನವಿಲು ಬಿದ್ದಕಾರಣ ಸಮಸ್ಯೆಯಾಗಿದೆ ಫೀಡರ್ ರಿಪೇರಿಯಲ್ಲಿದ್ದು ಸಮಸ್ಯೆ ಶೀಘ್ರ ಪರಿಹಾರವಾಗುವ ಭರವಸೆ ವ್ಯಕ್ತ ಪಡಿಸಿದ್ದಾರೆಂದು ಅವರು ಸಭೆಗೆ ತಿಳಿಸಿದರು.
ತ್ಯಾಜ್ಯ ತೆರಿಗೆ ಸಮಸ್ಯೆ: ನಗರ ವ್ಯಾಪ್ತಿಯ ವಸತಿ ಉಳ್ಳವರಿಗೆ ಮನೆ ತೆರಿಗೆಯೊಂದಿಗೆ ತ್ಯಾಜ್ಯ ತೆರಿಗೆ ಸಂಗ್ರಹ ಸರಿ. ಆದರೆ ತ್ಯಾಜ್ಯ ಸಂಗ್ರಹ ಮಾಡದ ಮನೆಗಳವರು ತೆರಿಗೆ ಪಾವತಿಸುವುದು ಸರಿಯೇ ಅದರಲ್ಲೂ ಬಡ ಜನರು ರೂ೧೫೦ ಮನೆ ತೆರಿಗೆ ಪಾವತಿಸಿದರೆ 300ರೂ ಹೆಚ್ಚುವರಿ ತ್ಯಾಜ್ಯ ತೆರಿಗೆ ಪಾವತಿಸಬೇಕಾಗುತ್ತದೆ ಈ ಮನೆಗಳಿಂದ ತೆರಿಗೆ ಪಡೆಯಬಾರದು.ತಪ್ಪಿದಲ್ಲಿ ಅವರಿಂದ ಕಸ ಸಂಗ್ರಹ ಮಾಡಬೇಕೆಂದು ಎಂದು ಸದಸ್ಯ ಉಮೇಶ್ ಮಾನಂಪಾಡಿ ಆಗ್ರಹಿಸಿದರು.
ಸರಕಾರೀ ಆದೇಶದಂತೆ ತ್ಯಾಜ್ಯ ತೆರಿಗೆ ಸಂಗ್ರಹ ಮಾಡಲಾಗುತ್ತಿದೆ.ಸಂಗ್ರಹದ ಹಣದಿಂದ ಕಸ ವಿಲೇವಾರಿ ಅಸಾಧ್ಯ.ಆದಾಗ್ಯೂ ಮುಂದಿನ ದಿನಗಳಲ್ಲಿ ಎಲ್ಲಾ ಮನೆಗಳಿಂದ ಕಸ ಸಂಗ್ರಹಕ್ಕೆ ಒತ್ತು ನೀಡಲಾಗುವುದು. ಅಲ್ಲದೆ ಕಸ ಸಂಗ್ರಹಕ್ಕೆ ಮತ್ತೆರಡು ವಾಹನ ಖರೀದಿ ಮಾಡಲಾಗುವುದು ಎಂದು ಸುನಿಲ್ ಆಳ್ವ ಉತ್ತರಿಸಿದರು.
ರೇಷನ್ ಕಾರ್ಡ್ ಸಮಸ್ಯೆ: ಹಿರಿಯ ನಾಗರಿಕರು ರೇಷನ್ ಪಡೆಯುವ ಸಂದರ್ಭ ಥಂಬ್ ಪಡೆಯಲು ಅಸಾಧ್ಯವಾಗುತ್ತಿದ್ದು, ರೇಷನ್ ಪಡೆಯಲಾಗುತ್ತಿಲ್ಲ. ಸಮಸ್ಯೆಯನ್ನು ಶೀಘ್ರ ಪರಿಹರಿಸುವಂತೆ ಸದಸ್ಯೆ ಮೀನಾಕ್ಷಿ ಬಂಗೇರ ಮನವಿ ಮಾಡಿದರು. ಆಹಾರ ಇಲಾಖೆಯ ಉಪ ತಹಶೀಲ್ದಾರ್ ರೇಷನ್ ಸಮಸ್ಯೆ ಪರಿಹಾರಕ್ಕಾಗಿ ಪ್ರತಿ ಶುಕ್ರವಾರ ನಾಡ ಕಛೇರಿಯಲ್ಲಿ ಲಭ್ಯರಿರುತ್ತಾರೆಂದು ಉತ್ತರಿಸಲಾಯಿತು.
ಶಾಲಾ ಕಾರ್ಯಕ್ರಮಗಳಿಗೆ ಸಹಾಯಧನ: ನಗರ ವ್ಯಾಪ್ತಿಯ ಶಾಲೆಗಳ ಕಾರ್ಯಕ್ರಮಕ್ಕೆ ನಪಂ ಸಹಾಯಧನ ನೀಡುವ ಬಗ್ಗೆ ವಿಸ್ತೃತ ಚರ್ಚೆ ನಡೆದು ಸಹಾಯಧನ ನೀಡಲು ಅಸಾಧ್ಯವೆಂದು ತೀರ್ಮಾನಿಸಲಾಯಿತು.
ಅಂಬೇಡ್ಕರ್ ಭವನ: ಮೂಲ್ಕಿಯಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಸಮಾಜಕಲ್ಯಾಣ ಇಲಾಖೆಯಿಂದ 12 ಲಕ್ಷ ರೂ. ಮಂಜೂರಾಗಿದ್ದು, ಕೆ.ಎಸ್.ರಾವ್ ನಗರದ ಹನುಮಂತ ಗುಡಿ ಸಮೀಪ ಲೈಬ್ರರಿ ಮತ್ತು ಸಮುದಾಯ ಭವನ ನಿರ್ಮಿಸಲು ಸಭೆ ಅನುಮೋದನೆ ನೀಡಿತು.
ಮೂಲ್ಕಿಯ ಕೊಲ್ನಾಡು ರಾಹೆ ೬೬ರ ಪಶ್ಚಿಮ ಬದಿಯಲ್ಲಿ ಖಾಸಗಿ ಜಾಹೀರಾತು ಕಂಪನಿ ಬಸ್ ತಂಗುದಾಣ ನಿರ್ಮಿಸಲು ಅನುಮತಿ ಕೋರಿದ್ದು, ಸಭೆ ಅನುಮತಿ ನೀಡಿತು.
ಅಧ್ಯಕ್ಷ ಸುನಿಲ್ ಆಳ್ವ ಅಧ್ಯಕ್ಷತೆಯಲ್ಲಿ ನಡೆದ ಮಾಸಿಕ ಸಭೆಯಲ್ಲಿ ಮುಖ್ಯಾಧಿಕಾರಿ ಇಂದು ಎಮ್. ಸ್ವಾಗತಿಸಿದರು.ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷರಾಜ್ ಶೆಟ್ಟಿ ಜಿಎಮ್ ವಂದಿಸಿದರು.

Kinnigoli-310817016

Comments

comments

Comments are closed.