ಮನೆ ತೆರಿಗೆ ವಸೂಲಾತಿಯಲ್ಲಿ ರಿಯಾಯಿತಿ ಬೇಡ

ಪಡುಪಣಂಬೂರು : ಮನೆ ತೆರಿಗೆಯನ್ನು ಪ್ರತಿಯೊಬ್ಬರು ಪಾವತಿಸಬೇಕಾಗಿರುವುದರಿಂದ ವಿದೇಶದಲ್ಲಿದ್ದವರಿಗೆ ಹಾಗೂ ಹೊರ ರಾಜ್ಯದಲ್ಲಿದ್ದವರಿಗೆ ಯಾವುದೇ ರೀತಿಯಲ್ಲಿ ರಿಯಾಯಿತಿ ನೀಡಬಾರದು, ಯಾವುದೇ ದಂಡ ಶುಲ್ಕ ಇಲ್ಲದೆ ಇರುವುದರಿಂದ ಇದನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಇದರಿಂದ ಆಡಳಿತ ಹಿನ್ನಡೆ ಆಗುತ್ತದೆ ಎಂದು ಗ್ರಾಮಸ್ಥರು ಆಗ್ರಹಿಸಿದರು.ಪಡುಪಣಂಬೂರು ಗ್ರಾಮ ಪಂಚಾಯತ್‌ನ ೨೦೧೬-೧೭ನೇ ಸಾಲಿನ ಜಮಾಬಂದಿ ಕಾರ್ಯಕ್ರಮವು ಸೆ.೧೨ರಂದು ಪಂಚಾಯತ್‌ನ ಸಭಾಂಗಣದಲ್ಲಿ ಅಧ್ಯಕ್ಷ ಮೋಹನ್‌ದಾಸ್ ಅವರ ಅಧ್ಯಕ್ಷತೆಯನ್ನು ನಡೆದಾಗ ಗ್ರಾಮಸ್ಥರು ಈ ಬಗ್ಗೆ ಪ್ರತಿಕ್ರಿಯಿಸಿ, ಆರ್ಥಿಕ ವರ್ಷದ ಲೆಕ್ಕ ಪತ್ರದ ಸಮಯದಲ್ಲಿ ಬಾಕಿ ಎಂದು ನಮೂದಾಗುತ್ತದೆ. ಯಾವುದೇ ಗ್ರಾಮಸ್ಥರು ಮನೆ ತೆರಿಗೆಯನ್ನು ಎರಡು ವರ್ಷಕ್ಕೆ ಮೂರು ವರ್ಷಕ್ಕೊಮ್ಮೆ ಕಟ್ಟುವುದು ಸರಿಯಲ್ಲ ಉಳಿದವರಂತೆ ವರ್ಷಂಪ್ರತಿ ಅವರೂ ಸಹ ಕಟ್ಟಲಿ ಅಥವ ಮುಂಗಡವಾಗಿ ಕಟ್ಟಲಿ ಎಂದು ಸಲಹೆ ನೀಡಿದರು. ಸಭೆಯಲ್ಲಿ ನೋಡೆಲ್ ಅಧಿಕಾರಿಯಾಗಿ ಚರ್ಚೆಗೆ ಮಧ್ಯೆ ಪ್ರವೇಶಿಸಿ, ಹೊರ ರಾಜ್ಯ ಅಥವ ವಿದೇಶದಲ್ಲಿದ್ದವರಿಗೆ ನೇರವಾಗಿ ಪಂಚಾಯತ್‌ನ ಖಾತೆಗೆ ಆನ್‌ಲೈನ್ ಮೂಲಕ ಜಮೆ ಮಾಡಲು ಸೂಚನೆ ನೀಡುವ ನೋಟೀಸ್ ನೀಡಿ ಇಲ್ಲದಿದ್ದಲ್ಲಿ ಪಂಚಾಯತ್‌ನ ಪ್ರಗತಿಗೂ ಹಿನ್ನಡೆ ಆಗುತ್ತದೆ ಎಂದು ಸೂಚನೆ ನೀಡಿ ಚರ್ಚೆಗೆ ತೆರೆ ಎಳೆದರು. ಸಭೆಯ ನೋಡೆಲ್ ಅಧಿಕಾರಿ ಜಿ.ಪಂ. ಸಹಾಯಕ ನಿರ್ದೇಶಕ ಗೋಪಾಲಕೃಷ್ಣ ಭಟ್ ಮಾತನಾಡಿ, ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಮಳೆಯ ಪ್ರಮಾಣ ಕುಸಿಯುತ್ತಿರುವುದರಿಂದ ಪ್ರತೀ ಗ್ರಾ.ಪಂ.ಗಳು ಜಲಧಾರೆಯ ಯೋಜನೆಯನ್ನು ಜಾರಿಗೆ ತರಲು ಜಿ.ಪಂ.ನಿಂದ ನಡೆಯುತ್ತಿದೆ. ಕೊಳವೆ ಬಾವಿಯೇ ಕುಡಿಯುವ ನೀರಿಗೆ ಪರಿಹಾರವಲ್ಲ ಬದಲಾಗಿ ಗ್ರಾಮದ ಸಣ್ಣ ತೊರೆಗಳಿಗೆ ಕಿಂಡಿಅಣೆಕಟ್ಟು, ಕೆರೆಯ ಅಭಿವೃದ್ಧಿಗೆ ಆದ್ಯತೆ ನೀಡಿ, ನರೇಗಾ ಯೋಜನೆಯಲ್ಲಿ ಮುಕ್ತವಾದ ಅವಕಾಶ ಇದೆ, ಕನಿಷ್ಠ ೫ ಮಳೆ ನೀರು ಕೊಯ್ಲು ಹಾಗೂ ಬೋರ್‌ವೆಲ್ ರಿಚಾರ್ಜ್‌ನ್ನು ರೂಪಿಸಿರಿ, ಕಿಂಡಿ ಅಣೆಕಟ್ಟಿಗೆ ಮರದ ಹಲಗೆಯ ಬದಲಾಗಿ ಸಿಮೆಂಟ್‌ನ ಹಲಗೆಯನ್ನು ಬಳಸುವ ವಿಧಾನವನ್ನು ಶೀಘ್ರದಲ್ಲಿಯೇ ಪುತ್ತೂರಿನಲ್ಲಿ ಪ್ರಾತ್ಯಕ್ಷಿಕೆಯ ಮೂಲಕ ಅಧಿಕಾರಿಗೆ ಮಾಹಿತಿ ನೀಡಲಾಗುವುದು ಎಂದರು.ಗ್ರಾಮದಲ್ಲಿ ಮಳೆ ನೀರು ಕೊಯ್ಲನ್ನು ಕಡ್ಡಾಯಗೊಳಿಸಬೇಕು, ನೂತನವಾಗಿ ನಿರ್ಮಾಣವಾಗುವ ಮನೆಯಲ್ಲಿಯೇ ಅನುಮತಿ ನೀಡುವಾಗ ಇದನ್ನು ಜಾರಿಗೆ ತಂದಾಗ ಸಾಧ್ಯವಿದೆ. ಮನೆ ತೆರಿಗೆಯಲ್ಲಿ ಎಲ್ಲರಿಗೂ ಸಮಾನವಾಗಿ ವಸೂಲಾತಿ ನಡೆಯಲಿ. ತೋಕೂರು ಕೊಳವೆ ಬಾವಿ ಇದ್ದರೂ ಅದಕ್ಕೆ ಪಂಪ್‌ನ್ನು ಅಳವಡಿಸಿ ಇಲ್ಲದಿದ್ದಲ್ಲಿ ಅದು ನಿಷ್ರ್ಕಿಯಗೊಳ್ಳುತ್ತದೆ. ಕರಾವಳಿ ಪ್ರಾಧಿಕಾರದಿಂದ ಪಂಚಾಯತ್ ಅವರಣದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸಿ ಎಂದು ಬೇಡಿಕೆಗಳು ಕೇಳಿ ಬಂದಿತು.ಕರಾವಳಿ ಪ್ರಾಧಿಕಾರದ ನಿರ್ದೇಶಕ ಸಾಹುಲ್ ಹಮೀದ್ ಕದಿಕೆ, ಜಿ.ಪಂ. ಸದಸ್ಯ ವಿನೋದ್‌ಕುಮಾರ್ ಬೊಳ್ಳೂರು, ತಾ.ಪಂ. ಸದಸ್ಯರಾದ ಜೀವನ್ ಪ್ರಕಾಶ್ ಕಾಮೆರೊಟ್ಟು, ಶರತ್ ಕುಬೆವೂರು, ಪಂಚಾಯತ್ ಉಪಾಧ್ಯಕ್ಷ ಸುರೇಖಾ ಕರುಣಾಕರ್, ಜಿ.ಪಂ. ಅಧಿಕಾರಿ ರೋಶ್ನಿ ಜಿ.ಪುತ್ರನ್, ಇಂಜಿನಿಯರ್ ಪ್ರಶಾಂತ್‌ಕುಮಾರ್ ಅಳ್ವಾ, ಪಂ.ಸದಸ್ಯರು ಉಪಸ್ಥಿತರಿದ್ದರು.ಪಂಚಾಯತ್‌ನ ಅಭಿವೃದ್ಧಿ ಅಧಿಕಾರಿ ಅರುಣ್ ಪ್ರದೀಪ್ ಡಿಸೋಜಾ ಸ್ವಾಗತಿಸಿ, ವಂದಿಸಿದರು, ಕಾರ್ಯದರ್ಶಿ ಲೋಕನಾಥ ಭಂಡಾರಿ ನಡಾವಳಿ ವಾಚಿಸಿದರು.

Padupanmboor-14091701

Comments

comments

Comments are closed.