ದಸರಾ- ದೀಪಾವಳಿ ವಿಶೇಷಾಂಕ

ಕಿನ್ನಿಗೋಳಿ : ಪುಸ್ತಕ ಪ್ರಕಾಶನ ಮತ್ತು ಪತ್ರಿಕೋದ್ಯಮದ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಕಿನ್ನಿಗೋಳಿಯ ಯುಗಪುರುಷ ಪತ್ರಿಕೆ ದೊಡ್ಡ ಕೊಡುಗೆ ನೀಡಿದೆ ಎಂದು ಪರ್ಯಾಯ ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಹೇಳಿದರು.
ಉಡುಪಿ ಶ್ರೀಕೃಷ್ಣಮಠ ಕನಕಮಂಟಪದಲ್ಲಿ ಶನಿವಾರ ಯುಗಪುರುಷ ಪತ್ರಿಕೆಯ ದಸರಾ- ದೀಪಾವಳಿ ವಿಶೇಷಾಂಕ ಅನಾವರಣಗೊಳಿಸಿ ಮಾತನಾಡಿದರು.
ಕಳೆದ 71 ವರ್ಷಗಳ ಹಿಂದೆ ದಿ| ಕೊ. ಅ. ಉಡುಪ ಅವರಿಂದ ಆರಂಭವಾದ ಯುಗಪುರುಷ ಮಾಸಪತ್ರಿಕೆಯ ಆರಂಭದಿಂದಲೂ ಪತ್ರಿಕೆಯನ್ನು ಓದುತ್ತಿರುವುದಾಗಿ ತಿಳಿಸಿದ ಪೇಜಾವರ ಶ್ರೀಪಾದರು, ಯುಗಪುರುಷ ಪ್ರಕಾಶನದ ಮೂಲಕ ಅನೇಕ ಸಾಹಿತಿಗಳ ಪುಸ್ತಕಗಳನ್ನು ಪ್ರಕಟಿಸುವ ಮೂಲಕ ಅನೇಕ ಹಿರಿ- ಕಿರಿಯ ಸಾಹಿತಿಗಳಿಗೂ ಈ ಸಂಸ್ಥೆ ಪ್ರೋತ್ಸಾಹ ನೀಡಿದೆ. ಕೊ. ಅ. ಉಡುಪರ ಕಾರ್ಯವನ್ನು ಅವರ ಪುತ್ರ ಭುವನಾಭಿರಾಮ ಉಡುಪ ಅವರು ಮುಂದುವರಿಸಿಕೊಂಡು ಬರುತ್ತಿರುವುದು ಸಂತಸದಾಯಕ ಎಂದು ಶ್ಲಾಘಿಸಿದರು.
ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ, ಕಸಾಪ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು, ಮಣಿಪಾಲ ವಿ. ವಿ. ವಿಶ್ರಾಂತ ಪ್ರಾಚಾರ್ಯ ಕೆ. ನಯನಾಭಿರಾಮ ಉಡುಪ, ಪೇಜಾವರ ಶ್ರೀಗಳ ಆಪ್ತ ಕಾರ್ಯದರ್ಶಿಗಳಾದ ವಿಷ್ಣು ಮತ್ತು ಸುಬ್ರಹ್ಮಣ್ಯ ಪೆರಂಪಳ್ಳಿ ಉಪಸ್ಥಿತರಿದ್ದರು.
ಯುಗಪುರುಷ ಪ್ರಧಾನ ಸಂಪಾದಕ ಕೆ. ಭುವನಾಭಿರಾಮ ಉಡುಪ ಸ್ವಾಗತಿಸಿ, ತಮ್ಮ ಸಂಸ್ಥೆಯ ವಿವಿಧ ಲೇಖಕರ ಮೂಲಕ 536 ಪುಸ್ತಕಗಳನ್ನು ಪ್ರಕಾಶಿಸಲಾಗಿದೆ. ಅದರಲ್ಲಿ ಈಚೆಗೆ ನಿಧನರಾದ ಶಿಶುಸಾಹಿತಿ ಪಳಕಳ ಸೀತಾರಾಮ ಭಟ್ಟರ 100 ಕ್ಕೂ ಮಿಕ್ಕಿದ ಮಕ್ಕಳ ಸಾಹಿತ್ಯ ಕೃತಿಗಳು ಸೇರಿವೆ ಎಂದರು.

Kinnigoli-021017028

Comments

comments

Comments are closed.

Read previous post:
Kinnigoli-021017027
ಹಿಂದೂ ರುದ್ರಭೂಮಿ ಉದ್ಘಾಟನೆ

ಕಿನ್ನಿಗೋಳಿ: ಸರಕಾರ, ಸಂಘ ಸಂಸ್ಥೆಗಳು ಹಾಗೂ ಊರ ಮಹನೀಯರು ಸಮಾಜ ಮುಖಿ ಕಾರ್ಯಗಳು ಮತ್ತು ಚಿಂತನೆಗಳಿಗೆ ಒಗ್ಗೂಡಿ ಶ್ರಮಿಸಿದಾಗ ಸಮಾಜ ಅಭಿವೃದ್ಧಿ ಪಥದತ್ತ ಸಾಗುವುದು ಎಂದು ಮುಲ್ಕಿ ಮೂಡಬಿದಿರೆ...

Close