ರಂಗಭೂಮಿಯಲ್ಲಿ ವಿಭಿನ್ನ ತುಳು ನಾಟಕ: ಬಿಲೆ ಕಟ್ಟರೆ ಆವಂದಿನ

ವಿಜಯಾ ಕಲಾವಿದರ ಬಿಲೆಕಟ್ಟರೆ ಆವಂದಿನ ನಾಟಕದ ಯಶಸ್ಸಿನ ಹಿಂದೆ ಪಟ್ಲ ಕಂಠ ಸಿರಿಯ ಸ್ಪರ್ಶ
ಕಿನ್ನಿಗೋಳಿ: ಕಳೆದೆರಡು ವರ್ಷಗಳಲ್ಲಿ ಯಶಸ್ವಿ ನಾಟಕಗಳಾದ ಲೆಕ್ಕ ತತ್ತಿ ಬೊಕ್ಕ ಹಾಗೂ ತೂಪಿನಾರೇ ಆಪಿನಾರ್ ತುಳು ನಾಟಕಗಳ ಮೂಲಕ ರಂಗಭೂಮಿಯಲ್ಲಿ ಯಶಸ್ಸಿನ ಉತ್ತುಂಗಕ್ಕೇರಿದ್ದ ಕಿನ್ನಿಗೋಳಿಯ ವಿಜಯಾ ಕಲಾವಿದರು ನಾಟಕ ತಂಡ ಈ ಬಾರಿ ಯಕ್ಷಗಾನ ಕಲಾವಿದನ ಬದುಕಿನ ಚಿತ್ರಣವನ್ನು ಬಿಂಬಿಸುವ ಸಂದೇಶ ಭರಿತ ನಾಟಕ ಬಿಲೆ ಕಟ್ಟರೆ ಆವಂದಿನ ದ ಮೂಲಕ ಮತ್ತೆ ಸುದ್ದಿ ಮಾಡಿದೆ.
ಪ್ರದರ್ಶನ ಕಂಡಲ್ಲೆಲ್ಲಾ ಸೂಪರ್ ಮಾರ್ರೇ ಎನ್ನುವ ಉದ್ಗಾರ ಕಲಾಭಿಮಾನಿಗಳಲ್ಲಿ ಕೇಳಿ ಬರುತ್ತಿದ್ದು ಈ ನಾಟಕದುದ್ದಕ್ಕೂ ಕೇಳಿಬರುವ ಪಟ್ಲ ಕಂಠ ಸಿರಿ ಈ ನಾಟಕದ ಅದ್ಬುತ ಯಶಸ್ಸಿನ ಹಿಂದಿನ ಪ್ಲಸ್ ಪಾಯಿಂಟ್.ಈಗಾಗಲೇ ತುಳು-ಕನ್ನಡ ಸಿನೇಮಾಗಳಲ್ಲಿ ಕೆಳಿ ಬರುತ್ತಿದ್ದ ಪಟ್ಲ ದ್ವನಿ ಈ ಬಾರಿ ವಿಜಯಾ ಕಲಾವಿದರ ಬಿಲೆ ಕಟ್ಟರೆ ಆವಂದಿನ ತುಳು ನಾಟಕದಲ್ಲಿಯೂ ವಿಭಿನ್ನವಾಗಿ ಕೇಳಿ ಬಂದಿದ್ದು ಎಲ್ಲಿಯೂ ಯಕ್ಷಗಾನದ ಆಶಯಗಳಿಗೆ ಧಕ್ಕೆಯಾಗದ ರೀತಿಯಲ್ಲಿ ಈ ಹಾಡುಗಳು ಬಳಕೆಯಾದದ್ದೂ ವಿಜಯಾ ಕಲಾವಿದರ ಕಲಾಪ್ರೌಢಿಮೆ ಹಾಗೂ ದೊಡ್ಡತನಕ್ಕೆ ಸಾಕ್ಷಿಯೆನಿಸಿದೆ.
ಈ ನಾಟಕದ ಅಭೂತ ಪೂರ್ವ ಯಶಸ್ಸಿನ ಹಿಂದೆ ತಂಡದ ಎಲ್ಲಾ ಕಲಾವಿದರ ಸರ್ವಾಂಗೀಣ ಪ್ರಯತ್ನದ ಹೊರತಾಗಿ ಯಕ್ಷಧ್ರುವ ಪಟ್ಲ ಫೌಂಡೇಶನ್‌ನ ಸಂಸ್ಥಾಪಕ ಯಕ್ಷಲೋಕದ ಮೇರು ಭಾಗವತ ಪಟ್ಲಗುತ್ತು ಸತೀಶ್ ಶೆಟ್ಟಿಯವರ ಕಂಠ ಸಿರಿಯೂ ಕಾರಣವೆಂದರೆ ಅತಿಶಯೋಕ್ತಿಯಲ್ಲ.ಈ ನಾಟಕದ ಸಮಗ್ರ ಧ್ವನಿಯಾಗಿರುವ ಯಕ್ಷಗಾನ ಕಲಾವಿದ ದಿಗಿಣ ದುಗ್ಗಪ್ಪ ಹಾಗೂ ಸದಾ ಯಕ್ಷಗಾನ ಕಲಿಯಬೇಕೆನ್ನುವ ತುಡಿತ ವ್ಯಕ್ತಪಡಿಸುವ ದುಗ್ಗಪ್ಪನ ಮೊಮ್ಮಗಳು ತನ್ವಿಯ ಪಾತ್ರಗಳಿಗೆ ಜೀವ ತುಂಬುವುದರ ಜತೆಗೆ ನಾಟಕ ಹಾಗೂ ಯಕ್ಷಗಾನ ಪ್ರೇಮಿಗಳನ್ನು ತುದಿಗಾಲಲ್ಲಿ ನಿಲ್ಲಿಸುವಂತೆ ಮಾಡುವುದೇ ಸತೀಶ್ ಪಟ್ಲರವರ ಕಂಠಸಿರಿಯ ಯಕ್ಷಗಾನದ ಹಾಡುಗಳು ಹಾಗೂ ಹಮ್ಮಿಂಗ್ಸ್‌ಗಳು.ಪ್ರಾರಂಭದಿಂದ ಅಂತ್ಯದವರೆಗೆ ಪಟ್ಲ ಧ್ವನಿ ಈ ನಾಟಕಕ್ಕೆ ಜೀವ ತುಂಬಿದೆ.ನಾಟಕದ ಅಂತ್ಯವೂ ಪಟ್ಲ ಫೌಂಡೇಶನ್‌ನ ಉದ್ದೇಶದ ಸಂದೇಶವನ್ನು ಸಾರುವುದನ್ನು ಕಂಡಾಗ ಯಕ್ಷಗಾನ ಹಾಗೂ ನಾಟಕ ಬೇರೆ ಬೇರೆಯಲ್ಲ ಎಂಬುವುದನ್ನು ಮತ್ತೆ ಸಾಬೀತು ಪಡಿಸಿದೆ.
ನಾಟಕ ರಚನೆಕಾರ ಹರೀಶ್ ಪಡುಬಿದ್ರಿಯವರು ಇಡೀ ನಾಟಕದುದ್ದಕ್ಕೂ ಯಕ್ಷಗಾನಕ್ಕೆ ಸಂಬಂಧಪಟ್ಟ ಭಾವನಾತ್ಮಕ ಸನ್ನ್ನಿವೇಶಗಳನ್ನು ಪೋಣಿಸಿದ ರೀತಿ ನಾಟಕದ ಮೂಲಕ ಯಕ್ಷಗಾನಕ್ಕೆ ಈ ರೀತಿ ನ್ಯಾಯ ಒದಗಿಸಲಾಗುತ್ತದೆಯೇ ಎನ್ನುವ ಪ್ರಶ್ನೆ ಹಾಗೂ ಪ್ರಶ್ನೆಗೆ ಉತ್ತರ ನೀಡಿ ರಂಗಾಸಕ್ತರಲ್ಲಿ ಮೂಡಿಸಿ ಯಕ್ಷಗಾನ ಕಲೆ ಬೆಲೆ ಕಟ್ಟಲಾಗದ್ದು ಎನ್ನುವುದನ್ನು ಸ್ಪಷ್ಠ ಮಾಡಿಕೊಡುತ್ತದೆ.
ಈ ಹಿಂದೆ ವಿಜಯಾ ಕಲಾವಿದರ ತಂಡದಲ್ಲಿ ಹಾಸ್ಯ ಕಲಾವಿದನಾಗಿ ಗಮನ ಸೆಳೆದಿದ್ದ ಭಗವಾನ್ ಸುರತ್ಕಲ್ ಈ ಬಾರಿ ಉಭಯತಿಟ್ಟುಗಳ ಕಲಾವಿದ ದಿಗಿಣ ದುಗ್ಗಪ್ಪನ ಪಾತ್ರವನ್ನು ಭಾವನಾತ್ಮಕವಾಗಿ ನಿರ್ವಹಿಸಿ ಇಡೀ ನಾಟಕಕ್ಕೆ ಜೀವ ತುಂಬಿದ್ದಾರೆ.ತಂಡಕ್ಕೆ ಈ ವರ್ಷ ಸೇರ್ಪಡೆಗೊಂಡ ಹೊಸ ಮುಖ ಪ್ರತಿಭಾವಂತ ಕಲಾವಿದ ನಿತೇಶ್ ಕಾಂತಾವರ ಕಥಾನಾಯಕ ರಜತ್‌ನ ಪಾತ್ರದಲ್ಲಿ ಆಮೋಘ ಅಭಿನಯ ನೀಡಿದರೆ, ವಿಜಯಾ ಕಲಾವಿದರ ಈ ಹಿಂದಿನ ನಾಟಕಗಳಲ್ಲಿ ಕಥಾ ನಾಯಕಿಯಾಗಿ ಗಮನ ಸೆಳೆವ ಪಾತ್ರ ನಿರ್ವಹಿಸಿದ್ದ ಚಿತ್ರಲೇಖಾ ಭಗವಾನ್ ಈ ನಾಟಕದಲ್ಲಿಯೂ ಕಥಾನಾಯಕಿ ಖುಷಿಯ ಪಾತ್ರದಲ್ಲಿ ಖುಷಿ ನೀಡುವ ಪರಿಪೂರ್ಣ ನಿರ್ವಹಣೆ ನೀಡಿದ್ದಾರೆ.
ಉಳಿದಂತೆ ಕಥಾ ಬಾಗದಲ್ಲಿ ಅದ್ಬುತ ಪಾತ್ರ ನಿರ್ವಹಣೆ ತೋರಿದವರು ಪತ್ರಕರ್ತ ನರೇಂದ್ರ ಕೆರೆಕಾಡು.ಐದು ಯಕ್ಷಗಾನ ಮೇಳಗಳ ಯಜಮಾನ ಭವಾನಿಶಂಕರನ ಪಾತ್ರದಲ್ಲಿ ತನ್ನ ವ್ಯಂಗ್ಯ ಡೈಲಾಗ್‌ಗಳ ಮೂಲಕ ರಂಗದಲ್ಲಿ ಸಂಚಲನ ಮೂಡಿಸುವ ಪರಿ ಅವರ ಈ ಹಿಂದಿನ ನಾಟಕಗಳಿಗಿಂತಲೂ ವಿಭಿನ್ನವಾಗಿ ಗೋಚರಿಸಿ ಯಾವ ಪಾತ್ರಗಳನ್ನೂ ತಮ್ಮದೇ ಶೈಲಿಯಲ್ಲಿ ನಿರ್ವಹಿಸಬಲ್ಲರು ಎಂಬುವುದನ್ನು ಮತ್ತೆ ತೋರಿಸಿಕೊಟ್ಟಿದ್ದಾರೆ.
ತೂಪಿನಾರೇ ಆಪಿನಾರ್ ನಾಟಕದಲ್ಲಿ ಮಾರ್ಮಿಕ ಆಭಿನಯ ನೀಡಿ ಗಮನ ಸೆಳೆದಿದ್ದ ನಿತಿನ್ ಕಟೀಲ್ ಈ ನಾಟಕದಲ್ಲಿ ಡಾ.ನವೀನ್‌ನ ಪಾತ್ರ ನಿರ್ವಹಿಸಿ ಕಥೆ ಹಾಗೂ ಹಾಸ್ಯ ವಿಭಾಗಗಳೆರಡರಲ್ಲೂ ಸಮನ್ವಯತೆಯ ಅಭಿನಯ ನೀಡಿದ್ದಾರೆ.
ಭಗವಾನ್ ಸುರತ್ಕಲ್ ಹಾಗೂ ಚಿತ್ರಲೇಖಾರ ಪುತ್ರಿ ಬಾಲ ಕಲಾವಿದೆ ಬೇಬಿ ಮಂಜೂಷಾ ಸುರತ್ಕಲ್ ಯಕ್ಷಗಾನದ ತುಡಿತವುಳ್ಳ ಖುಷಿ ಹಾಗೂ ರಜತ್‌ರ ಪುತ್ರಿ ತನ್ವಿಯ ಪಾತ್ರದಲ್ಲಿ ಯಕ್ಷಗಾನದ ಹೆಜ್ಜೆಗಾರಿಕೆ, ನೃತ್ಯ ಹಾಗೂ ಭಾವನಾತ್ಮಕ ಸನ್ನ್ನಿವೇಶಗಳ ಜತೆ ನಾಟಕದ ಜವಾಳವೆನಿಸಿದ್ದಾರೆ.
ಹಾಸ್ಯ ವಿಬಾಗದಲ್ಲಿ ಇತರ ನಾಟಕಗಳಿಗಿಂತಲೂ ವಿಭಿನ್ನವಾಗಿ ಆಭಿನಯಿಸಿದ ಹಿರಿಯ ಕಲಾವಿದ ಸೀತಾರಾಮ ಶೆಟ್ಟಿ ಎಳತ್ತೂರು ಮುಂಗುಸಿ ನಿವಾಸದ ಮುಚುಕುಂದನಾಗಿ ಕಲಾಭಿಮಾನಿಗಳ ಮನದಲ್ಲಿ ನಿರಂತರ ನಗೆಯ ವಾತಾವರಣ ಸೃಷ್ಠಿಸುತ್ತಾರೆ.ನಾಟಕ ರಚನೆಕಾರ ಹರೀಶ್ ಪಡುಬಿದ್ರಿ ನಾಗನಿಲಯದ ಮಕರಂದನಾಗಿ ಸೀತಾರಾಮ ಶೆಟ್ಟಿಯವರ ಜತೆ ಅದ್ಬುತ ಕಾಮಿಡಿ ಪಂಚ್‌ಗಳನ್ನು ನೀಡಿ ಹಾಸ್ಯದ ಹೊನಲು ಸೃಷ್ಠಿಸಿದ್ದಾರೆ.ಮುಚುಕುಂದನ ಪತ್ನಿಯಾಗಿ ಅಭಿನಯಿಸಿದ ಹೊಸ ಹುಡುಗಿ ಕಾಲೇಜು ವಿದ್ಯಾರ್ಥಿನಿ ಸುಶ್ಮಿತಾ ಏಳಿಂಜೆ ಬ್ಯೂಟಿ ಪಾರ್ಲರ್ ಮಾಲಕಿ ಚಂದ್ರಮತಿಯಾಗಿ, ಮಕರಂದನ ಪತ್ನಿ ಭಾನುಮತಿಯಾಗಿ ರಕ್ಷಿತಾ ಸುದೀರ್ ನಂದಳಿಕೆ ಸೀತಾರಾಮ ಮತ್ತು ಹರೀಶ್ ರವರ ಹಾಸ್ಯಗಳಿಗೆ ವಸ್ತುವಾಗಿ ನಾಟಕದ ಹಾಸ್ಯ ವಿಬಾಗದ ಯಶಸ್ಸಿಗೆ ಕಾರಣರಾಗುತ್ತಾರೆ.
ಹಾಸ್ಯ ವಿಬಾಗಕ್ಕೆ ಆರ್ಥಪೂರ್ಣ ನ್ಯಾಯ ಒದಗಿಸಿದ ಉದಯ ಕುಮಾರ್ ಹಳೆಯಂಗಡಿಯವರು ಮುಚುಕುಂದನ ತಾಯಿ ಮೀನಕ್ಕನ ಪಾತ್ರದಲ್ಲಿ ಹಳೇ ಹೆಂಗಸಿನ ವಯ್ಯಾರಗಳನ್ನು ಪ್ರದರ್ಶಿಸಿ ನೆನಪುಳಿಯುವ ಅಭಿನಯ ನೀಡಿದ್ದಾರೆ.
ಸತೀಶ್ ಶಿರ್ವ ಬಾನುಮತಿಯ ಅಣ್ಣ ತಂಟು ಯಾನೆ ಪರಮಾನಂದನ ಪಾತ್ರದಲ್ಲಿ ನೆನಪುಳಿಯುವ ಹಾಸ್ಯ ಡೈಲಾಗ್ ನೀಡಿ ಗಮನ ಸೆಳೆದರೆ,ತಂಡದ ನಿರ್ವಾಹಕ ಸುಧಾಕರ ಸಾಲ್ಯಾನ್ ಪರಮಾನಂದನ ತಂದೆಯಾಗಿ ಮಾತಿಗಿಂತಲೂ ಮೌನ ಲೇಸು ಎಂಬಂತೆ ಅದ್ಬುತ ಅಭಿನಯದ ಮೂಲಕ ಗಮನ ಸೆಳೆದಿದ್ದಾರೆ.ತಂಡದ ಇನ್ನೋರ್ವ ಪತ್ರಕರ್ತ ಹರಿಪ್ರಸಾದ್ ನಂದಳಿಕೆ ಮೆಂಟಲ್ ವೀರುವಾಗಿ ಹಾಸ್ಯ ಮೂಡಿಸಿ ಕೊನೆಗೆ ಭಾವನಾತ್ಮಕ ಸನ್ನಿವೇಶಕ್ಕೆ ಶರಣು ಹೋಗುತ್ತಾ ಮನ ಮುಟ್ಟುವ ಆಭಿನಯ ನೀಡಿದದ್ದಾರೆ.
ಒಟ್ಟಾರೆಯಾಗಿ ಯಕ್ಷಗಾನದ ಗಟ್ಟಿತನದ ಕಥಾವಸ್ತುವಿನ ಜತೆ ಭಾವನಾತ್ಮಕ ಸನ್ನಿವೇಶಗಳಿಂದ ಕಲಾಭಿಮಾನಿಗಳು ತನ್ಮಯರಾಗಿ ಈ ನಾಟಕವನ್ನು ಆಸ್ವಾದಿಸುವುದರಿಂದ ಹಾಸ್ಯ ಒಂದಿಷ್ಟು ಕಮ್ಮಿಯಾಯಿತೇನೋ ಎಂದು ಕಂಡು ಬಂದರೂ ಪ್ರತೀ ದೃಶ್ಯಗಳ ನಡುವೆ ಮುಚುಕುಂದ-ಮಕರಂದ ದಂಪತಿ ಕಲಹ,ಅಜ್ಜಿಯ ಸಂಭಾಷಣೆಯ ಜತೆ ಹಾಸ್ಯ ವಿಭಾಗದ ಕಲಾವಿದರ ಸಮರ್ಥ ನಿರ್ವಹಣೆ ಇಡೀ ನಾಟಕವನ್ನು ಗೆಲ್ಲಿಸಿದೆ.
ತಂಡದ ಸಂಗೀತಕಾರ ದಿನೇಶ್ ಪಾಪು ಮುಂಡ್ಕೂರು ಈ ನಾಟಕದ ಯಶಸ್ಸಿನ ಹಿಂದೆ ಬಹಳಷ್ಟು ಕ್ರಿಯಾಶೀಲಾರಾಗಿದ್ದು ಪಟ್ಲರ ಹಾಡಿನ ಜತೆ ಬಡಗುತಿಟ್ಟಿನ ಯಕ್ಷಗಾನದ ಹಾಡುಗಳನ್ನೂ ತೊಡಗಿಸಿ, ಇತರ ಹಮ್ಮಿಂಗ್ಸ್ ಹಾಗೂ ಕಲಾವಿದರ ಎಂಟ್ರಿ ಸಂಗೀತಗಳನ್ನೂ ಅದ್ಬುತವಾಗಿ ಸಂಯೋಜಿಸಿದ್ದಾರೆ.
ಈ ನಾಟಕದ ಯಶಸ್ಸಿನ ಇನ್ನೊಂದು ಪೂರಕ ಆಂಶ ಧ್ವನಿ ಬೆಳಕು ಹಾಗೂ ರಂಗ ಸಂಯೋಜನೆ.ಈ ಕ್ಷೇತ್ರದಲ್ಲಿ ಬೆಳ್ಮಣ್‌ನ ವನದುರ್ಗಿ ಸೌಂಡ್ಸ್ ಹಾಗೂ ನಂದಳಿಕೆ ಸಿರಿ ಆರ್ಟ್ಸ್‌ನವರ ಪ್ರದೀಪ್ ನಂದಳಿಕೆಯವರ ಬಳಗ ಈ ಹಿಂದಿನ ನಾಟಕಗಳಿಗಿಂತಲೂ ಹೆಚ್ಚಿನ ಪರಿಶ್ರಮ ವಹಿಸಿ ನಾಟಕದ ಯಶಸ್ಸಿಗೆ ಕೈ ಜೋಡಿಸಿದೆ.ಪ್ರದೀಪ್ ನಂದಳಿಕೆ ಶಬ್ದ ನಿರ್ವಹಣೆಯಲ್ಲಿ ಕೈಯಾಡಿಸಿದರೆ,ಅಕ್ಷಿತ್ ಏಳಿಂಜೆ ಬೆಳಕು ಸಂಯೋಜನೆಯನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ.ತಂಡದ ಅರುಣ್ ಹಾಗೂ ಸಂತೋಷ್ ತಂತಮ್ಮ ಕರ್ತವ್ಯಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ.
ಪಟ್ಲ ಧ್ವನಿಯ ಹಾಡು ಹಮ್ಮಿಂಗ್ಸ್‌ಗಳ ಜತೆ ಆಶೋಕ್ ಪಳ್ಳಿಯವರ ಗೀತಾ ಸಾಹಿತ್ಯದ ಟೈಟಲ್ ಹಾಡುಗಳು ಭಾಸ್ಕರ ಬಿ.ಸಿ.ರೋಡ್ ಹಾಗೂ ಗುರುರಾಜ್ ಎಂ.ಬಿ.ಯವರ ಧ್ವನಿಯಲ್ಲಿ ಮಾರ್ಮಿಕವಾಗಿ ಮೂಡಿಬಂದಿದ್ದು ನಾಟಕಕ್ಕೆ ಜೀವ ತುಂಬಿದೆ.
ಶರತ್ ಶೆಟ್ಟಿ ನೇತೃತ್ವದಲ್ಲಿ ಹರೀಶ್ ಪಡುಬಿದ್ರಿಯವರ ಜಗದೀಶ್ ಶೆಟ್ಟಿ ಕೆಂಚನಕೆರೆಯವರ ನಿರ್ದೇಶನದ ಬಿಲೆ ಕಟ್ಟರೆ ಆವಂದಿನ ತುಳು ನಾಟಕ ಹರೀಶ್‌ರ ಈ ಹಿಂದಿನ ಯಶಸ್ವಿ ನಾಟಕಗಳಾದ ಬರಾಸ್ ಬಾಸ್ಕರೆ, ಲೆಕ್ಕ ತತ್ತಿ ಬೊಕ್ಕ, ತೂಪಿನಾರೇ ಆಪಿನಾರ್ ನಾಟಕಗಳ ಸಾಲಿಗೆ ಸೇರುವುದರಲ್ಲಿ ಯಾವುದೇ ಸಂದೇಹವಿಲ್ಲ.
ಕಟೀಲು ಲಕ್ಷ್ಮೀನಾರಾಯಣ ಆಸ್ರಣ್ಣರ ಆಶೀರ್ವಾದದೊಂದಿಗೆ, ಕಿನ್ನಿಗೋಳಿಯ ಯುಗಪುರುಷದ ಕೊಡೆತ್ತೂರು ಭುವನಾಭಿರಾಮ ಉಡುಪರ ಸಹಕಾರದಲ್ಲಿ ,ಮುಂಡ್ಕೂರು ಸಾಯಿನಾಥ ಶೆಟ್ಟಿಯವರ ಸಂಚಾಲಕತ್ವದಲ್ಲಿ ,ಸಂಕಲಕರಿಯ ಸುಧಾಕರ ಸಾಲ್ಯಾನ್‌ರ ಸಮಗ್ರ ನಿರ್ವಹಣೆಯಲ್ಲಿ, ಲಕ್ಷ್ಮಣ್ ಬಿ.ಬಿ.ಏಳಿಂಜೆಯವರ ನಿರ್ವಹಣೆಯಲ್ಲಿ,ಸಾಲೆತ್ತೂರು ಜಯರಾಮ ಶೆಟ್ಟಿ ಹಾಗೂ ರಾಜೇಶ್ ಕೆಂಚನಕೆರೆಯರ ಸಲಹೆಗಳೊಂದಿಗೆ ಮುಂಬನ ಸಾಂಸ್ಕೃತಿಕ ರಾಯಭಾರಿ ಪ್ರಕಾಶ್ ಎಂ.ಶೆಟ್ಟಿ ಸುರತ್ಕಲ್‌ರವರ ಸಂಚಾಲಕತ್ವದಲ್ಲಿ ಕಿನ್ನಿಗೋಳಿಯ ವಿಜಯಾ ಕಲಾವಿದರ ತಂಡ ಜನವರಿ 15ರಿಂದ ಸತತ 12ನೇ ವರ್ಷ ಮುಂಬ ಪ್ರವಾಸಗೈಯಲಿದ್ದು ಮುಂಬನ ವಿವಿಧೆಡೆ ಬಿಲೆ ಕಟ್ಟರೆ ಆವಂದಿನ ಪ್ರದರ್ಶನಗೊಳ್ಳಲಿದೆ.
ಹರೀಶ್ ಪಡುಬಿದ್ರಿಯವರ 300 ಪ್ರದರ್ಶನ ಕಂಡ ಬರಾಸ್ ಬಾಸ್ಕರೆ, 104ಪ್ರದರ್ಶನ ಕಂಡ ಲೆಕ್ಕ ತತ್ತಿ ಬೊಕ್ಕ , 77 ಪ್ರದರ್ಶನ ಕಂಡ ಕಡೀರ ಮಗೆ ಹಾಗೂ 50 ಪ್ರದರ್ಶನ ಕಂಡ ತೂಪಿನಾರೇ ಆಪಿನಾರ್ ತುಳು ನಾಟಕಗಳ ಸಾಲಿಗೆ ಈ ನಾಟಕ ಸೇರಲಿ ಎನ್ನುವುದೇ ಕಲಾಭಿಮಾನಿಗಳ ಹಾರೈಕೆ.
Vijaya-kalavidaru01 Vijaya-kalavidaru02 Vijaya-kalavidaru03 Vijaya-kalavidaru04 Vijaya-kalavidaru05 Vijaya-kalavidaru06

Comments

comments

Comments are closed.

Read previous post:
Mulki30101703
ಶಿಮಂತೂರು:ಯಕ್ಷಗಾನ ನಾಟ್ಯ ತರಗತಿ ಉದ್ಘಾಟನೆ

ಮುಲ್ಕಿ: ಯಕ್ಷಮಿತ್ರರು ಪಂಜಿನಡ್ಕ ನೇತೃತ್ವದಲ್ಲಿ ಶಿಮಂತೂರು ಶ್ರೀ ಆದಿಜರ್ನಾನ ದೇವಸ್ಥಾನದಲ್ಲಿ ಯಕ್ಷಗಾನ ನಾಟ್ಯ ತರಗತಿಯನ್ನು ವೇದಮೂರ್ತಿ ರಾಮಚಂದ್ರ ಭಟ್ ಶಿಮಂತೂರು ದೀಪ ಬೆಳಗಿಸಿ ಉದ್ಘಾಟಿಸಿದರು.ಉದ್ಯಮಿ ಶಂಕರ್ ಶೆಟ್ಟಿ...

Close