ಮೂಲ್ಕಿ: ಕಲಾವಿದರ ಕಲಾ ಪ್ರತಿಭೆಗಳಿಗೆ ಸೂಕ್ತವಾದ ಪ್ರೋತ್ಸಾಹ ಅಗತ್ಯ, ದೇಹದ ನ್ಯೂನತೆಯನ್ನು ಲೆಕ್ಕಿಸದೇ ತಮ್ಮಲ್ಲಿರುವ ಸಾಂಸ್ಕೃತಿಕ ಕಲೆಗಳನ್ನು ಅನಾವರಣಗೊಳಿಸುವ ಸಾಮರ್ಥ್ಯವನ್ನು ಪ್ರತಿಭೆಗಳಿಂದಲೇ ಬೆಳಗಿಸುವ ಛಲವನ್ನು ಹೊಂದಿರುವವರಿಗೆ ಸಮಾಜವು ಆಸರೆಯಾಗಬೇಕು ಎಂದು ಬಳ್ಕುಂಜೆ ಮಂಡಲ ಪಂಚಾಯತ್ನ ಮಾಜಿ ಸದಸ್ಯ ಸಾಧು ಅಂಚನ್ ಮಟ್ಟು ಹೇಳಿದರು.
ಮೂಲ್ಕಿ ಬಸ್ ನಿಲ್ದಾಣದಲ್ಲಿ ಶೃಂಗೇರಿಯ ಶ್ರೀ ಶಾರದ ಅಂಧರ ಗೀತ ಗಾಯನ ಕಲಾ ಸಂಘದ ಅಂಧ ಕಲಾವಿದರಿಂದ ನಡೆದ ಗೀತಾ ಗಾಯನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕಲಾ ಸಂಘದ ಅಧ್ಯಕ್ಷ ಎ.ಎನ್.ಯೋಗೀಶ್ ಮಾತನಾಡಿ ನಾವು ಅಂಧ ಕಲಾವಿದರು ಆಗಿರಬಹುದು ಆದರೆ ನಮಗೆ ಅನುಕಂಪ ಬೇಡ ಬದಲಾಗಿ ಅವಕಾಶ ನೀಡಿರಿ, ಧಾರ್ಮಿಕ ಕ್ಷೇತ್ರಗಳಲ್ಲಿ, ವಯಕ್ತಿಕ ಶುಭ ಕಾರ್ಯದಲ್ಲಿ ಅವಕಾಶ ನೀಡಿದರೇ ನಮ್ಮ ಪ್ರತಿಭೆಗಳನ್ನು ನಾವು ಪ್ರದರ್ಶಿಸುತ್ತೇವೆ ಎಂದರು.
ಕಲಾ ಸಂಘದ ಉಪಾಧ್ಯಕ್ಷ ಕೃಷ್ಣ, ಮೂಲ್ಕಿ ಲಯನ್ಸ್ ಕ್ಲಬ್ನ ಮಾಜಿ ಅಧ್ಯಕ್ಷರುಗಳಾದ ವಿಜಯಕುಮಾರ್ ಕುಬೆವೂರು, ಕಿಶೋರ್ ಶೆಟ್ಟಿ ಬಪ್ಪನಾಡು, ಹಿಂದೂ ಯುವ ಸೇನೆಯ ಸ್ಥಾಪಕಾಧ್ಯಕ್ಷ ಗೋವಿಂದ ಕೋಟ್ಯಾನ್, ಹೆಜಮಾಡಿ ಗ್ರಾಮ ಪಂಚಾಯತ್ ಸದಸ್ಯ ಪ್ರಾಣೇಶ್ ಪೂಜಾರಿ, ನಿವೃತ್ತ ಸರಕಾರಿ ಅಽಕಾರಿ ವಿಠಲ ಶೆಟ್ಟಿಗಾರ್ ಮೊದಲಾದವರು ಶುಭ ಹಾರೈಸಿದರು. ಜಿ.ಎಂ. ಮೆಡಿಕಲ್ಸ್ ಹಾಗೂ ಮೂಲ್ಕಿ ರಿಕ್ಷಾ ಚಾಲಕ ಮಾಲಕರ ಸಂಘದ ಸದಸ್ಯರು, ಬಸ್ ಸಿಬಂದಿಗಳು ವಿಶೇಷ ಸಹಕಾರ ನೀಡಿದ್ದರು.