ಜಿ.ಪಂ. ಮತ್ತು ತಾ.ಪಂ. ಅನುದಾನ: ಶಾಸಕರ ಹಸ್ತಕ್ಷೇಪ.

ಕಿನ್ನಿಗೋಳಿ : ಮುಲ್ಕಿ ಮೂಡಬಿದಿರೆ ಕ್ಷೇತ್ರದ ಬಿಜೆಪಿ ಬೆಂಬಲಿತ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಸದಸ್ಯರ ಅನುದಾನ ಹಾಗೂ ಕಾಮಗಾರಿಗಳಲ್ಲಿ ಶಾಸಕರು ಹಸ್ತಕ್ಷೇಪ ಮಾಡುತ್ತಿದ್ದು ದಬ್ಬಾಳಿಕೆಯ ಮಾರ್ಗ ಅನುಸರಿಸಿ ರಾಜಕೀಯ ಮಾಡುತ್ತಿದ್ದಾರೆ ಎಂದು ಬಿಜೆಪಿಯ ಮೂಡಬಿದಿರೆ ಕ್ಷೇತ್ರದ ಅಧ್ಯಕ್ಷ ಈಶ್ವರ್ ಕಟೀಲು ಆರೋಪಿಸಿದರು.
ಕಿನ್ನಿಗೋಳಿಯಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಪಡುಪಣಂಬೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಳ್ಳಾಯರು ಗ್ರಾಮದ ತೋಕೂರಿನಿಂದ ಕೆರೆಕಾಡು ಪೂಪಾಡಿ ಕಟ್ಟೆವರೆಗಿನ ತೋಕೂರು ಶ್ರೀ ಸುಬ್ರಹ್ಮಣ್ಯ ದೇವರು ಜಲಕಕ್ಕೆ ಹೋಗುವ ರಸ್ತೆ ಕಳೆದ 25 ವರ್ಷಗಳಿಂದ ದುರಸ್ತಿ ಕಾಣದೇ ಸಂಪೂರ್ಣ ಹದಗೆಟ್ಟಿದ್ದು ಗ್ರಾಮಸ್ಥರ ಮನವಿಯ ಮೇರೆಗೆ ಜಿಲ್ಲಾ ಪಂಚಾಯಿತಿ ತಾಲೂಕು ಪಂಚಾಯಿತಿ ಸದಸ್ಯರಿಗೆ ನೀಡಲಾಗಿರುವ ಟಾಸ್ಕ್‌ಪೋರ್ಸ್ ಅನುದಾನದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರ ಅನುದಾನ ರೂ 2.75ಲಕ್ಷ, ತಾಲೂಕು ಪಂಚಾಯಿತಿ ಸದಸ್ಯರ ಅನುದಾನ 1 ಲಕ್ಷ, ಸಂಸದರ 4 ಲಕ್ಷ ಅನುದಾನ ಹಾಗೂ ಉಳಿದ ಹಣ ಗ್ರಾಮ ಪಂಚಾಯಿತಿನಿಂದ ಸೇರಿದಂತೆ ಒಟ್ಟು 10 ಲಕ್ಷ ವೆಚ್ಚದಲ್ಲಿ ರಸ್ತೆ ದುರಸ್ತಿಯ ಕಾಮಗಾರಿಯನ್ನು ನವಂಬರ್ 24 ರ ಮೊದಲು ಷಷ್ಠಿ ಮಹೋತ್ಸವದ ಸಂದರ್ಭ ಸಂಪೂರ್ಣಗೊಳಿಸಲು ನಿರ್ಧರಿಸಲಾಗಿತ್ತು. ಈ ನಡುವೆ ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರು ಶಾಸಕರಲ್ಲಿ ಇದರಿಂದ ಬಿಜೆಪಿಗೆ ಲಾಭವಾಗುತ್ತದೆಂದು ಶಾಸಕರ ಹಾದಿ ತಪ್ಪಿಸಿದ್ದು ಶನಿವಾರ ಶಾಸಕರು ಇದೇ ರಸ್ತೆಗೆ ತರಾತುರಿಯಲ್ಲಿ ಶಿಲಾನ್ಯಾಸ ಮಾಡಿರುತ್ತಾರೆ. ರಸ್ತೆ ಕಾಂಕ್ರೀಟಿಕರಣಕ್ಕೆ 85 ಲಕ್ಷ ಅನುದಾನ ಮುಖ್ಯಮಂತ್ರಿಗಳ ವಿಶೇಷ ಪ್ಯಾಕೇಜ್ ಹಾಗೂ ಇನ್ನಿತರ ಅನುದಾನಗಳ ಮೂಲಕ ಮಂಜೂರಾಗಿದೆ ಎಂದು ಹೇಳಿಕೆ ನೀಡಿದ್ದು ಆದರೆ ಈವರೆಗೆ ಯಾವುದೇ ಅನುದಾನ ಬಿಡುಗಡೆಯಾಗಿಲ್ಲ. ಶಾಸಕರು ಜಿಲ್ಲಾ ಪಂಚಾಯಿತಿ ತಾಲೂಕು ಪಂಚಾಯಿತಿ ಸದಸ್ಯರುಗಳಿಗಿರುವ ಟಾಸ್ಕ ಪೋರ್ಸ್ ಅನುದಾನವನ್ನು ತನಗೆ ಬೇಕಾದಂತೆ ಬದಲಾಯಿಸಿ ಸರ್ವಾಧಿಕಾರಿಯಾಗಿ ವರ್ತಿಸುತ್ತಿದ್ದಾರೆ. ರಸ್ತೆಯ ಅಭಿವೃದ್ಧಿಗೆ ತಮ್ಮ ಆಕ್ಷೇಪವಿಲ್ಲ ಆದರೆ ಜನರಿಗೆ ಸುಳ್ಳು ಹೇಳಿ ಯಾವುದೇ ಅನುದಾನದ ಬಗ್ಗೆ ಅಧಿಕೃತವಾಗಿ ಮಾಹಿತಿ ನೀಡದೇ ಮರುಳು ಮಾಡುತ್ತಿರುವುದನ್ನು ಶಾಸಕರಿಗೆ ಶೋಭೆಯಲ್ಲ, ಮೂಲ್ಕಿ ಮೂಡಬಿದ್ರಿ ಕ್ಷೇತ್ರದಲ್ಲಿ ಗಾಂಜಾ ಮಾರಾಟ, ಮರಳು ಮಾಫಿಯಾ ಯಾವುದೇ ಅಳುಕಿಲ್ಲದೆ ನಡೆಯುತ್ತಿದ್ದು ಇದಕ್ಕೆ ಶಾಸಕರು ಕುಮ್ಮಕ್ಕು ನೀಡುತ್ತಿದ್ದಾರೆ. ಕಳೆದ ಮೂವತ್ತು ವರ್ಷಗಳಿಂದ ವಿಧಾನ ಪರಿಷತ್ ಸದಸ್ಯ ಹಾಗೂ ಶಾಸಕರಾಗಿ ಅಧಿಕಾರದಲ್ಲಿದ್ದರೂ ಯಾವುದೇ ಅಭಿವೃದ್ದಿ ಕಾರ್ಯಕ್ಕೆ ಮುತುವರ್ಜಿ ವಹಿಸಿಲ್ಲ ಈಗ ಚುನಾವಣೆಯ ಸಮಯದಲ್ಲಿ ಸೋಲುವ ಭಯದಿಂದ ವಿಚಲಿತರಾಗಿದ್ದಾರೆ. ಗ್ರಾಮೀಣ ಭಾಗದಲ್ಲಿ ಬಿಜೆಪಿ ಜನಪ್ರತಿನಿಧಿಗಳು ಅಭಿವೃದ್ಧಿ ನಡೆಸುವ ಕಾರ್ಯಯೋಜನೆಗಳಿಗೆ ಕ್ಷೇತ್ರದ ಶಾಸಕರಾದ ಅಭಯಚಂದ್ರ ಜೈನ್ ಸಹಿತ ಕಾಂಗ್ರೆಸ್ಸಿಗರು ಅಡ್ಡಿಪಡಿಸುತ್ತಿರುವ ವಾತಾವರಣವನ್ನು ರಾಜಕೀಯವಾಗಿ ಎದುರಿಸಲು ಬಿಜೆಪಿ ಸಿದ್ಧವಾಗಿದೆ. ಶಾಸಕರ ಗೂಂಡಾಗಿರಿ ಪ್ರವೃತ್ತಿ ನಿಲ್ಲಿಸದಿದ್ದಲ್ಲಿ ಪಕ್ಷವು ಸೂಕ್ತವಾಗಿ ಉತ್ತರಿಸಲಿದೆ ಎಂದು ಬಿಜೆಪಿ ಮೂಲ್ಕಿ ಮೂಡಬಿದಿರೆ ಕ್ಷೇತ್ರದ ಅಧ್ಯಕ್ಷ ಈಶ್ವರ ಕಟೀಲು ಹೇಳಿದರು.

ದ.ಕ. ಜಿ.ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ ಮಾತನಾಡಿ, ಶುದ್ಧಕುಡಿಯುವ ನೀರಿನ ಘಟಕ ಎಂದು ಜಿಲ್ಲೆಯಲ್ಲಿ 152 ಘಟಕವನ್ನು ನಿರ್ಮಿಸಿದ ಸರಕಾರ ಅದನ್ನು ಚಾಲನೆ ಮಾಡದೇ ಎರಡು ವರ್ಷ ಸಂದಿದೆ. 1 ರೂಪಾಯಿಗೆ 10 ಲೀಟರ್ ನೀರು ದೊರೆಯುವ ಯೋಜನೆಯು ಶಾಸಕರ ನಿರ್ಲಕ್ಷದಿಂದಾಗಿ ಜನ ಸಾಮಾನ್ಯರಿಗೆ ಸಿಗದಂತಾಗಿದೆ. ರಸ್ತೆ ಸುರಕ್ಷಣಾ ಯೋಜನೆಯಡಿಯಲ್ಲಿ ಗ್ರಾಮೀಣ ಪ್ರದೇಶಗಳಿಗೆ ಮಂಜೂರಾದ ಹ್ಯೆಮಾಸ್ಕ್ ದೀಪಗಳ ಅಳವಡಿಕೆಯಲ್ಲಿ ಕೂಡ ಶಾಸಕರು ಹಸ್ತಕ್ಷೇಪ ಮಾಡುತ್ತಿದ್ದು ಜಿಲ್ಲೆಯ ೮ ಶಾಸಕರುಗಳಲ್ಲಿ ಕೇವಲ ಮೂಡಬಿದ್ರಿ ಕ್ಷೇತ್ರದ ಶಾಸಕರಿಂದ ಮಾತ್ರ ಹಸ್ತಕ್ಷೇಪ ನಡೆಯುತ್ತಿದೆ. ಕಿನ್ನಿಗೋಳಿಯ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯು ಕಳೆದ 8 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದು ಈ ಬಗ್ಗೆ ಆಸಕ್ತಿ ವಹಿಸದ ಶಾಸಕರು ಬಿಜೆಪಿ ಪ್ರಾಬಲ್ಯವಿರುವ ಜಿಲ್ಲಾ ಪಂಚಾಯಿತಿ ತಾಲೂಕು ಪಂಚಾಯಿತಿ ಸದಸ್ಯರುಗಳ ವ್ಯಾಪ್ತಿಯಲ್ಲಿ ತನ್ನ ದರ್ಪವನ್ನು ತೋರಿಸುತ್ತಿದ್ದಾರೆಂದು ಹೇಳಿದರು
ಜಿ.ಪಂ. ಸದಸ್ಯ ವಿನೋದ್ ಬೊಳ್ಳೂರು ಮಾತನಾಡಿ ಹಳೆಯಂಗಡಿಯ ಪಾವಂಜೆ ಹಾಗೂ ಕೆರೆಕಾಡಿನಲ್ಲಿ ಬಿಜೆಪಿ ಜನಪ್ರತಿನಿಧಿಗಳ ಅನುದಾನವನ್ನು ತಮ್ಮ ಸಾಧನೆ ಎನ್ನುವ ಶಾಸಕರು ಹಾಗೂ ಹಿಂಬಾಲಕ ಕಾಂಗ್ರೆಸ್ಸಿಗರಿಗೆ ಇಂತಹ ಕ್ಷುಲ್ಲಕ ರಾಜಕೀಯಕ್ಕೆ ಮುಂದಿನ ದಿನದಲ್ಲಿ ಮತದಾರರೇ ಉತ್ತರಿಸಲಿದ್ದಾರೆ. ಬಿಜೆಪಿ ಎಂದಿಗೂ ಅಭಿವೃದ್ಧಿಗೆ ರಾಜಕೀಯ ಮಾಡುವುದಿಲ್ಲ ಬದಲಾಗಿ ಬಿಜೆಪಿಯವರು ನಡೆಸುವ ಯೋಜನೆಗೆ ಅಡ್ಡಗಾಲು ಹಾಕಿ ತಾವು ತಮ್ಮಿಂದಲೇ ಅಭಿವೃದ್ಧಿ ಎಂದು ಹೇಳುವುದಕ್ಕೆ ಬಲವಾದ ಆಕ್ಷೇಪ ಇದೆ. ಸರ್ಕಾರಿ ಕಾರ್ಯಕ್ರಮಗಳಲ್ಲಿ ಶಾಸಕರು ಕಾಂಗ್ರೇಸಿಗರನ್ನು ವೇದಿಕೆಯಲ್ಲಿ ಕುಳ್ಳಿರಿಸಿ ಕಾರ್ಯಕ್ರಮಕ್ಕೆ ಚ್ಯುತಿ ತರುವ ಕಾರ್ಯ ಮಾಡುತ್ತಿದ್ದಾರೆಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮುಲ್ಕಿ ಮೂಡಬಿದಿರೆ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಸುಕೇಶ್ ಶೆಟ್ಟಿ ಶಿರ್ತಾಡಿ, ಜಯಾನಂದ ಮೂಲ್ಕಿ, ತಾಲೂಕು ಪಂಚಾಯಿತಿ ಸದಸ್ಯರಾದ ಶರತ್ ಕುಬೆವೂರು, ದಿವಾಕರ ಕರ್ಕೇರ, ಬಿಜೆಪಿ ಮುಖಂಡ ಕೆ. ಭುವನಾಭಿರಾಮ ಉಡುಪ ಉಪಸ್ಥಿತರಿದ್ದರು.

Comments

comments

Comments are closed.

Read previous post:
Kinnigoli-20111709
ಮೂಲ್ಕಿ : ರಾಮ ಕ್ಷತ್ರಿಯ ಸೇವಾ ಸಂಘಕ್ಕೆ ಆಯ್ಕೆ

ಹಳೆಯಂಗಡಿ: ಮೂಲ್ಕಿ ಹಾಗೂ ಸುರತ್ಕಲ್ ವಲಯದ ರಾಮ ಕ್ಷತ್ರಿಯ ಸೇವಾ ಸಂಘದ ನೂತನ ಅಧ್ಯಕ್ಷರಾಗಿ ಅಜಿತ್ ಕುಮಾರ್ ಬೇಕಲ್ ಅವರು ಸಂಘದ ಮಹಾ ಸಭೆಯಲ್ಲಿ ಅವಿರೋಧವಾಗಿ ಅಯ್ಕೆಯಾಗಿದ್ದಾರೆ....

Close