ಕಟೀಲು ಮೇಳಗಳ ಅಪಪ್ರಚಾರ ಬೇಡ.

ಕಲಾವಿದರ ಒಳಿತಿಗಾಗಿ ಅನೇಕ ವ್ಯವಸ್ಥೆ, ಬಿಟ್ಟ ಕಲಾವಿದರ ಸೇರ್ಪಡೆಗೆ ಸನ್ನಿವೇಶ ಸೃಷ್ಟಿಯಾಗಿಲ್ಲ
ಕಟೀಲು : ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿಯ ಆಡಳಿತ ಬಗ್ಗೆ ಕೆಲ ಪತ್ರಿಕೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ನಡೆಯುತ್ತಿದ್ದು, ಕಟೀಲು ದೇಗುಲದ ಭಕ್ತರು ಇದಕ್ಕೆ ಕಿವಿಗೊಡಬಾರದು ಎಂದು ಕಟೀಲು ದೇಗುಲದ ಆನುವಂಶಿಕ ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ ಹೇಳಿದ್ದಾರೆ.
ಕಟೀಲು ದೇಗುಲದಲ್ಲಿ ಸೋಮವಾರ ಸಂಜೆ ಕಟೀಲು ದೇಗುಲದ ಆಡಳಿತ, ಕಟೀಲು ಮೇಳದ ಸಂಚಾಲಕರು, ಕಲಾವಿದರು ಹಾಗೂ ಯಕ್ಷಧರ್ಮಬೋಧಿನೀ ಟ್ರಸ್ಟ್ ಇವರು ಜಂಟಿಯಾಗಿ ಕರೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು.
ಕಲ್ಲಾಡಿ ಮನೆತನದವರು 67 ವರ್ಷಗಳಿಂದ ಕಟೀಲು ಮೇಳಗಳನ್ನು ಸಮರ್ಥವಾಗಿ ನಡೆಸುತ್ತಿದ್ದು, ಈಗಿನ ಕಲ್ಲಾಡಿ ದೇವೀಪ್ರಸಾದ ಶೆಟ್ಟರು ಸಂಚಾಲಕತ್ವ ವಹಿಸಿಕೊಂಡ ಮೇಲೆ, ಅವರ ಅಭಿಮಾನಿಗಳು, ಕಟೀಲು ಮೇಳಗಳ ಖಾಯಂ ಆಟವಾಡಿಸುವ ಭಕ್ತರು ಸೇರಿಕೊಂಡು ಮಾಡಿರುವ ಯಕ್ಷಧರ್ಮಬೋಧಿನೀ ಚಾರಿಟೇಬಲ್ ಟ್ರಸ್ಟ್‌ನ ಬಸ್ಸು, ಲಾರಿ, ವಿದ್ಯುತ್, ರಂಗಸ್ಥಳ, ಉಯ್ಯಾಲೆಯಂತಹ ವ್ಯವಸ್ಥೆಗಳು ಅತಿ ಕಡಿಮೆ ದರದಲ್ಲಿ ಸೇವಾದಾರರಿಗೆ ಸಿಗುವಂತಾಗಿದೆ. ಕಟೀಲು ಮೇಳಗಳಿಗೆ ಟ್ರಸ್ಟ್‌ನ ಕೊಡುಗೆ ಅಭಿನಂದನೀಯ. ಕಲಾವಿದರಿಗೆ ಆರೋಗ್ಯನಿಧಿ, ವಿಮಾ ಸೌಲಭ್ಯಗಳಲ್ಲದೆ ಯಕ್ಷಗಾನದ ಇತಿಹಾಸದಲ್ಲೇ ಮೊದಲ ಬಾರಿಗೆ ರಜಾದಿನಗಳ ಗೌರವ ಸಂಭಾವನೆಗಳಂತಹ ವ್ಯವಸ್ಥೆಗಳಾಗಿವೆ. ಇಂತಹ ಭದ್ರತೆ ಮತ್ತು ವ್ಯವಸ್ಥೆ ಇವತ್ತಿಗೂ ಬೇರೆ ಯಾವ ಮೇಳಗಳಲ್ಲೂ ಇಲ್ಲ. ಪ್ರತಿ ಮೇಳದಲ್ಲಿ 60 ಮಂದಿ ಇದ್ದು, ಆರು ಮೇಳಗಳೂ ಗಜಮೇಳಗಳಾಗಿವೆ. ಕಲಾವಿದರ ವೇತನದಲ್ಲಿ ಏರಿಕೆಯಾಗಿರುವುದನ್ನು ಕಲಾವಿದರೇ ಒಪ್ಪುತ್ತಾರೆ. ಎಲ್ಲ ದೃಷ್ಟಿಯಿಂದಲೂ ಮೇಳದ ಸಂಚಾಲಕತ್ವ ಸಮರ್ಪಕವಾಗಿರುವುದರಿಂದ ದೇಗುಲದ ಆಡಳಿತ ಮಂಡಳಿ ಮೇಳಗಳ ಬಗ್ಗೆ ಯಾವುದೇ ಹಸ್ತಕ್ಷೇಪ ಮಾಡಿಲ್ಲ. ಇಷ್ಟಕ್ಕೂ ಪ್ರತಿ ವರುಷ ವೀಳ್ಯ ನಿಗದಿ ಪಡಿಸುವುದು ದೇಗುಲದ ಆಡಳಿತ ಮಂಡಳಿಯೇ. ಆದರೂ ಮೇಳಗಳಲ್ಲಿ ಕಲಾವಿದರನ್ನು ಕಡಿಮೆ ಮಾಡಿಲ್ಲ ಎಂದು ಆಸ್ರಣ್ಣ ತಿಳಿಸಿದರು. ಕಲಾವಿದರ ಆಂತರಿಕ ವರ್ಗಾವಣೆ ಈ ವರುಷ ಮೊದಲಲ್ಲ. ಈ ಹಿಂದಿನಿಂದಲೂ ಆಗುತ್ತಿದೆ.
ಸೇವಾರ್ಥಿಗಳಿಗೆ ಅಮೆ ಸೂತಕಾದಿಗಳು ಬಂದಾಗ ಆಟವಾಡಿಸುವಂತಿಲ್ಲ. ೫೦೪ಖಾಯಂ ಆಟಗಳು ಆಯಾಯ ಊರುಗಳ ಜಾತ್ರೆ, ವಾರ, ದಿನಾಂಕಗಳನ್ನು ಹೊಂದಿಕೊಂಡು ಇರುವುದರಿಂದ ದಿನ ಹೊಂದಾಣಿಕೆ ಕಟೀಲು ಮೇಳಗಳಿಗೆ ಕಷ್ಟವಾಗುತ್ತಿದೆ. ಈ ಕಾರಣಕ್ಕಾಗಿ ಯಕ್ಷಗಾನ ದಿನಗಳನ್ನು ಒಂದೇ ಬಾರಿ ನೀಡಲು ಸಾಧ್ಯವಾಗುತ್ತಿಲ್ಲವೇ ಹೊರತು ಬೇರೆ ಕಾರಣಗಳಿಂದಲ್ಲ ಎಂದರು.

ಸನ್ನಿವೇಶ ಸೃಷ್ಟಿಯಾಗಿಲ್ಲ
ರಾಜೀನಾಮೆ ನೀಡಿದ ಏಳು ಕಲಾವಿದರ ಮರು ಸೇರ್ಪಡೆ ಬಗೆಗಿನ ಪ್ರಶ್ನೆಗೆ ಇತರ ಕಲಾವಿದರು ಸಂಚಾಲಕರಲ್ಲಿ ಮುಕ್ತವಾಗಿ ಮಾತಾನಾಡಿ ಕ್ಷಮೆ ಕೇಳಿರುವುದರಿಂದ ಅವರಿಗೆ ಮತ್ತೆ ಅವಕಾಶ ನೀಡಿಲಾಗಿದೆ. ಆದರೆ ಉಳಿದ ಕಲಾವಿದರ ಸೇರ್ಪಡೆಗೆ ಸನ್ನಿವೇಶ ಸೃಷ್ಟಿಯಾಗಿಲ್ಲ. ಮುಖತಃ ಮಾತುಕತೆ ಮಾಡಿಲ್ಲ. ಸಾಮಾಜಿಕ ಜಾಲತಾಣ ಮತ್ತು ಪತ್ರಿಕೆಗಳಲಷ್ಟೇ ಕ್ಷಮೆ ಕೇಳಿದ್ದಾರೆ. ಯಾರಿಗೂ
ಸೇರ್ಪಡೆಯ ಬಾಗಿಲನ್ನು ಮುಚ್ಚಿಲ್ಲ. ಸಂದರ್ಭ ಸೃಷ್ಟಿಯಾದರೆ ಈ ಬಗ್ಗೆ ನಿರ್ಧರಿಸಲಾಗುವುದು.

ಯಾವ ಮೇಳಕ್ಕೂ ಸಿದ್ಧ
ನಾನು ಆರಂಭದಲ್ಲೂ, ಈಗಲೂ ಹೇಳುವ ಮಾತು ಒಂದೇ, ಕಟೀಲಿನ ಯಾವ ಮೇಳದಲ್ಲೂ ಸೇವೆ ಸಲ್ಲಿಸಲು ಸಿದ್ಧ ಎಂದು ಪಟ್ಲ ಸತೀಶ ಶೆಟ್ಟಿ ಹೇಳಿದರು. ದೇಗುಲದ ಆನುವಂಶಿಕ ಮೊಕ್ತೇಸರ ಕೊಡೆತ್ತೂರುಗುತ್ತು ಸನತ್ ಕುಮಾರ ಶೆಟ್ಟಿ, ಪತ್ರಕರ್ತರ ಎದುರೇ ಪಟ್ಲ ಸತೀಶ ಶೆಟ್ಟರಲ್ಲಿ ಯಾವ ಮೇಳಕ್ಕೂ ಹೋಗಲು ಸಿದ್ಧರಿದ್ದೀರಾ, ಮುಂದಿನ ವರುಷ ಬದಲಾವಣೆ ಮಾಡಿದರೂ ಸಿದ್ಧರಿದ್ದೀರಾ ಎಂದು ಕೇಳಿದರು. ತಾನು ಕಟೀಲಮ್ಮನ ಸೇವೆಗೆ ಬರುತ್ತಿದ್ದೇನೆ ಎಂದು ಸ್ಪಷ್ಟ ಪಡಿಸಿದರು.
ಕಲಾವಿದ ಶ್ರುತಕೀರ್ತಿರಾಜ, ಪಟ್ಲರನ್ನು ಎಲ್ಲ ಮೇಳಗಳ ಕಲಾವಿದರೂ ಬಯಸುತ್ತಾರೆ. ಹಾಗಾಗಿ ಬದಲಾವಣೆಯನ್ನು ಸ್ವಾಗತಿಸುತ್ತೇವೆ ಎಂದರು.
ದಿನೇಶ ಶೆಟ್ಟಿ ಕಾವಳಕಟ್ಟೆ ಮಾತನಾಡಿ ನಮ್ಮ ಸಮಸ್ಯೆಗಳ ಬಗ್ಗೆಯೂ ನಾವು ನೇರವಾಗಿ ಸಂಚಾಲಕರಲ್ಲೇ ಪ್ರತಿಭಟಿಸಿದ್ದೇವೆ. ಆಗ ನಮಗೆ ಸ್ಪಂದಿಸಿದ್ದಾರೆ. ಆದರೆ ಈಗ ರಾಜೀನಾಮೆ ನೀಡಿದ ಕಲಾವಿದರ ನಿಲುವು ಸರಿಯಿರಲಿಲ್ಲ. ಮೇಳಹೊರಡುವ ಕೊನೆಕ್ಷಣದವರೆಗೂ ಇವರ ಸ್ಪಷ್ಟ ನಿಲುವು ಇಲ್ಲದ ಕಾರಣ 20ಕ್ಕೂ ಹೆಚ್ಚು ಹೊಸ ಕಲಾವಿದರ ಸೇರ್ಪಡೆಯಾಗಿತ್ತು. ರಾಜೀನಾಮೆ ನೀಡಿದವರನ್ನು ಮರುಸೇರ್ಪಡೆಗೊಳಿಸಿದರೆ ಹೊಸದಾಗಿ ಬಂದ ಕಲಾವಿದರ ಗತಿಯೇನು? ಅವರನ್ನು ಮನೆಗೆ ಕಳುಹಿಸಲು ಸಾಧ್ಯವೆ? ಕಲಾವಿದರು ನೇರವಾಗಿ ಸಂಚಾಲಕರಲ್ಲೇ ಮಾತುಕತೆ ನಡೆಸುತ್ತಿದ್ದರೆ ಈ ಸಮಸ್ಯೆ ಆಗುತ್ತಿರಲಿಲ್ಲ ಎಂದರು.
ಕಟೀಲು ದೇಗುಲದ ಮೊಕ್ತೇಸರ ವಾಸುದೇವ ಆಸ್ರಣ್ಣ, ಸನತ್ ಕುಮಾರ ಶೆಟ್ಟಿ, ಕೊಡೆತ್ತೂರು ಗುತ್ತು ಸುಧೀರ್ ಶೆಟ್ಟಿ, ಮೇಳಗಳ ಸಂಚಾಲಕ ಕಲ್ಲಾಡಿ ದೇವೀಪ್ರಸಾದ ಶೆಟ್ಟಿ, ಯಕ್ಷಧರ್ಮಬೋಧಿನೀ ಟ್ರಸ್ಟ್‌ನ ಅಧ್ಯಕ್ಷ ರಾಘವೇಂದ್ರ ಆಚಾರ‍್ಯ, ರವಿರಾಜ ಆಚಾರ‍್ಯ, ಭುಜಂಗ ಶೆಟ್ಟಿ, ರಾಮಣ್ಣ ಶೆಟ್ಟಿ, ಶಿವಾಜಿ ಶೆಟ್ಟಿ, ಸುಣ್ಣಂಬಳ ವಿಶ್ವೇಶ್ವರ ಭಟ್, ಮೇಳದ ಕಲಾವಿದರಾದ ಭಾಗವತ ಬೊಟ್ಟಿಕೆರೆ ಪುರುಷೋತ್ತಮ ಪೂಂಜ, ದಿನಕರ ಗೋಖಲೆ, ರವಿಮುಂಡಾಜೆ, ಹರಿನಾರಾಯಣ ಎಡನೀರು ಮತ್ತಿತರರಿದ್ದರು.

Comments

comments

Comments are closed.

Read previous post:
4KinniKindi
ಕೃಷಿ ಬದುಕು ಹಸನಾಗಲು ಕಿಂಡಿಅಣೆಕಟ್ಟು ರಹದಾರಿ

ಕಿನ್ನಿಗೋಳಿ : ನಮ್ಮ ರಾಜ್ಯದಲ್ಲಿ ವಿದ್ಯಾವಂತರು ಕೃಷಿಯತ್ತ ಮನ ಮಾಡದೆ ವಿದೇಶದ ಕೆಲಸಗಳ ಬಗ್ಗೆ ಗಮನ ನೀಡುತ್ತಿದ್ದಾರೆ. ಹಿರಿಯರು ಯುವ ಜನಾಂಗಕ್ಕೆ ಕೃಷಿ ಬದುಕಿನ ಅರಿವು ಮೂಡಿಸಬೇಕು ಎಂದು...

Close