ಹೆದ್ದಾರಿ ಬದಿಯಲ್ಲಿ ತ್ಯಾಜ್ಯ

ಕಿನ್ನಿಗೋಳಿ: ಮಹತ್ವದ ಸಂಕಲ್ಪ ಯೋಜನೆಯಾದ ಸ್ವಚ್ಚ ಭಾರತ್ ದೇಶಾದ್ಯಂತ ಸಕ್ರಿಯವಾಗಿ ನಡೆಯುತ್ತಿದ್ದರೂ ನಗರ ಸಹಿತ ಜಿಲ್ಲೆಯ ಎಲ್ಲೆಂದರಲ್ಲಿ ರಸ್ತೆ ಬದಿಯಲ್ಲೇ ತ್ಯಾಜ್ಯ ಎಸೆಯುವ ಪ್ರವೃತ್ತಿ ಇನ್ನೂ ಮುಂದುವರಿದಿದ್ದು, ಕಾನೂನುಗಳಿಗೆ ಯಾವುದೇ ಬೆಲೆ ಇಲ್ಲದಂತಾಗಿದೆ.
ಈ ಸಮಸ್ಯೆಯಿಂದ ರಸ್ತೆ ಬದಿಗಳು ಅಸಹ್ಯಕರವಾಗಿ ಗೋಚರಿಸುತ್ತಿವೆ. ಅವಿಭಜಿತ ದಕ್ಷಿಣಕನ್ನಡ ರಾಜ್ಯ ಹೆದ್ದಾರಿ ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ತ್ಯಾಜ್ಯದ ರಾಶಿಗಳಿಂದಾಗಿ ಅಕ್ಷರಶಃ ಕಸ ಹಾಕುವ ಕೊಂಪೆಯಾಗಿದೆ. ಜನರ ಸಮಸ್ಯೆಗಳನ್ನು ಪರಿಹರಿಸುವುದಾಗಿ ಹೇಳಿಕೊಂಡು ಅಧಿಕಾರಕ್ಕೆ ಬಂದಿರುವ ನಾಯಕರು ಸಂಪೂರ್ಣವಾಗಿ ಜನರ ಸಮಸ್ಯೆಗಳನ್ನು ಮರೆತಿದ್ದಾರೆ.

ಈ ರಸ್ತೆಗಳಲ್ಲಿ ನಿತ್ಯ ವಿದ್ಯಾರ್ಥಿಗಳು, ಕಾರ್ಮಿಕರು, ಸಾರ್ವಜನಿಕರು ಸೇರಿದಂತೆ ಸಾವಿರಾರು ಜನರು ಓಡಾಡುತ್ತಾರೆ. ಹೀಗಾಗಿ ಪಾದಚಾರಿಗಳು ಜೀವ ಭಯದಲ್ಲಿ ರಸ್ತೆಯಲ್ಲಿಯೇ ಹೆಜ್ಜೆ ಹಾಕಬೇಕಾಗಿದೆ. ಗೋಣಿ ಚೀಲಗಳಲ್ಲಿ ತುಂಬಿಸಿ ಇಲ್ಲವೆ ರಸ್ತೆ ಬದಿಯುದ್ದಕ್ಕೂ ಚೆಲ್ಲಾಪಿಲ್ಲಿಯಾಗಿ ಎಸೆದು ಪರಾರಿಯಾಗುವ ಕಿಡಿಗೇಡಿಗಳೂ ಕಮ್ಮಿಯಿಲ್ಲ. ಕಟ್ಟಡ ತ್ಯಾಜ್ಯ ಮಾತ್ರವಲ್ಲದೆ ಗಿಡಗಂಟಿಗಳನ್ನು ತೆರವು ಮಾಡಿದವರು ಹೀಗೆ ಅನೇಕರಿಗೆ ತ್ಯಾಜ್ಯಗಳನ್ನು ಸುರಿಯಲು ರಸ್ತೆಯ ಇಕ್ಕೆಲಗಳು ಮೆಚ್ಚಿನ ತಾಣಗಳಾಗುತ್ತಿವೆ. ರಾತ್ರೋರಾತ್ರಿ ಸದ್ದಿಲ್ಲದೆ ಕಸ ಗುಡ್ಡೆ ಹಾಕಿ ಹೋಗುವ ಚಾಳಿ ಹೆಚ್ಚುತ್ತಿದೆ. ವಾಹನ ಚಾಲಕರು ಪ್ಲಾಸ್ಟಿಕ್ ಚೀಲಗಳಲ್ಲಿ ತ್ಯಾಜ್ಯ ವಸ್ತುಗಳನ್ನು ತಂದು ವಾಹನ ಚಾಲನೆ ಸ್ಥಿತಿಯಲ್ಲಿಯೇ ಬಿಸಾಡಿ ಹೋಗುತ್ತಾರೆ
ಇದಕ್ಕೆ ಈಗಲೇ ಕಡಿವಾಣ ಹಾಕದೆ ಹೋದರೆ ಭವಿಷ್ಯದಲ್ಲಿ ಭಾರೀ ಬೆಲೆ ತೆರಬೇಕಾಗುತ್ತದೆ ಎನ್ನುತ್ತಾರೆ ಪ್ರಜ್ಞಾವಂತ ನಾಗರಿಕರು.
ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಯಲ್ಲಿ ತ್ಯಾಜ್ಯ ಕಸಗಳ ರಾಶಿಯಾದ ಪರಿಣಾಮ ವಾಹನ ಚಾಲಕರು ಹಾಗೂ ಪಾದಾಚಾರಿ ವ್ಯಕ್ತಿಗಳಿಗೆ ಪ್ರಾಣ ಭೀತಿ ಎದುರಾಗಿದೆ. ಹಳಸಿದ ಆಹಾರ ಪದಾರ್ಥಗಳ ಆಸೆಗೆ ಬರುವ ಬೀಡಾಡಿ ಪ್ರಾಣಿಗಳು ಏಕಾಏಕಿ ರಸ್ತೆ ದಾಟುವ ಕಾರಣ ವಾಹನ ಚಾಲಕರಿಗೆ ಸಮಸ್ಯೆಯಾಗಿದ್ದು ದ್ವಿಚಕ್ರವಾಹನ ಚಾಲಕರು ಬಿದ್ದು ಗಾಯಗೊಂಡಿರುವ ಹಲವಾರು ಪ್ರಕರಣಗಳು ನಡೆದಿವೆ. ಆಹಾರದ ಆಸೆಯಿಂದ ಬರುವ ದನಗಳು ಪ್ಲಾಸ್ಟಿಕ್ ಚೀಲ ಸಮೇತ ಆಹಾರ ತಿನ್ನುವ ಕಾರಣ ಅವುಗಳ ಹೊಟ್ಟೆಯಲ್ಲಿ ಪಚನವಾಗದೆ ರೋಗಗ್ರಸ್ಥವಾಗುತ್ತದೆ. ಬೀಡಾಡಿ ನಾಯಿಗಳು ಆಹಾರಕ್ಕಾಗಿ ಜಗಳವಾಡುವ ಸಂದರ್ಭ ರಸ್ತೆಯಲ್ಲಿ ಓಡಾಡಿ ವಾಹನ ಚಾಲಕರಿಗೆ ಸಮಸ್ಯೆ ಉಂಟುಮಾಡಿದರೆ ರೋಷಗೊಂಡಿರುವ ಸಂದರ್ಭ ರಸ್ತೆಯಲ್ಲಿ ಪ್ರಯಾಣಿಸುವ ಮಕ್ಕಳು ಮತ್ತು ವಾದಾಚಾರಿ ವ್ಯಕ್ತಿಗಳ ಮೇಲೆ ಎಗರಿ ಕಚ್ಚಿಗಾಯಗೊಳಿಸಿವೆ.
ಆಹಾರದ ಆಸೆಯಿಂದ ತ್ಯಾಜ್ಯ ಚೀಲಗಳನ್ನು ರಸ್ತೆ ಮಧ್ಯದವರೆಗೂ ಪ್ರಾಣಿಗಳು ಎಳೆದಾಡುವುದರಿಂದ ರಸ್ತೆ ಪೂರ್ತಿ ಆಹಾರ ಪದಾರ್ಥ ಚೆಲ್ಲಿ ದುರ್ವಾಸನೆಗೆ ಕಾರಣವಾಗುತ್ತದೆ. ಇನ್ನು ಕಾಗೆ ಗಿಡುಗ ಮುಂತಾದ ಹಕ್ಕಿಗಳು ಈ ತ್ಯಾಜ್ಯಗಳನ್ನು ಎತ್ತಿಕೊಂಡುಹೋಗಿ ಪರಿಸರದ ತೋಟಗಳಲ್ಲಿ ಹಾಕುವುದರಿಂದ ಪರಿಸರದ ಜನರಿಗೂ ಸಮಸ್ಯೆಯಾಗುತ್ತಿದೆ.

ಹಳೆಯಂಗಡಿ
ಹಳೆಯಂಗಡಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮಂಗಳೂರಿನತ್ತ ಸಂಚರಿಸುವ ಹಾಗೂ ಅದರ ಎದುರಿನಲ್ಲಿಯೇ ಉಡುಪಿಯತ್ತ ಸಂಚರಿಸುವ ರಸ್ತೆಯ ಅಂಚಿನಲ್ಲಿ (ಹಳೆಯಂಗಡಿ ಧಾಭಾ ಹಾಗೂ ಅಮೀನ್ ಮೂಲಸ್ಥಾನ ಬಳಿ ) ತ್ಯಾಜ್ಯವನ್ನು ಯಾವುದೇ ಅಂಜಿಕೆ ನಾಚಿಕೆ ಇಲ್ಲದೇ ತ್ಯಾಜ್ಯಗಳನ್ನು ಸುರಿಯುತ್ತಿರುವುದರಿಂದ ಹಳೆಯಂಗಡಿ ಗ್ರಾಮ ಪಂಚಾಯಿತಿ ಅಸಹಾಯಕ ಸ್ಥಿತಿಯಲ್ಲಿ ಪರಿತಪಿಸುವಂತಹ ಪರಿಸ್ಥಿತಿ ಎದುರಾಗಿದೆ. ಹಳೆಯಂಗಡಿ ಗ್ರಾಮ ಪಂಚಾಯತ್ ವರ್ಷಕ್ಕೆ 12 ಲಕ್ಷ ರೂ.ಗಳನ್ನು ತ್ಯಾಜ್ಯ ವಿಲೇವಾರಿಗೆಂದು ಖರ್ಚು ಮಾಡುತ್ತಿದ್ದು ಸ್ವಚ್ಚತೆಗೆ ಸಾಕಷ್ಟು ಶ್ರಮಿಸಿದರೂ ಹೆದ್ದಾರಿ ಬಳಿಯ ತ್ಯಾಜ್ಯಕ್ಕೆ ಕಡಿವಾಣ ಹಾಕಲು ಸಾಧ್ಯವಾಗುತ್ತಿಲ್ಲ. ಪಂಚಾಯಿತಿ ವ್ಯಾಪ್ತಿಯಲ್ಲಿ ಮನೆ ಮನೆಯ ಕಸತ್ಯಾಜ್ಯಗಳನ್ನು ಸಮರ್ಪಕವಾಗಿ ವಿಲೇವಾರಿ ಗೊಳ್ಳುತ್ತಿದೆ. ಆದರೆ ದ್ವಿಚಕ್ರ ವಾಹನದಲ್ಲಿ, ಕಾರು, ಟೆಂಪೋಗಳಲ್ಲಿ ಹೊರಗಿನ ಮಂದಿ ತ್ಯಾಜ್ಯವನ್ನು ಎಸೆದು ಹೋಗುವವರ ಸಂಖ್ಯೆ ಹಳೆಯಂಗಡಿಯಲ್ಲಿ ಕಂಡು ಬರುತ್ತಿದೆ. ಹೆದ್ದಾರಿಯ ಎರಡು ಪ್ರದೇಶದಲ್ಲಿಯೂ ಅಲ್ಲಲ್ಲಿ ಗ್ರಾಮ ಪಂಚಾಯತ್ ಎಚ್ಚರಿಕೆಯ ಫಲಕವನ್ನು ಹಾಕಿದ್ದರೂ ತ್ಯಾಜ್ಯ ಸುರಿಯುವುದು ಮಾತ್ರ ನಿಂತಿಲ್ಲ. ಕಳೆದ ಕೆಲ ದಿನಗಳ ಹಿಂದೆ ಪಂಚಾಯಿತಿಯಿಂದ ಸ್ವಚ್ಛತೆಗೊಂಡ ಇದೇ ಹಳೆಯಂಗಡಿ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಮತ್ತೆ ಕೆಲ ದುಷ್ಕರ್ಮಿಗಳು ತ್ಯಾಜ್ಯ ಎಸೆಯಲಾರಂಭಿಸಿದ್ದಾರೆ.

ಪಾವಂಜೆ ಸೇತುವೆ
ಪಾವಂಜೆ ಸೇತುವೆಯಲ್ಲೂ ಎಚ್ಚರಿಕೆಯ ಫಲಕವನ್ನು ಹಾಕಿದ್ದರೂ ಸಹ ನೀರಿಗೆ ತಡ ರಾತ್ರಿ ಸಮಯದಲ್ಲಿ ತ್ಯಾಜ್ಯವನ್ನು ವ್ಯವಸ್ಥಿತವಾಗಿ ಸುರಿಯುವ ಜನರಿದ್ದಾರೆ. ತ್ಯಾಜ್ಯ ಸುರಿಯುತ್ತಿದ್ದಾಗಲೇ ಫೋಟೋ ಕ್ಲಿಕ್ಕಿಸಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಂಡಿದ್ದರೂ ಸಹ ಯಾವುದೇ ರೀತಿಯಲ್ಲಿ ಪರಿಣಾಮ ಬೀರಿಲ್ಲ ಬದಲಾಗಿ ತ್ಯಾಜ್ಯ ಹೆಚ್ಚಾಗುತ್ತಲೇ ಇದೆ
ಕಾನೂನಾತ್ಮಕವಾಗಿ ಕಡಿವಾಣ ಹಾಕಲು ಪಂಚಾಯತ್ ಒಟ್ಟಾರೆ ಅಸಹಾಯಕವಾಗಿದೆ.
.

ಇಂದಿರಾ ನಗರ
ಹಳೆಯಂಗಡಿಯಿಂದ ಪಕ್ಷಿಕೆರೆಗೆ ಸಂಚರಿಸುವ ರಸ್ತೆಯಾದ ಇಂದಿರಾನಗರದ ರೈಲ್ವೇ ಗೇಟ್‌ನ ಮುಂಭಾಗದಲ್ಲಿಯೂ ಯಾರೋ ಹೊರಗಿನ ವ್ಯಕ್ತಿಗಳು ತ್ಯಾಜ್ಯವನ್ನು ಎಸೆಯುತ್ತಿದ್ದಾರೆ.

ಕುಬೆಯೂರು
ಕಿಲ್ಪಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೂಲ್ಕಿ ಮೂಡಬಿದ್ರೆ ರಾಜ್ಯ ಹೆದ್ದಾರಿಯ ಕುಬೆವೂರು ರೈಲ್ವೇ ಸೇತುವೆಯ ಬಳಿ ರಸ್ತೆಬದಿ ಪ್ಲಾಸ್ಟಿಕ್ ಚೀಲಗಳಲ್ಲಿ ತ್ಯಾಜ್ಯ ವಸ್ತುಗಳನ್ನು ತುಂಬಿಸಿ ಬಿಸಾಡಿರುವುದು ಕಿಲ್ಪಾಡಿ ಪಂಚಾಯಿತಿಗೆ ತಲೆನೋವಾಗಿದೆ.

ಕಿನ್ನಿಗೋಳಿ ಎಸ್. ಕೋಡಿ ಇಂಗು ಗುಂಡಿ
ಎಸ್. ಕೋಡಿ ಸಮೀಪ ಹಲವಾರು ವರ್ಷಗಳ ಹಿಂದೆ ದೊಡ್ಡ ಕೆರೆ ಮಾದರಿಯ ಇಂಗು ಗುಂಡಿಯೊಂದನ್ನು ಸಹೃದಯಸ್ಥರು ರಚಿಸಿದ್ದು ಇದರಿಂದಾಗಿ ಸಮೀಪದ ಹಲವು ಮನೆಗಳ ಭಾವಿಗಳಲ್ಲಿ ಬೇಸಿಗೆ ಸಮಯದಲ್ಲೂ ನೀರಿನ ಸಮಸ್ಯೆ ಬಂದಿಲ್ಲ. ಇತ್ತೀಚೆಗೆ ಎರಡು ಮೂರು ವರ್ಷಗಳಿಂದ ಇದರ ಸಮೀಪವೇ ಗೃಹ ಬಳಕೆ ಘನ ದ್ರವ ತ್ಯಾಜ್ಯಗಳನ್ನು ಎಸೆದು ಅಲ್ಲದೆ ದಾರಿಹೋಕರು ಕಸತ್ಯಾಜ್ಯಗಳನ್ನು ಎಸೆದು ಹೋಗುತ್ತಿರುವುದರಿಂದ ಸಮೀಪದ ಮನೆಯವರು ಇಕ್ಕಟ್ಟಿನ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಹಲವಾರು ಬಾರಿ ಸ್ವಚ್ಚತೆ ಮಾಡಿದ್ದರೂ ಪುನ: ಕಸದ ರಾಶಿ ಹೆಚ್ಚಾಗುತ್ತಿದೆ.

ಮುಲ್ಕಿ ಹೋಬಳಿಯ ಎಲ್ಲಾ ಪಂಚಾಯಿತಿಗಳು ತ್ಯಾಜ್ಯ ವಿಲೇವಾರಿಗೆ ಮುತುವರ್ಜಿ ಹಾಗೂ ಜನರಿಗೆ ಸ್ವಚ್ಚ ಭಾರತದ ಜಾಗೃತಿ ಮೂಡಿಸಬೇಕಾಗಿದೆ ಅಲ್ಲದೆ ಜನರು ಕೂಡಾ ತಮ್ಮ ಮನೆ ಪರಿಸರ ಸ್ವಚ್ಚತೆಗೆ ಗಮನ ಕೊಟ್ಟು ಪಂಚಾಯಿತಿ ಆಡಳಿತಕ್ಕೆ ಕಾಯದೆ ತಾವೇ ಸ್ವಚ್ಚವಾಗಿಟ್ಟುಕೊಳ್ಳುವುದನ್ನು ರೂಡಿಸಬೇಕಾಗಿದೆ. ಕೆಲವೊಂದು ಪಂಚಾಯಿತಿಗಳು ಈಗಾಗಲೇ ಎಚ್ಚೆತ್ತುಕೊಂಡು ತಮ್ಮ ವ್ಯಾಪ್ತಿಯಲ್ಲಿ ಸ್ವಚ್ಛತೆಗಾಗಿ ಹಲವಾರು ಯೋಜನೆಗಳನ್ನು ಕೈಗೊಂಡು ಸ್ವಚ್ಛ ಭಾರತದ ನಿರ್ಮಾಣದಲ್ಲಿ ಕೈಜೋಡಿಸುತ್ತಿದೆ.

ಹಳೆಯಂಗಡಿ ಗ್ರಾಮ ಪಂಚಾಯಿತಿನ ಜನ ವಸತಿ ಇಲ್ಲದ ಪರಿಸರದ ಜಮೀನನ್ನು ತ್ಯಾಜ್ಯ ವಿಲೆವಾರಿ ಘಟಕಕ್ಕೆ ಮಂಜೂರು ಮಾಡಲು ನಿರಂತರವಾಗಿ ಪ್ರಯತ್ನ ಮಾಡಲಾಗುತ್ತಿದೆ ಇದು ಸಾಧ್ಯವಾದಲ್ಲಿ ಕಸ ತ್ಯಾಜ್ಯಕ್ಕೆ ಮುಕ್ತಿ ದೊರಕಬಹುದು. ಹೆದ್ದಾರಿ ಬದಿಯ ತ್ಯಾಜ್ಯಕ್ಕೂ ಕಡಿವಾಣ ಹಾಕಲು ನಮ್ಮಿಂದ ಸಾಧ್ಯವಾಗಬಹುದು.
ಎಚ್. ವಸಂತ ಬೆರ್ನಾಡ್
ಅಧ್ಯಕ್ಷರು
ಗ್ರಾಮದ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಸಮಿತಿ
ಹಳೆಯಂಗಡಿ ಗ್ರಾಮ ಪಂಚಾಯಿತಿ

ನಿರ್ದಿಷ್ಟ ಜಮೀನು ಮಂಜೂರಾದಲ್ಲಿ, ವೈಜ್ಞಾನಿಕವಾಗಿ ತ್ಯಾಜ್ಯ ಘಟಕವನ್ನು ನಿರ್ಮಿಸಲು 20 ಲಕ್ಷ ರೂ. ಮಂಜೂರಾಗುತ್ತದೆ. ಪ್ರತೀ ವರ್ಷಕ್ಕೆ ಖರ್ಚು ಮಾಡುವ ಹಣವು ಸಹ ಹೆಚ್ಚಾಗಿ ವ್ಯಯವಾಗದೇ ಘಟಕದಲ್ಲಿಯೇ ತ್ಯಾಜ್ಯವನ್ನು ವಿಲೇವಾರಿ ಮಾಡಬಹುದು ಘಟಕದ ಚಾಲನೆಯಿಂದ ಕೃಷಿಗೆ ಸಂಬಂಧಿಸಿದ ಗೊಬ್ಬರವನ್ನು ತಯಾರಿಸಲು ಅನುಕೂಲಕರ ವಾತಾವರಣ ನಿರ್ಮಾಣವಾಗಲಿದೆ.
ಜಲಜಾ
ಅಧ್ಯಕ್ಷರು
ಹಳೆಯಂಗಡಿ ಗ್ರಾಮ ಪಂಚಾಯತ್.

ಹೆದ್ದಾರಿಯಲ್ಲಿ ಶೋಭೆಯಲ್ಲ…
ರಾಷ್ಟ್ರೀಯ ಹೆದ್ದಾರಿಯಲ್ಲಿ ಯೇ ತ್ಯಾಜ್ಯ ಸಂಗ್ರಹಗೊಳ್ಳುತ್ತಿರುವುದು ಜಿಲ್ಲೆಗೆ ಶೋಭೆಯಲ್ಲ. ಹೆದ್ದಾರಿ ಇಲಾಖೆಯು ಇಲ್ಲಿ ಸಹ ಸ್ವಚ್ಚಗೊಳಿಸುವ ಅಥವ ನಿರ್ವಹಣೆಯ ಜವಬ್ದಾರಿ ಮಾಡುತ್ತಿಲ್ಲ. ಸ್ವಚ್ಚತೆಗೆ ಸಂಬಂಧಪಟ್ಟ ಇಲಾಖೆಗಳು ಮುತುವರ್ಜಿ ವಹಿಸಿಕೊಳ್ಳಬೇಕು
ಎಚ್.ರಾಮಚಂದ್ರ ಶೆಣೈ ಹಳೆಯಂಗಡಿ.
ಸಾಮಾಜಿಕ ಕಾರ್ಯಕರ್ತರು.

Kinnigoli-14121701

 

Comments

comments

Comments are closed.

Read previous post:
Kinnigoli-13121702
ಪಕ್ಷಿಕೆರೆ ಎಸಿಬಿ ದಾಳಿ : ದಾಖಲೆಗಳ ವಶ

ಕಿನ್ನಿಗೋಳಿ : ಹಲವು ಕಡೆಗಳಲ್ಲಿ ಎಸಿಬಿ ಬುಧವಾರ ಮುಂಜಾನೆ ಭ್ರಷ್ಟರ ಮನೆ ಕಛೇರಿಗಳಿಗೆ ದಾಳಿ ಮಾಡಿ ಬಿಸಿ ಮುಟ್ಟಿಸಿದೆ. ಬಂಟ್ವಾಳದ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಪಿ.ಎಫ್.ಮಿರಾಂದ ಅವರ...

Close