ಗೇರು ಹಣ್ಣಿನ ಉತ್ಪನ್ನದ ಸಾಧಕ

ಕಿನ್ನಿಗೋಳಿ : ಇತ್ತೀಚಿನ ದಿನಗಳಲ್ಲಿ ಕೃಷಿಗೆ ಬಗ್ಗೆ ತಾತ್ಸಾರ ಹೊಂದಿ ಕೇವಲ ಹಣ ಸಂಪದನೆಯನ್ನೇ ತನ್ನ ಕಾಯಕ ಎಂದು ಎಣಿಸುತ್ತಿರುವ ಯುವ ಜನರಿಗೆ ಸವಾಲಾಗಿ ಕೃಷಿಯೂ ಉತ್ತಮ ಲಾಭದಾಯಕ ಎಂದು ತೋರಿಸಿ ಕೊಟ್ಟಿದ್ದಾರೆ ಕೆಂಚನಕೆರೆಯ ಪ್ರಕೃತಿ ನರ್ಸರಿಯ ಯುವಕ ಕೆನ್ಯೂಟ್ ಅರಾಹ್ನ ಕೆಂಚನಕೆರೆ.
ಕೃಷಿಯಲ್ಲಿ ಡಿಪ್ಲೊಮಾ ಪದವಿ ಹೊಂದಿದ ಕೆನ್ಯೂಟ್ ತಂದೆಯ ಕಾಯಕದ ಕೃಷಿ ಭೂಮಿಯನ್ನು ಸಂಪದ್ಬರಿತವಾಗಿ ಮಾಡಲು ಹಲವಾರು ಕ್ರಮಗಳನ್ನು ಕೈಗೊಂಡು ವರ್ಷದ ಎಲ್ಲಾ ತಿಂಗಳಲ್ಲಿ ಇಳುವರಿ ಕೊಡುವ ಬೆಳೆಗಳನ್ನು ತಮ್ಮ ಜಮೀನಿನಲ್ಲಿ ಅಳವಡಿಸಿದ್ದಾರೆ.
ಗೇರು ಹಣ್ಣಿನ ಬಗ್ಗೆ ಆಸಕ್ತಿ ಹೊಂದಿ ಗೇರುಹಣ್ಣಿನ ಜ್ಯೂಸ್, ಸಿರಪ್, ಹಲ್ವಾ, ಜಾಮ್ ತಯಾರಿಸಿ ಗೇರು ಹಣ್ಣು ಆರೋಗ್ಯಕ್ಕೆ ಹಿತಕರ ಎಂಬುದನ್ನು ಸಾಧಿಸಿ ತೋರಿಸಿದ್ದಾರೆ.
ಸಾವಿರಾರು ಬಾಟಲಿಗಳಲ್ಲಿ ಗೇರುಹಣ್ಣಿನ ಜ್ಯೂಸ್ ತಯಾರಿಸಿ ಮಾರುಕಟ್ಟೆಯಲ್ಲಿ ವಿಶಿಷ್ಠ ರೀತಿಯಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ಕಿನ್ನಿಗೋಳಿ, ಮೂಲ್ಕಿ, ಸುರತ್ಕಲ್, ಹಳೆಯಂಗಡಿ, ಪಡುಬಿದ್ರೆ, ಎರ್ಮಾಳು ಹಾಗೂ ಮಣಿಪಾಲದ ಕೆಲ ಅಂಗಡಿಗಳಲ್ಲಿ ಕೆನ್ಸ್ ಫ್ರೆಶ್ ಕ್ಯಾಶ್ಯೂ ಜ್ಯೂಸ್ ಲಭ್ಯವಿದೆ.
ಐದು ಎಕರೆ ಭೂಮಿಯನ್ನು ಕೃಷಿ ಕ್ಷೇತ್ರವಾಗಿ ಮಾರ್ಪಡಿಸಿದ್ದಾರೆ. ಮೂರು ಎಕರೆಯಲ್ಲಿ ಐನೂರರಷ್ಟು ಗೇರುಗಿಡಗಳನ್ನು ನೆಟ್ಟಿದ್ದು, ಉಳ್ಳಾಲ 1, 2,3 ಸ್ಥಳೀಯ ತಳಿ, ಭಾಸ್ಕರ ಹೀಗೆ ಸುಮಾರು 12 ತಳಿಗಳನ್ನು ಹೊಂದಿದ್ದಾರೆ. ಜನವರಿಯಲ್ಲಿ ಗೇರು ಮರಗಳು ಫಲ ನೀಡಲು ಆರಂಭಿಸುತ್ತವೆ. ಇನ್ನು ಕೆಲವು ಫೆಬ್ರವರಿ, ಮಾರ್ಚ್ ಹೀಗೆ. ಒಟ್ಟಾರೆ ಮೇ ತಿಂಗಳ ತನಕ ಗೇರು ಇಳುವರಿ ಬರುತ್ತದೆ. ಶಾಲೆಯ ರಜೆ ಕಳೆಯಲು ಸ್ಥಳೀಯ ಹತ್ತರಷ್ಟು ಮಕ್ಕಳು ಇವರ ಮನೆಯಲ್ಲಿ ಗೇರು ಜ್ಯೂಸ್ ಮಾಡುವ ಕಾಯಕದಲ್ಲಿ ನೆರವಾಗುತ್ತಾರೆ. ಈ ಮಕ್ಕಳಿಗೆ ಶಿಕ್ಷಣಕ್ಕೆ ಕೆನ್ಯೂಟ್ ಸಹಕಾರ ನೀಡುತ್ತಾರೆ. ಅಲ್ಲದೆ ಕೃಷಿ ಕ್ಷೇತ್ರದ ಮಹತ್ವ ಮಾಹಿತಿ ನೀಡಿ ಅವರನ್ನು ಕೃಷಿ ಕ್ಷೇತ್ರದಲ್ಲಿ ಆಸಕ್ತಿ ಹೊಂದುವಂತೆ ತರಬೇತಿ ನೀಡುತ್ತಿದ್ದಾರೆ.
ಬಿದ್ದ ಗೇರುಹಣ್ಣನ್ನು ಸಂಗ್ರಹಿಸಿ, ಚೆನ್ನಾಗಿರುವ ಹಣ್ಣುಗಳನ್ನು ಪ್ರತ್ಯೇಕಿಸಿ, ಸ್ವಚ್ಛಗೊಳಿಸಿ, ತುಂಡರಿಸಿದ ಬಳಿಕ ಕೆನ್ಯೂಟ್ ಅವರೇ ತಯಾರಿಸಿದ ಪುಟ್ಟ ಯಂತ್ರದಲ್ಲಿ ಹಾಕಿ, ರಸ ಸಂಗ್ರಹಿಸಲಾಗುತ್ತದೆ. ಬಳಿಕ ಅದನ್ನು ಜ್ಯೂಸ್ ಮಾಡಲಾಗುತ್ತದೆ. ಸಿರಪ್ ಮಾಡಲಾಗುತ್ತದೆ. ಗೇರು ಹಲ್ವ ಜಾಮ್ ತಯರಿಸುವ ನಿಪುಣತೆ ಹೊಂದಿದ್ದಾರೆ ಇವರ ಹಲ್ವ ಹಾಗೂ ಜಾಮ್ ಗಳಿಗೂ ಬಹು ಬೇಡಿಕೆಯಿದ್ದು, ಇವುಗಳನ್ನು ತಯಾರಿಸಲು ಸ್ವಲ್ಪ ಕಷ್ಟವಿದೆ. ಎಲ್ಲವೂ ಆರು ತಿಂಗಳ ಕಾಲ ಬಾಳ್ವಿಕೆ ಬರುತ್ತದೆ. ಜ್ಯೂಸ್ ಸಿರಪ್‌ಗಳಲ್ಲಿ ಬಾಟಲಿಗಳಲ್ಲಿ ತುಂಬಿಸಿ ಅಂಗಡಿಗಳಿಗೆ ಮಾರಾಟಕ್ಕೆ ನೀಡುತ್ತಾರೆ. ಗೇರುಬೀಜಕ್ಕಿಂತ ಎರಡು ಪಟ್ಟು ಹೆಚ್ಚು ಆದಾಯ ಜ್ಯೂಸ್‌ನಲ್ಲಿದೆ ಎನ್ನುತ್ತಾರೆ ಕೆನ್ಯೂಟ್. ಕಳೆದ ವರ್ಷಕ್ಕಿಂತ ಈ ವರ್ಷ ಇಳುವರಿ ಮೂರನೇ ಒಂದರಷ್ಟು ಕಡಿಮೆಯಗಿದೆ ಎಲ್ಲಾ ಕಡೆಗಳಲ್ಲೂ ಇಳುವರಿ ಕಡೆಮೆಯಿದೆ. ಹಾಗಾಗಿ ಬೇಡಿಕೆ ಇದ್ದಷ್ಟು ಜ್ಯೂಸ್ ಪೂರೈಕೆ ಮಾಡಲಾಗುತ್ತಿಲ್ಲ. ಈ ಜ್ಯೂಸ್ ಅಥವಾ ಸಿರಪ್ ಆರೋಗ್ಯದಾಯಕವೂ ಹೌದು. ಹೆಚ್ಚಿನ ಕಾರ್ಬೋಹೈಡ್ರೇಟ್ ಗಳನ್ನೊಳಗೂಡಿದ ಇದು ಅಸ್ತಮಾ ಹಾಗೂ ಗರ್ಭೀಣಿಯರಿಗೆ ಉತ್ತಮವಾಗಿದೆ.
ಕೃಷಿ ಇಲಾಖೆಯವರೊಂದಿಗೆ ಕೃಷಿ ಸಂಬಂಧ ಪ್ರವಾಸಕ್ಕೆ ಹೋದಾಗ ಗೇರುಹಣ್ಣಿನ ಜ್ಯೂಸ್ ಬಗ್ಗೆ ಮಾಹಿತಿ ಸಿಕ್ಕಿತು. ಮಂಗಳೂರು ಹಾಗೂ ಬ್ರಹ್ಮಾವರ ಕೃಷಿ ಅಧ್ಯಯನ ಕೇಂದ್ರದವರ ಮಾರ್ಗದರ್ಶನದಲ್ಲಿ ಜ್ಯೂಸ್ ಮಾಡಲು ಆರಂಭಿಸಿದ ಕೆನ್ಯೂಟ್ ಅರಾಹ್ನ ಕಳೆದ ಮೂರು ವರ್ಷಗಳಲ್ಲಿ ಯಶಸ್ಸು ಕಂಡಿದ್ದಾರೆ. ಕಾಲು ಲೀಟರ್ ಗೇರುಹಣ್ಣಿನ ಜ್ಯೂಸ್‌ಗೆ ರೂ. 15 ಮಾರುಕಟ್ಟೆ ಬೆಲೆಯಿದೆ. ಕೃಷಿ ಇಲಾಖೆಯವರು ಹೇಳುವಂತೆ ಇಷ್ಟು ದೊಡ್ಡ ಮಟ್ಟದಲ್ಲಿ ಗೇರುಹಣ್ಣಿನ ಜ್ಯೂಸ್ ಮಾಡುವವರು ಕೆನ್ಯೂಟ್ ಅವರೇ ಆಗಿದ್ದಾರಂತೆ.
ಎರಡು ಎಕರೆ ಭೂಮಿಯಲ್ಲಿ ತೆಂಗು, ಅಡಿಕೆ ಮರಗಳಲ್ಲದೆ ಆರು ನೂರು ಅನಾನಸು ಗಿಡ, 75 ಹಲಸಿನ ಮರ ಅಷ್ಟೇ ಸಂಖ್ಯೆಯ ಮಾವಿನ ಮರಗಳನ್ನು ಬೆಳೆಸಿದ್ದಾರೆ. ಕಾಲಪಾಡಿ, ರಸಪೂರಿ, ಬೆನೆಟ್, ಆಲ್ಫೋನ್ಸಾ, ತೋತಪೂರಿ, ಬಳ್ಳಾರಿ, ನೆಕ್ಕರೆ, ಬಂಗನ್ ಪಳ್ಳಿ, ಜಲಜ ಹೀಗೆ ಅನೇಕ ತಳಿಯ ಮಾವಿನ ಹಣ್ಣಿನ ಮರಗಳಿವೆ. ಮುಂದಿನ ದಿನಗಳಲ್ಲಿ ಮಾವಿನ ಜ್ಯೂಸ್, ಪಲ್ಪ್ ಮಾಡುವ ಯೋಚನೆಯಿದೆ ಎನ್ನುತ್ತಾರೆ.
ಮಳೆಗಾಲದಲ್ಲಿ ಗಾರ್ಡನಿಂಗ್ ಮಾಡುತ್ತಾರೆ, ಪ್ರಕೃತಿ ನರ್ಸರಿಯಲ್ಲಿ ಅಂಥೋರಿಯಮ್ ಆರ್ಕಿಡ್ ಗಿಡಗಳನ್ನು ಬೆಳೆಸುತ್ತಾರೆ. ಬೇರೆ ಬೇರೆ ಗಿಡಗಳನ್ನೂ ಬೆಳೆಸಿ ಮಾರಾಟ ಮಾಡುತ್ತಾರೆ. ಕೃಷಿಗೆ ಪೂರಕವೆಂಬಂತೆ ಎಂಟು ದನಗಳನ್ನು ಸಾಕಿದ್ದಾರೆ. 15ರಿಂದ 20ಲೀಟರ್ ಹಾಲು ಉತ್ಪಾದನೆಯಿದೆ.
ದೆಹಲಿಯಲ್ಲಿ ನಡೆದ ಗೇರುಹಣ್ಣಿನ ಉತ್ಪನ್ನಗಳ ಪ್ರದರ್ಶನದಲ್ಲಿ ಭಾಗವಹಿಸಿದ್ದಾರೆ. ಅಲ್ಲಿ ಕೇಂದ್ರ ಸಚಿವರೂ ಸಹಿತ ಅಧಿಕಾರಿಗಳು, ಜ್ಯೂಸ್, ಹಲ್ವಾ ಸವಿದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎನ್ನುತ್ತಾರೆ ಕೆನ್ಯೂಟ್ ಅರಾಹ್ನ.

Kinnigoli-1804201802 Kinnigoli-1804201803 Kinnigoli-1804201804 Kinnigoli-1804201805 Kinnigoli-1804201806

Comments

comments

Comments are closed.

Read previous post:
Kinnigoli-1804201801
ಪಾವಂಜೆ : ಬ್ರಹ್ಮಕಲಶೋತ್ಸವಕ್ಕೆ ಪೂರ್ವ ಸಿದ್ಧತೆ

ಕಿನ್ನಿಗೋಳಿ : ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮೀ ದೇವಳದಲ್ಲಿ ಗುರುವಾರ (ಇಂದು) ನಡೆಯಲಿರುವ ಬ್ರಹ್ಮಕಲಶೋತ್ಸವಕ್ಕೆ ಪೂರ್ವ ಸಿದ್ಧತೆಗಳು ನಡೆದಿದೆ. ದೇವಳದಲ್ಲಿ ವಿಶ್ವ ಜಿಗೀಷದ್ ಯಾಗ ಹಾಗೂ ಮಹಾರಥೋತ್ಸವ ಸಂಭ್ರಮದ...

Close