ಜನಪದ ಕಲೆಯ ಮತಗಟ್ಟೆ

ಕಿನ್ನಿಗೋಳಿ: ಮತದಾನ ಹಬ್ಬದ ವಾತಾವರಣವನ್ನು ನಿರ್ಮಿಸುವ ಉದ್ದೇಶದಿಂದ ಗರಿಷ್ಠ ಪ್ರಮಾಣದಲ್ಲಿ ಮತದಾನ ಆಗಬೇಕು ಎಂಬ ಉದ್ದೇಶದಿಂದ ರಾಜ್ಯ ಚುನಾವಣಾ ಆಯೋಗದ ಸೂಚನೆಯಂತೆ, ಜಿಲ್ಲಾ ಸ್ವೀಪ್ ಸಮಿತಿಯ ನೇತೃತ್ವದಲ್ಲಿ ಕೆಲವು ಕ್ಷೇತ್ರಗಳ ಚುನಾವಣಾ ಮತಗಟ್ಟೆಗಳನ್ನು ಸಾಂಪ್ರದಾಯಿಕ ಹಾಗೂ ಪಿಂಕ್(ಮಹಿಳಾ ಕೇಂದ್ರಿತ) ಮತದಾನದ ಕೇಂದ್ರಗಳಾಗಿ ಮಾಡಲಾಗಿದ್ದು ಅದರಲ್ಲಿ ಕೆರೆಕಾಡಿನ ಮತಗಟ್ಟೆಯು ಒಂದು.
ಮೂಲ್ಕಿ ಹೋಬಳಿಯ ಪಡುಪಣಂಬೂರು ಗ್ರಾಮ ಪಂಚಾಯಿತಿಯ ಬೆಳ್ಳಾಯರು ಗ್ರಾಮದ ಕೆರೆಕಾಡು ಮೂಲ್ಕಿ ಮೂಡಬಿದಿರೆ ವಿಧಾನ ಸಭಾ ಕ್ಷೇತ್ರದ (201) ಮತಗಟ್ಟೆ ಸಂಖ್ಯೆ 119ನ್ನು ಸಾಂಪ್ರದಾಯಿಕ ಶೈಲಿಯಲ್ಲಿ ಬುಡಕಟ್ಟು ಜನಾಂಗದ ವೈಶಿಷ್ಠದ ಮಾದರಿಯಲ್ಲಿ ರಚಿಸಲು ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಂಡಿದೆ.

ಕೊರಗರ ಕಾಲೋನಿ ಪ್ರೇರಣೆ
ಕೆರೆಕಾಡು ಮತಗಟ್ಟೆಯು ಸಾಂಪ್ರದಾಯಿಕವಾಗಿ ಮತಗಟ್ಟೆಯಾಗಿ ಆಯ್ಕೆಯಾಗಲು ಪರಿಶಿಷ್ಟ ಪಂಗಡದ ವರ್ಗಕ್ಕೆ ಸೇರಿರುವ ಕೊರಗರ ಕಾಲೋನಿಯೇ ಮುಖ್ಯ ಪ್ರೇರಣೆಯಾಗಿದ್ದು ಸುಮಾರು 35 ಮನೆಗಳು ಹೊಂದಿರುವ ಈ ಪ್ರದೇಶದಲ್ಲಿ 85 ಮತದಾರರು ಇದ್ದಾರೆ. ತುಳುನಾಡಿನ ಸಾಂಪ್ರದಾಯಿಕ ಬುಡಕಟ್ಟು ಜನಾಂಗದ ಬಗ್ಗೆ ತಿಳಿ ಹೇಳುವ ಧ್ಯೇಯ ಉದ್ದೇಶ ಇದಾಗಿದೆ. ಈ ಕಾಲೋನಿಗೆ ಎರಡು ವರ್ಷದ ಹಿಂದೆ ರಾಜ್ಯ ಸರ್ಕಾರದ ಸಮಾಜ ಕಲ್ಯಾಣ ಸಚಿವ ಆಂಜನೇಯ ಅವರು ಸಹ ಗ್ರಾಮ ವಾಸ್ತವ್ಯ ಹೂಡಿದ್ದರಿಂದ ಹೆಚ್ಚು ಪ್ರಚಾರಕ್ಕೆ ಬಂದಿತ್ತು. ಈ ಪ್ರದೇಶದ ಕೊಲ್ಲು ಅವರು ಪಡುಪಣಂಬೂರು ಗ್ರಾಮ ಪಂಚಾಯಿತಿಯ ಹಿಂದಿನ ಅವಧಿಯಲ್ಲಿ ಮಹಿಳಾ ಮೀಸಲಾತಿಯಿಂದ 30 ತಿಂಗಳು ಅಧ್ಯಕ್ಷರಾಗಿದ್ದರು. ಇವರ ಸೊಸೆ ಪುಷ್ಪಾ ಯಾನೆ ಶ್ವೇತಾ ಪಂಚಾಯಿತಿಯ ಹಾಲಿ ಸದಸ್ಯೆಯಾಗಿದ್ದಾರೆ.

ಮತಗಟ್ಟೆಯ ವಿನ್ಯಾಸ:
ಮತದಾನ ನಮ್ಮೆಲ್ಲರ ಹಕ್ಕು ಎಂಬ ಘೋಷ ವಾಕ್ಯದೊಂದಿಗೆ, ಕಲಾಕಾರನ ಕಲಾ ಕೌಶಲ್ಯತೆಯಿಂದ ಕೆಂಪು ಬಣ್ಣದ ಹಿನ್ನೆಲೆಯಲ್ಲಿ ಬಿಳಿ ಬಣ್ಣದ ವರ್ಣ ಚಿತ್ತಾರಗಳು ಕಂಗೊಳಿಸುತ್ತಿದೆ. ಬುಡಕಟ್ಟು ಜನಾಂಗದ ಬಗ್ಗೆ ಚಿತ್ರಣ ಮೂಡಿದೆ. ಮತದಾರರು ಪ್ರವೇಶಿಸುವ ಸ್ವಾಗತ ಗೋಪುರವನ್ನು ನಿರ್ಮಿಸಿ ಹುಲ್ಲಿನ ಗರಿಕೆಯೊಂದಿಗೆ ಸಿಂಗರಿಸಿದ್ದು, ಕೆರೆಕಾಡಿನ ಕೊರಗರ ಕಾಲೋನಿಯಲ್ಲಿನ ಮೂಲ ನಿವಾಸಿಗಳ ಕುಲ ಕಸುಬಾದ ಬುಟ್ಟಿಗಳನ್ನು ಸಾಂಕೇತಿಕವಾಗಿ ಪ್ರದರ್ಶಿಸಲಾಗಿದೆ. ಅಕ್ಕ ಪಕ್ಕದಲ್ಲಿ ಕಾಪುವಿನ ಕಾಲೇ ಕೋಲ, ಕೊರಗ ಸಮುದಾಯದ ಡೋಲು ನಲಿಕೆಗಳ ಚಿತ್ರಗಳನ್ನು ಅಳವಡಿಸಿಲಾಗಿತ್ತು. ಒಳಗೆ ಮತದಾನ ಮಾಡುವ ಸ್ಥಳದಲ್ಲಿ ಗುಡಿಸಲಿನ ಮೇಲ್ಚಾವಣಿ ಹಾಕಲಾಗಿದ್ದು ಸುತ್ತಮುತ್ತ ಗೋಡೆಯಲ್ಲಿ ಕರಾವಳಿ ಗಂಡುಕಲೆ ಯಕ್ಷಗಾನ ಮುಖವರ್ಣಿಕೆ, ನೇಮೋತ್ವದಲ್ಲಿ ಬಳಕೆ ಮಾಡುವ ಹಸಿ ಗರಿಯ ಆಕೃತಿಗಳು, ಬಣ್ಣ ಬಣ್ಣದ ಚಿತ್ತಾರಗಳು, ಜನಪದ ಲೋಕಕ್ಕೆ ಕೊಂಡೊಯ್ಯುತ್ತಿದೆ.

ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳ ಸೂಚನೆಯಂತೆ ಮತ ಹಾಕುವ ಶಾಲೆಯನ್ನು ಸಿಂಗರಿಸಲು ಸಂಬಂಧಿಸಿದವರು ಕೇಳಿಕೊಂಡಾಗ ನಮ್ಮ ಕಸುಬು ಹಾಗೂ ಸಂಪ್ರದಾಯದ ಬಗ್ಗೆ ಸವಿವರವಾಗಿ ನಮ್ಮಿಂದಾದಷ್ಟು ಪ್ರಯತ್ನ ಮಾಡಿದ್ದೇವೆ.
ಬಾಡು ಕೆರೆಕಾಡು.
ಕೊರಗರ ಕಾಲೋನಿ ಗುರಿಕಾರರು.

ಜಿಲ್ಲಾಡಳಿತ ನಮ್ಮ ಕೆರೆಕಾಡಿನ ಸಣ್ಣ ಗ್ರಾಮವನ್ನು ಸಾಂಪ್ರದಾಯಿಕ ಮತಗಟ್ಟೆಯಾಗಿ ಗುರುತಿಸಿರುವುದು ಶ್ಲಾಘನೀಯ. ಈ ಮತಗಟ್ಟೆಯಲ್ಲಿ 1095 ಮತಗಳಿದ್ದು ಶೇ. 90 ಮತದಾನ ಆಗುವುದು ನಿಶ್ಚಿತ, ಕೊರಗ ಸಮುದಾಯವು ಸಹ ಸಮಾಜದ ಮುಖ್ಯವಾಹಿನಿಗೆ ಬರಬೇಕು, ಜನಪದ ಸಂಸ್ಕೃತಿಯನ್ನು ಜನರಿಗೆ ಪರಿಚಯಿಸುವ ಪ್ರಯತ್ನವನ್ನು ಪಕ್ಷ ಭೇದವಿಲ್ಲದೇ ಮೆಚ್ಚುತ್ತೇವೆ

ವಿನೋದ್ ಎಸ್. ಸಾಲ್ಯಾನ್ ಬೆಳ್ಳಾಯರು
ಪಡುಪಣಂಬೂರು ಗ್ರಾ.ಪಂ. ಸದಸ್ಯರು

Kinnigoli-12051805Kinnigoli-12051804

Comments

comments

Comments are closed.

Read previous post:
Kinnigoli-12051806
ಹಳೆಯಂಗಡಿ-ಕಿನ್ನಿಗೋಳಿ : ಮತದಾರರ ಉತ್ಸಾಹ

ಕಿನ್ನಿಗೋಳಿ: ಮೂಲ್ಕಿ ಹೋಬಳಿಯ ಹಳೆಯಂಗಡಿಯಲ್ಲಿ ಮತದಾನಕ್ಕೆ ವಯೋ ವೃದ್ಧರಿಗೆ ಸಹಾಯಕರಾಗಿ ಯುವಕರು ಸಹಾಯ ಮಾಡುತ್ತಿರುವುದು ಕಡು ಬಂತು. ಸಸಿಹಿತ್ಲು ಮತದಾನದ ಕೇಂದ್ರದಲ್ಲಿ ಮಧ್ನಾಹ್ಯ ಮತದಾರರಿಲ್ಲದೇ ಬಿಕೋ ಎನ್ನುತ್ತಿದ್ದವು. ಹಳೆಯಂಗಡಿ...

Close