ಭಾರೀ ಮಳೆಯಿಂದ : ಕೃತಕ ನೆರೆ

ಮೂಲ್ಕಿ: ಮಂಗಳವಾರ ರಾತ್ರಿಯಿಂದ ಧಾರಾಕಾರವಾಗಿ ಸುರಿದ ಮಳೆಯಿಂದ ಮೂಲ್ಕಿ ಹೋಬಳಿಯ ಅನೇಕ ಗ್ರಾಮೀಣ ಪ್ರದೇಶದಲ್ಲಿ ಜನ ಜೀವನ ಅಸ್ತವ್ಯವಸ್ತಗೊಂಡಿದ್ದು, ತಗ್ಗು ಪ್ರದೇಶಗಳ ಸಹಿತ ಕೆಲವೊಂದು ಕಡೆಗಳಲ್ಲಿ ಜಲಾವೃತಗೊಂಡು ಕೃತಕ ನೆರೆಯನ್ನು ಸೃಷ್ಟಿಸಿದೆ.
ಮೂಲ್ಕಿಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿನ ಅಂಗಣಕ್ಕೆ ನೀರು ನುಗ್ಗಿದ್ದು ದೇವಳವು ಸಹ ಜಲಾವೃತಗೊಂಡಿದೆ. ಧಾರ್ಮಿಕ ವಿಧಿ ವಿಧಾನಗಳಿಗೆ ಅಡ್ಡಿಯಾಗಿದೆ.
ಮೂಲ್ಕಿಯ ಪಂಚಮಹಲ್ ರಸ್ತೆಯಲ್ಲಿಯೂ ಸಂಪೂರ್ಣವಾಗಿ ಜಲಾವೃತಗೊಂಡು ನೆರೆ ನೀರು ನಿಂತಿದೆ. ಇಲ್ಲಿನ ಸಬ್ ರಿಜಿಸ್ಟ್ರಾರ್ ಕಚೇರಿಯ ಮೇಲೆ ಮರದ ಕೊಂಬೆ ಬಿದ್ದು ಒಂದು ಪಾರ್ಶ್ವದಲ್ಲಿ ಹಾನಿಯಾಗಿದೆ.
ಕಿನ್ನಿಗೋಳಿ ರಸ್ತೆಯ ಎಸ್‌ಕೋಡಿಯಲ್ಲಿನ ಜಂಕ್ಷನ್‌ನಲ್ಲಿ ಬೃಹತ್ ಮರವೊಂದು ಬಿದ್ದು ಸ್ಥಳೀಯ ಗೂಡಂಗಡಿ, ವಿದ್ಯುತ್ ಕಂಬಳಿಗೆ ಹಾನಿಯಾಗಿದೆ. ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಸದಸ್ಯ ದೇವಪ್ರಸಾದ ಪುನರೂರು ಅವರು ತೆರವು ಕಾರ್ಯಾಚರಣೆಯನ್ನು ಸ್ವತಹ ಕೈ ಜೋಡಿಸಿದ್ದಾರೆ.
ಕೆಂಚನಕೆರೆಯ ಬಳಿಯಲ್ಲಿ ಕುಡಿಯುವ ನೀರಿನ ಪೈಪ್‌ಲೈನ್‌ಗೆ ಮಣ್ಣನ್ನು ಅಗೆದಿದ್ದರಿಂದ ಮಳೆ ನೀರು ಅದರಲ್ಲಿಯೇ ಶೇಖರಗೊಂಡು ರಸ್ತೆಗೆ ಚೆಲ್ಲಿ ಸಂಪೂರ್ಣವಾಗಿ ಕೆಸರುಮಯ ರಸ್ತೆಯಾಗಿದೆ.
ಹಳೆಯಂಗಡಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಸರ್ವಿಸ್ ರಸ್ತೆ ಹಾಗೂ ಚರಂಡಿಯನ್ನು ನಿರ್ಮಿಸದೇ ಇರುವುದರಿಂದ ಹೆದ್ದಾರಿ ಮೇಲೆ ಮಳೆ ನೀರು ನಿಂತು ಕೃತಕ ನೆರೆಯನ್ನು ಸೃಷ್ಟಿಸಿದೆ. ಇಲ್ಲಿನ ರೈಲ್ವೇ ರಸ್ತೆಯಲ್ಲಿಯೂ ಸಹ ಕಾಂಕ್ರೀಟ್ ರಸ್ತೆಯ ಬದಿಯಲ್ಲಿ ಚರಂಡಿ ಇಲ್ಲದೇ ಮಳೆಯ ಕೆಸರು ಮಿಶ್ರಿತ ನೀರು ಪಾದಾಚಾರಿಗಳಿಗೆ ವಾಹನಗಳ ಸಂಚಾರದಿಂದ ಕಾರಂಜಿಯಂತೆ ಸಿಂಪಡನೆಯಾಗುತ್ತಿದೆ.
ಹಳೆಯಂಗಡಿ ಪರಿಸರದ ಕೊಪ್ಪಲ, ಕರಿತೋಟದ ಬಳಿ ಬೃಹತ್ ವಾಣಿಜ್ಯ ಜಾಹಿರಾತು ಬೋರ್ಡ್ ಗಾಳಿ ಮಳೆಗೆ ಸಿಲುಕಿ ಧರೆಶಾಹಿಯಾಗಿದ್ದು ಇದು ನೇರವಾಗಿ ಸ್ಥಳೀಯ ವಿದ್ಯುತ್ ತಂತಿಗಳ ಮೇಲೆ ಬಿದ್ದುದರಿಂದ ಈ ಪರಿಸರದಲ್ಲಿ ವಿದ್ಯುತ್ ಕಡಿತ ಉಂಟಾಗಿದೆ.
ಒಳ ಪೇಟೆಯಲ್ಲಿನ ನೀರು ಚರಂಡಿಯಲ್ಲಿ ಹರಿಯದೇ ರಸ್ತೆಯ ಮೇಲೆಯೇ ಹರಿದು ವಾಹನಗಳ ಸಂಚಾರಿಗಳಿಗೆ ಹಾಗೂ ಪಾದಾಚಾರಿಗಳಿಗೆ ತೊಂದರೆಯಾಗಿದೆ. ಪಿಸಿಎ ಬ್ಯಾಂಕ್ ಬಳಿಯಲ್ಲಿಯೂ ಇದೇ ಪರಿಸ್ಥಿತಿ ನಿರ್ಮಾಣವಾಗಿತ್ತು.
ಕದಿಕೆ-ಕಡಪುರ ಎಂಬಲ್ಲಿ ಕೇಸರಿ ಎಂಬ ಮಹಿಳೆಯ ಮನೆಗೂ ನೀರು ನುಗ್ಗಿದ್ದು ಮನೆಯಲ್ಲಿನ ಅಮೂಲ್ಯ ವಸ್ತುಗಳು ನೀರಿನಿಂದ ಆವೃತವಾಗಿತ್ತು ಸ್ಥಳೀಯರು ಮತ್ತು ಮನೆಯವರು ಸೇರಿಕೊಂಡು ಪರಿಹಾರ ನಡೆಸಿದ್ದಾರೆ. ಕದಿಕೆ-ಹೊಗೆಗುಡ್ಡೆ ರಸ್ತೆಯ ನಂದಿನಿ ನದಿ ಬಳಿಯಲ್ಲಿಯೂ ಸಹ ನದಿ ನೀರು ಹರಿಯಲು ಅಡಚಣೆ ಉಂಟಾಗಿ, ಮೋರಿಗಳ ಪೈಪ್‌ನಲ್ಲಿ ಹೂಳೆತ್ತದೆ ನೀರು ರಸ್ತೆ ಮೇಲೆ ಹರಿದು ತಡೆಗೋಡೆಯು ಕುಸಿತ ಕಂಡಿದೆ.
ಪಡುಪಣಂಬೂರು ಬಳಿಯ ಬೆಳ್ಳಾಯರು ಮೋಹನ್ ಕುಂದರ್ ಅವರ ಮನೆಯೂ ಸಹ ಜಲಾವೃತಗೊಂಡಿತ್ತು. ೧೦ನೇ ತೋಕೂರು ಪರಿಸರದಲ್ಲಿನ ಗದ್ದೆಗಳಲ್ಲಿ ನೀರು ತುಂಬಿ ಕೃತಕ ನೆರೆ ಸೃಷ್ಟಿಯಾಗಿದೆ. ದೇವಸ್ಥಾನದ ಸುತ್ತಮುತ್ತ ಕೆಲವೊಂದು ತಗ್ಗು ಪ್ರದೇಶದ ಮನೆಗಳಿಗೂ ಸಹ ನೆರೆ ನೀರು ನುಗ್ಗಿದೆ.
ರಾಷ್ಟ್ರೀಯ ಹೆದ್ದಾರಿ 66ರ ಪಡುಪಣಂಬೂರು ಬಳಿಯಲ್ಲಿ ಧಾರಕಾರವಾಗಿ ಸುರಿದ ಮಳೆ ನೀರು ನೇರವಾಗಿ ಸ್ಥಳೀಯ ತಗ್ಗು ಪ್ರದೇಶದಲ್ಲಿರುವ ಮನೆಗಳಿಗೆ ನುಗ್ಗಿ ದ್ದರಿಂದ ಗ್ರಾಮಸ್ಥರು ಆತಂಕಗೊಂಡಿದ್ದರು.
ಪಡುಪಣಂಬೂರು ಗ್ರಾಮ ಪಂಚಾಯಿತಿಯ ಮುಂಭಾಗದಲ್ಲಿರುವ ಹೆದ್ದಾರಿಯಲ್ಲಿ ಚತುಷ್ಪಥ ಕಾಮಗಾರಿಗಾಗಿ ಎತ್ತರದ ಪ್ರದೇಶದಲ್ಲಿ ರಸ್ತೆ ನಿರ್ಮಾಣ ಮಾಡಿದ್ದರಿಂದ ತಗ್ಗು ಪ್ರದೇಶದ ಸುಮಾರು 10 ಮನೆಗಳ ಆವರಣ ಹಾಗೂ ಮನೆಯೊಳಗೆ ನೇರವಾಗಿ ಮಳೆ ನೀರು ಹರಿದಿದೆ. ಮಳೆ ನೀರಿನೊಂದಿಗೆ ಕೆಸರುಗಳು ಸಹ ಸೇರಿಕೊಂಡಿದ್ದರಿಂದ ನಿವಾಸಿಗಳು ತೊಂದರೆ ಅನುಭವಿಸಿದ್ದಾರೆ.
ಮೂಲ್ಕಿ ಬಳಿಯ ಕೆ.ಎಸ್.ರಾವ್ ನಗರದ ಉಮರ್ ಎಂಬವರ ಮನೆಗೆ ಸಿಡಿಲು ಬಡಿದು ವಿದ್ಯುತ್ ಉಪಕರಣಗಳು ಸುಟ್ಟಿದೆ. ಸುಮಾರು ೧.೫ ಲಕ್ಷದಷ್ಟು ನಷ್ಟ ಉಂಟಾಗಿದೆ.
ಕೊಲ್ನಾಡು ಬಳಿಯ ಹೆದ್ದಾರಿಯಲ್ಲಿ ಬೃಹತ್ ಮರವೊಂದು ಬಿದ್ದು ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ.

Mulki-30051806

ಮೂಲ್ಕಿಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿನ ಅಂಗಣದಲ್ಲಿ ನೀರು ನಿಂತಿರುವುದು.

Mulki-30051807
 ಪಡುಪಣಂಬೂರು ರಾಷ್ಟ್ರೀಯ ಹೆದ್ದಾರಿಯಿಂದ ತಗ್ಗು ಪ್ರದೇಶಗಳಿಗೆ ಮಳೆ ನೀರು ನುಗ್ಗಿರುವುದು.

Mulki-30051808
ಹಳೆಯಂಗಡಿ ಕೊಪ್ಪಲ ಕರಿತೋಟ ರಸ್ತೆಯಲ್ಲಿ ಬೃಹತ್ ಜಾಹಿರಾತು ಬೋರ್ಡ್ ಧರೆಶಾಹಿಯಾಗಿದೆ.

Mulki-30051809
ಮೂಲ್ಕಿ ಪಂಚಮಹಲ್ ರಸ್ತೆಯಲ್ಲಿ ಸಂಪೂರ್ಣವಾಗಿ ಜಲಾವೃತಗೊಂಡಿದೆ.

Mulki-300518010

ಪುನರೂರು ಬಳಿಯ ಎಸ್‌ಕೋಡಿಯಲ್ಲಿ ಬೃಹತ್ ಮರವೊಂದು ಬಿದ್ದು ಸ್ಥಳೀಯ ಗೂಡಂಗಡಿಗಳಿಗೆ ಹಾನಿಯಾಗಿದೆ.

Comments

comments

Comments are closed.

Read previous post:
Kinnigoli-30051805
ಮೂಲ್ಕಿ: ಕಲ್ಲಾಪು ಉಚಿತ ಪುಸ್ತಕ ವಿತರಣೆ

ಮೂಲ್ಕಿ: ಶಿಕ್ಷಣಕ್ಕೆ ನೆರವು ನೀಡಿದ ಸಂಸ್ಥೆಯನ್ನು ಜೀವನದ ಉದ್ದಕ್ಕೂ ಮರೆಯದೇ, ನಮ್ಮ ಸಾಮರ್ಥ್ಯ ವೃದ್ಧಿಸಿಕೊಂಡಾಗ ಸಂಸ್ಥೆಗೆ ಆಸರೆಯಾಗಿ ಬೆಳೆಯಬೇಕು, ಆಗ ಇನ್ನಷ್ಟು ನೆರವು ನೀಡಲು ಆ ಸಂಸ್ಥೆ ಶಕ್ತವಾಗುತ್ತದೆ...

Close