ತಪೋವನ: ತರಬೇತಿ ಸಂಸ್ಥೆ ವಿದ್ಯಾರ್ಥಿ ವೇತನ

ಕಿನ್ನಿಗೋಳಿ : ವಿದ್ಯಾರ್ಥಿಗಳು ಸಜ್ಜನರ ಸಂಗ ಮಾಡಿ ಗುರುಹಿರಿಯರಿಗೆ ಗೌರವವನ್ನು ಕೊಟ್ಟು ಉತ್ತಮ ಗುರಿಯನಿಟ್ಟು ಸಾಧನೆಯನ್ನು ಮಾಡಿದರೆ ಯಶಸ್ಸನ್ನು ಗಳಿಸಬಹುದು ಹಾಗೂ ಭಾರತ ಸರಕಾರದ ಕೌಶಲ್ಯ ಭಾರತ ಕನಸನ್ನು ನನಸಾಗಿಸುವಲ್ಲಿ ಮುಂದುವರಿದು ಉತ್ತಮ ಸುಸಂಸ್ಕೃತ ಸಮಾಜ ನಿರ್ಮಾಣದೊಂದಿಗೆ ದೇಶಕಟ್ಟುವ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಮುಲ್ಕಿ ಮೂಡಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.
ನಿಟ್ಟೆ ವಿದ್ಯಾಸಂಸ್ಥೆಗೆ ಒಳಪಟ್ಟ ತಪೋವನ ತೋಕೂರಿನ ಮುಲ್ಕಿ ರಾಮಕೃಷ್ಣ ಪೂಂಜ ಐಟಿಐ ಸಂಸ್ಥೆಯಲ್ಲಿ 2017-18ನೇ ಸಾಲಿನ ಮುಲ್ಕಿ ರಾಮಕೃಷ್ಣ ಪೂಂಜಾ ದತ್ತಿನಿಧಿ ಹಾಗೂ ವಿವಿಧ ದಾನಿಗಳಿಂದ ಪ್ರಾಯೋಜಿಸಲ್ಪಟ್ಟ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಾಜಿ ವಿಧಾನ ಪರಿಷತ್ ಸದಸ್ಯ ಕಾಪ್ಟನ್ ಗಣೇಶ್ ಕಾರ್ನಿಕ್ ವಿದ್ಯಾರ್ಥಿ ವೇತನ ವಿತರಿಸಿ ಮಾತನಾಡಿ ಕೈಗಾರಿಕೆಗಳು ದೇಶದ ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರವನ್ನು ವಹಿಸಿದೆ ಈ ಕೈಗಾರಿಕೆಗಳಲ್ಲಿ ಕೆಲಸಮಾಡಲು ಐಟಿಐ ಸಂಸ್ಥೆಗಳಿಂದ ನುರಿತ ಕುಶಲಕರ್ಮಿಗಳು ಅಗತ್ಯವಿದ್ದು ಈ ಸಂಸ್ಥೆಯು ಹಲವಾರು ವರ್ಷಗಳಿಂದ ವಿದ್ಯಾರ್ಥಿಗಳಿಗೆ ತಾಂತ್ರಿಕ ತರಬೇತಿ ನೀಡಿ ಕುಶಲಕರ್ಮಿಯನ್ನಾಗಿ ಮಾಡುವಲ್ಲಿ ಶ್ರಮಿಸುತ್ತಿದೆ ಹಾಗೂ ದೇಶದ ಅಭಿವೃದ್ಧಿಗೆ ತನ್ನದೇ ಆದ ಸೇವೆ ನೀಡುತ್ತಿದೆ ಎಂದರು.
ಮುಲ್ಕಿ ಪ್ರತಿಷ್ಠಿತ ಪೂಂಜ ಮನೆತನದ ಯುವ ಉದ್ಯಮಿ ಆದಿತ್ಯ ಎ. ಪೂಂಜಾ ರಾಮಕೃಷ್ಣ ಪೂಂಜ ದತ್ತಿನಿಧಿಯಿಂದ ನೀಡುವ ಬೃಹತ್ ಮೊತ್ತವಾದ ರೂಪಾಯಿ ಒಂದು ಲಕ್ಷವನ್ನು ಪ್ರತಿಭಾನ್ವಿತ ಹಾಗೂ ಆರ್ಥಿಕವಾಗಿ ಹಿಂದುಳಿದ ಐಟಿಐ ತರಬೇತಿದಾರರಿಗೆ ವಿದ್ಯಾರ್ಥಿ ವೇತನವಾಗಿ ವಿತರಿಸಿ ಮಾತನಾಡುತ್ತಾ ವಿದ್ಯಾರ್ಥಿ ಜೀವನದಲ್ಲಿ ಶಿಸ್ತು, ಪ್ರಾಮಾಣಿಕತೆ, ತಂದೆತಾಯಿ ಮತ್ತು ಗುರುಹಿರಿಯರಿಗೆ ಗೌರವ ನೀಡುವುದು ಮುಂತಾದವುಗಳಲ್ಲದೆ ತಾಂತ್ರಿಕ ಕ್ಷೇತ್ರದಲ್ಲಿ ಉನ್ನತ ಕೌಶಲ್ಯಭರಿತ ಪರಿಣಿತಿ ಪಡೆದು, ಶೃದ್ಧೆ ಮತ್ತು ಸಮರ್ಪಣಾಭಾವದಿಂದ ತಮ್ಮನ್ನು ತಾವು ತೊಡಗಿಸಿಕೊಂಡಲ್ಲಿ ಭವಿಷ್ಯದಲ್ಲಿ ಇನ್ನೊಬ್ಬರಿಗೆ ಮಾದರಿಯಾಗಿ ಗುರುತಿಸಿಕೊಳ್ಳಲು ಸಾಧ್ಯವಾಗುತ್ತದೆ. ಕಠಿನ ಪರಿಶ್ರಮ ಅತ್ಯಂತ ಮಹತ್ವ ಎಂದು ತಿಳಿಸಿದರು.
ನಿಟ್ಟೆ ಇಂಜಿನಿಯರ್ ಕಾಲೇಜು ಮುಖ್ಯ ಗ್ರಂಥಪಾಲಕ ಯಾಜಿ ಡಾ. ಹೆಚ್ ದಿವಾಕರ್ ಭಟ್ ತಮ್ಮ ತಂದೆತಾಯಿಯವರ ಸ್ಮರಣಾರ್ಥ ವಿದ್ಯಾರ್ಥಿವೇತನ ವಿತರಿಸಿದರು ಮತ್ತು ಮುಲ್ಕಿಯ ಮಕ್ಕಳ ಮದ್ದು ಖ್ಯಾತಿಯ ಡಾ. ರಾಘವ ರಾವ್ ತಮ್ಮ ತಂದೆ ತಾಯಿ ಹಾಗೂ ಅತ್ತೆಯವರ ಸ್ಮರಣಾರ್ಥ ಮತ್ತು ಡಾ ರಾಮಣ್ಣ ಶೆಟ್ಟಿ ಶಾಲೆಯ ನಿವೃತ್ತ ಪ್ರಾಂಶುಪಾಲೆ ಗೀತಾ ವೆಂಕಟರಮಣ ಕೊಡಮಾಡಿದ ವಿದ್ಯಾರ್ಥಿವೇತನ ವಿತರಿಸಿದರು.
ರಾಷ್ಟ್ರೀಯ ವೃತ್ತಿ ಶಿಕ್ಷಣ ಪರಿಷತ್ ನವದೆಹಲಿ ಇದರ ಮಾಜಿ ಸದಸ್ಯ ರಾಜೇಶ್ ಕೆ.ಸಿ ಇವರು ದಿ. ಆನಂದ ರಾವ್ ಅವರು ತನ್ನ ತಂದೆತಾಯಿಯವರ ಸ್ಮರಣಾರ್ಥ ಕೊಡಮಾಡಿದ ವಿದ್ಯಾರ್ಥಿವೇತನ ವಿತರಿಸಿದರು.
ಸಂಸ್ಥೆಯ ಹಳೆವಿದ್ಯಾರ್ಥಿ ಪ್ರಸ್ತುತ ಎಸ್.ಸಿ.ಡಿ.ಸಿ.ಸಿ. ಬ್ಯಾಂಕ್ ತಪಾಸಣಾ ಅಧಿಕಾರಿ ಯೋಗೀಶ್ ಪೂಜಾರಿ ತಮ್ಮ ತಂದೆ ತಾಯಿಯವರ ಹೆಸರಿನ ವಿದ್ಯಾರ್ಥಿ ವೇತನವನ್ನು ವಿತರಿಸಿದರು.
ಈ ಸಂದರ್ಭ ವಾರ್ಷಿಕ ಪಂದ್ಯಾಟ ವಾಲಿಬಾಲ್, ಕ್ರಿಕೆಟ್ ಮತ್ತು ಹಗ್ಗ ಜಗ್ಗಾಟದ ವಿಜೇತ ತಂಡಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಕಾವ್ಯ ಸಿ. ನಿಖಿತಾ ಮತ್ತು ರಕ್ಷಿತಾ ಪ್ರಾರ್ಥಿಸಿದರು. ಸಂಸ್ಥೆಯ ಪ್ರಾಚಾರ್ಯ ವೈ.ಎನ್.ಸಾಲ್ಯಾನ್ ಸ್ವಾಗತಿಸಿದರು. ಲಕ್ಷ್ಮೀಕಾಂತ ಪ್ರಸ್ತಾವನೆಗೈದರು. ಹರಿ ಹೆಚ್ ವಂದಿಸಿದರು. ವಿಶ್ವನಾಥ್ ರಾವ್ ಕಾರ್ಯಕ್ರಮ ನಿರೂಪಿಸಿದರು.

Kinnigoli-07071802

Comments

comments

Comments are closed.