ಹಳೆಯಂಗಡಿ ಪಂಚಾಯಿತಿಯಲ್ಲಿ ಅಭಿವೃದ್ಧಿ ಕುಂಠಿತ

ಕಿನ್ನಿಗೋಳಿ: ಗ್ರಾಮದ ಅಭಿವೃದ್ಧಿಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಪರಸ್ಪರ ಕೈಜೋಡಿಸಿ ಪ್ರಾಮಾಣಿಕ ಪ್ರಯತ್ನ ನಡೆಸಬೇಕು. ಸಮಸ್ಯೆಗಳನ್ನು ರಾಜಕೀಯವಾಗಿ ಪರಿಹರಿಸಿಕೊಳ್ಳಲು ಪ್ರಯತ್ನ ನಡೆಸಬೇಡಿ ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.
ಹಳೆಯಂಗಡಿ ಗ್ರಾಮ ಪಂಚಾಯಿತಿಯ ರಾಜೀವಗಾಂಧಿ ಸೇವಾ ಸಭಾಂಗಣದಲ್ಲಿ ನಡೆದ ನೆರೆ ಪರಿಹಾರದ ಚೆಕ್ ವಿತರಣೆ ಹಾಗೂ ಗ್ರಾಮಸ್ಥರ ದೂರು ಸಮಸ್ಯೆಗಳಿಗೆ ಪ್ರತಿಕ್ರಿಯಿಸಿ ಮಾತನಾಡಿದರು.
ಈ ಸಂದರ್ಭ ಶಾಸಕರನ್ನು ಪಂಚಾಯಿತಿ ವತಿಯಿಂದ ಅಧ್ಯಕ್ಷೆ ಜಲಜಾ ಸನ್ಮಾನಿಸಿದರು.
ಶಾಸಕರು ಪ್ರಾಕೃತಿಕ ವಿಕೋಪದಡಿಯಲ್ಲಿ ಪಂಚಾಯಿತಿ ವ್ಯಾಪ್ತಿಯ 12 ಮಂದಿಗೆ 2.48 ಲಕ್ಷ ರೂ.ಗಳ ಚೆಕ್‌ಗಳನ್ನು ವಿತರಿಸಿದರು.

ಸಮಸ್ಯೆಗಳ ದೂರು
ಹಳೆಯಂಗಡಿ ಯುಬಿಎಂಸಿ ಶಾಲಾ ಮುಖ್ಯ ಶಿಕ್ಷಕಿ ನವೆಂಬರ್‌ನಲ್ಲಿ ನಿವೃತ್ತಿಯಾಗಲಿದ್ದು ಶಿಕ್ಷಕರಿಲ್ಲದೇ ಶಾಲೆ ಮುಚ್ಚುವ ಹಂತಕ್ಕೆ ಬಂದಿದೆ. ಎಂದು ಸಾಮಾಜಿಕ ಕಾರ್ಯಕರ್ತೆ ನಂದಾ ಪಾಯಸ್ ಹೇಳಿದರು ಈ ಸಂದರ್ಭ ಶಾಲಾ ಪೋಷಕರಿಂದ ಶಾಸಕರಿಗೆ ಮನವಿ ನೀಡಲಾಯಿತು.
ಹಳೆಯಂಗಡಿ ಪಂಚಾಯಿತಿ ಸದಸ್ಯ ವಿನೋದ್‌ಕುಮಾರ್ ಮಾತನಾಡಿ ಖಾಯಂ ಪಿಡಿಒ ಇಲ್ಲದೆ ಹಳೆಯಂಗಡಿ ಪಂಚಾಯಿತಿಯಲ್ಲಿ ಅಭಿವೃದ್ಧಿ ಕುಂಠಿತವಾಗಿದೆ. ಸಾಮಾನ್ಯ ಸಭೆಯೇ ನಡೆಯದೇ ಎರಡು ತಿಂಗಳಾಗಿದೆ ಎಂದು ಅಹವಾಲು ಹೇಳಿಕೊಂಡರು.
ಇಂದಿರಾನಗರದಲ್ಲಿನ ಅಂಬೇಡ್ಕರ್ ಭವನದ ಹೆಸರು ಹಾಗೂ ಈ ಪ್ರದೇಶದಲ್ಲಿನ ರಸ್ತೆಯೊಂದರ ಡಾಮರೀಕರಣದಲ್ಲಿ ರಾಜಕೀಯ ಹಸ್ತಕ್ಷೇಪ ನಡೆದಿದೆ ಎಂದು ಸ್ಥಳೀಯ ನಾಯಕ ಸದಾಶಿವ, ಶಂಕರ್, ರಮೇಶ್ ಅಮೀನ್ ಹೇಳಿಕೊಂಡರು. ಮೀನುಗಾರರ ಸಹಕಾರ ಸೊಸೈಟಿಯ ಜಮೀನಿಗೆ ಅನುಮತಿ ನೀಡುತ್ತಿಲ್ಲ, ಸಸಿಹಿತ್ಲುವಿಗೆ ತ್ಯಾಜ್ಯ ಸಂಗ್ರಹದ ವಾಹನ ಬರುತ್ತಿಲ್ಲ ಎಂದು ಸೊಸೈಟಿ ಅಧ್ಯಕ್ಷ ಶೋಬೇಂದ್ರ ಸಸಿಹಿತ್ಲು ಪ್ರಶ್ನಿಸಿದರು.
ತಾಲೂಕು ಪಂಚಾಯಿತಿಯಿಂದ ಪರಿಹಾರ ನೀಡುವ ಚೆಕ್‌ನಲ್ಲಿ ಟ್ರೆಜರಿಯವರು ಹೆಸರನ್ನು ಸ್ಪಷ್ಟವಾಗಿ ದಾಖಲಿಸದೆ ಜನರಿಗೆ ನೀಡುವ ಚೆಕ್ ಬ್ಯಾಂಕ್‌ನಲ್ಲಿ ಹಿಂದಿರುಗುತ್ತಿದೆ ಎಂದು ಸದಸ್ಯ ಅಬ್ದುಲ್ ಖಾದರ್ ಶಾಸಕರ ಗಮನ ಸೆಳೆದರು.
ಪಂಚಾಯಿತಿಯ ಕ್ರಿಯಾ ಯೋಜನೆಗಳು ಕಳೆದ ಮೂರು ವರ್ಷಗಳಿಂದ ಸರಿಯಾಗಿ ಜಾರಿಯಾಗದೆ ಪಂಚಾಯಿತಿಯ ಈ ಕಾರ್ಯ ವೈಖರಿಯಿಂದ ಸದಸ್ಯರು ಜನರಿಂದ ನಿಂದಿಸಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದಾಖಲೆ ಸಹಿತ ಶಾಸಕರಲ್ಲಿ ಮನವಿ ಮಾಡಿಕೊಂಡ ಪಂಚಾಯಿತಿ ಸದಸ್ಯರಾದ ಅಶೋಕ್ ಬಂಗೇರ, ಚಿತ್ರಾ ಸುಕೇಶ್, ವಿನೋದ್‌ಕುಮಾರ್, ಸುಕೇಶ್ ಪಾವಂಜೆ ಅಸಮಧಾನ ತೋಡಿಕೊಂಡರು.
ಹಳೆಯಂಗಡಿ ರಾಮನಗರದಲ್ಲಿ ನೀರಿನ ಸಮಸ್ಯೆ, ಪಾವಂಜೆ ಒಳ ರಸ್ತೆಯನ್ನು ಖಾಸಗಿಯವರು ಮುಚ್ಚಿದ್ದಾರೆ, ಪಾವಂಜೆಯಲ್ಲಿನ ರಸ್ತೆಯೊಂದಕ್ಕೆ ಖಾಸಗಿ ವ್ಯಕ್ತಿಯೊಬ್ಬರು ಕಬ್ಬಿಣದ ಪಟ್ಟಿಯನ್ನು ಅಳವಡಿಸಿ ಲಾರಿ ಮತ್ತಿತರ ವಾಹನಗಳಿಂದ ಹಣವನ್ನು ಕೇಳುತ್ತಿದ್ದಾರೆ, ಪಂಚಾಯಿತಿ ಶೇ.20 ತೆರಿಗೆಯನ್ನು ತ್ಯಾಜ್ಯಕ್ಕಾಗಿಯೇ ಸಂಗ್ರಹಿಸುತ್ತಿದೆಯಾದರೂ ಗ್ರಾಮದಲ್ಲಿ ತ್ಯಾಜ್ಯ ವಿಲೇವಾರಿ ಸೂಕ್ತವಾಗಿ ನಡೆಯುತ್ತಿಲ್ಲ ಎಂಬ ಹಲವಾರು ಸಮಸ್ಯೆಗಳನ್ನು ಜನರು ಹೇಳಿದರು.
ಹಳೆಯಂಗಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಲಜಾ ಅಧ್ಯಕ್ಷತೆ ವಹಿಸಿದ್ದರು.
ದ.ಕ. ಜಿಲ್ಲಾ ಪಂಚಾಯಿತಿ ಸದಸ್ಯ ವಿನೋದ್‌ಕುಮಾರ್ ಬೊಳ್ಳೂರು, ಉಪ ಕಾರ್ಯದರ್ಶಿ ಎಂ.ಬಿ. ನಾಯಕ್, ತಾಲೂಕು ಪಂಚಾಯಿತಿ ಸದಸ್ಯ ಜೀವನ್‌ಪ್ರಕಾಶ್ ಕಾಮೆರೊಟ್ಟು, ಕಾರ್ಯನಿರ್ವಾಹಣಾಧಿಕಾರಿ ಸುಧಾಕರ್ ಕೆ., ಪಂಚಾಯಿತಿ ಉಪಾಧ್ಯಕ್ಷೆ ಪದ್ಮಾವತಿ ಶೆಟ್ಟಿ, ಗ್ರಾಮ ಕರಣಿಕ ಮೋಹನ್ ಉಪಸ್ಥಿತರಿದ್ದರು.
ಪಂಚಾಯಿತಿ ಪ್ರಭಾರ ಪಿಡಿಒ ಕೇಶವ ದೇವಾಡಿಗ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Kinnigoli-01101803 Kinnigoli-01101804

Comments

comments

Comments are closed.

Read previous post:
Kinnigoli-01101802
ಸಾಹಿತ್ಯದಿಂದಲೂ ಕ್ಷೇತ್ರ ಪರಿಚಯ ಸಾಧ್ಯ

ಕಿನ್ನಿಗೋಳಿ: ಸಾಹಿತ್ಯದಿಂದಲೂ ಧಾರ್ಮಿಕ ನಂಬಿಕೆಯ ಕ್ಷೇತ್ರ ಪರಿಚಯ ಸಾಧ್ಯ. ಇದರಿಂದ ಮುಂದಿನ ಪೀಳಿಗೆಗೆ ಕ್ಷೇತ್ರದ ಬಗ್ಗೆ ಇರುವ ನಂಬಿಕೆ ಪರಂಪರೆಯನ್ನು ಉಳಿಸುತ್ತದೆ ಎಂದು ಸಸಿಹಿತ್ಲು ಶ್ರಿ ಭಗವತೀ ದೇವಳದ...

Close