ಕಟೀಲು ಶ್ರೀ ದುರ್ಗಾ ಮಕ್ಕಳ ಮೇಳದ ದಶಮ ಕಲಾಪರ್ವ

ಕಟೀಲು : ಶ್ರೀ ದುರ್ಗಾ ಮಕ್ಕಳ ಮೇಳದ ದಶಮ ವಾರ್ಷಿಕ ಕಲಾಪರ್ವ ತಾ. 4ರ ಬೆಳಿಗ್ಗಿನಿಂದ ರಾತ್ರಿವರೆಗೆ ಕಟೀಲಿನ ಸರಸ್ವತೀ ಸದನದಲ್ಲಿ ನಡೆಯಲಿದೆ.
ಬೆಳಗ್ಗೆ ಚೌಕಿ ಪೂಜೆ, ಕೋಡಂಗಿ, ಬಾಲಗೋಪಾಲ, ಮುಖ್ಯ ಸ್ತ್ರೀ ವೇಷ, ಹೊಗಳಿಕೆ, ಷಣ್ಮುಖ ಸುಬ್ರಾಯ, ಅರ್ಧನಾರೀಶ್ವರ, ಚಪ್ಪರಮಂಚ, ಚಂದಾಭಾಮಾ, ಅರೆಪಾವಿನಾಟ, ಪೀಠಿಕೆ ಸ್ತ್ರೀ ವೇಷ
ಅಪರಾಹ್ಣ 12.00ರಿಂದ ತಾಳಮದ್ದಳೆ ವಾಲಿಸುಗ್ರೀವರ ಕಾಳಗ, ಅಪರಾಹ್ಣ 1.35ರಿಂದ ಹನೂಮಂತನ ಒಡ್ಡೋಲಗ 2.00ರಿಂದ ಯಕ್ಷಗಾನ ಬಯಲಾಟ ’ಶಕ್ರಾರಿ’ 3.40ರಿಂದ ಗಾನ ವೈಭವ, ಕೃಷ್ಣನ ಒಡ್ಡೋಲಗ, ಶಶಿಪ್ರಭೆ ಒಡ್ಡೋಲಗ, ಹೆಣ್ಣು ಬಣ್ಣದ ಒಡ್ಡೋಲಗ, ದೇವೇಂದ್ರನ ಒಡ್ಡೋಲಗ, ಕಿರಾತನ ಒಡ್ಡೋಲಗ, ಪಾಂಡವರ ಒಡ್ಡೋಲಗ ಸಂಜೆ ಗಂಟೆ 6.00 ರಿಂದ ಸಭಾ ಪರ್ವ, ಬಳಿಕ ರಾಮನ ಒಡ್ಡೋಲಗ, ಯಕ್ಷಗಾನ ಬಯಲಾಟ ’ಕುಶಲವ’ ಪ್ರದರ್ಶನಗೊಳ್ಳಲಿದೆ.
ಪ್ರಶಸ್ತಿಗಳ ಪ್ರದಾನ
ಶ್ರೀ ದುರ್ಗಾ ಮಕ್ಕಳ ಮೇಳ ಪ್ರಶಸ್ತಿಯನ್ನು ಎಸ್.ಸಂಜೀವ ಬಳೆಗಾರ ಇವರಿಗೆ, ಕಟೀಲು ಸದಾನಂದ ಆಸ್ರಣ್ಣ ಪ್ರಶಸ್ತಿಯನ್ನು ಪಾತಾಳ ವೆಂಕಟ್ರಮಣ ಭಟ್‌ಗೆ, ಕಟೀಲು ಕೃಷ್ಣ ಆಸ್ರಣ್ಣ ಪ್ರಶಸ್ತಿಯನ್ನು ಪೆರುವೋಡಿ ನಾರಾಯಣ ಭಟ್ ಇವರಿಗೆ ಹಾಗೂ ಶ್ರೀನಿಧಿ ಆಸ್ರಣ್ಣ ಪ್ರಶಸ್ತಿಯನ್ನು ದುರ್ಗಾಪ್ರಸಾದ ದಿವಾಣ ಇವರಿಗೆ ನೀಡಿ ಗೌರವಿಸಲಾಗುವುದು. ಶ್ರೀ ಧರ್ಮಪಾಲನಾಥ ಸ್ವಾಮೀಜಿ, ಕಾವೂರು, ವಾಸುದೇವ ಆಸ್ರಣ್ಣ, ಸನತ್ ಕುಮಾರ ಶೆಟ್ಟಿ, ನಳಿನ್ ಕುಮಾರ್, ಉಮಾನಾಥ ಕೋಟ್ಯಾನ್, ರಘುನಾಥ ಸೋಮಯಾಜಿ, ವಿನೋದ್ ಕುಮಾರ್ ಎಲ್, ಗಿರೀಶ್ ಶೆಟ್ಟಿ, ಸೌಂದರ‍್ಯ ರಮೇಶ್, ಕೃಷ್ಣ ಎನ್. ಪೈ, ವಿಜಯಕುಮಾರ್ ಬೆಂಗಳೂರು ಮುಂತಾದ ಗಣ್ಯರು ಭಾಗವಹಿಸಲಿದ್ದಾರೆ.
ಕಟೀಲಿನಲ್ಲಿ ಬೆಳಗಿದ ಮಕ್ಕಳ ಮೇಳ
ಕಟೀಲಿನಲ್ಲಿ ಮಕ್ಕಳಿಗೆ ಯಕ್ಷಗಾನ ನಾಟ್ಯ, ಹಿಮ್ಮೇಳ, ಮಾತುಗಾರಿಕೆಯನ್ನು ಕಲಿಸುವ ಉದ್ದೇಶದಿಂದ ಹತ್ತು ವರುಷಗಳ ಹಿಂದೆ ಪ್ರಾರಂಭಗೊಂಡ ಶ್ರೀ ದುರ್ಗಾ ಮಕ್ಕಳ ಮೇಳ ಸಾರ್ಥಕ ಸಾಧನೆಗಳೊಂದಿಗೆ ಜನಮಾನಸವನ್ನು ತಲುಪಿದೆ. ಕಳೆದ 10 ವರ್ಷಗಳಲ್ಲಿ ದಾಖಲಾದ ವಿದ್ಯಾರ್ಥಿಗಳ ಸಂಖ್ಯೆ 272 ಮೇಳದಲ್ಲಿ ಖ್ಯಾತ ಕಲಾವಿದ ಕೆ. ಗೋವಿಂದ ಭಟ್‌ರಿಂದ ವಿಶೇಷ ನಾಟ್ಯ ತರಗತಿ ನಡೆಸಲಾಗುತ್ತಿದೆ. ಇಲ್ಲಿನ ವಿದ್ಯಾರ್ಥಿಗಳು ಉಡುಪಿ ಪರ್ಯಾಯ ದರ್ಬಾರ್, 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮಡಿಕೇರಿ, ಕೆರೆಮನೆ ರಾಷ್ಟ್ರೀಯ ನಾಟ್ಯೋತ್ಸವ, ಸ್ವರ್ಣವಲ್ಲಿ ಮುದ್ರಾನುಸಂಧಾನ ಕಾರ್ಯಾಗಾರ, ಕನ್ನಡ ಸಂಸ್ಕೃತಿ ಇಲಾಖೆಯ ವಿವಿಧ ಕಾರ್ಯಕ್ರಮಗಳ ಅಡಿಯಲ್ಲಿ ಪ್ರದರ್ಶನಗಳು, ಯಕ್ಷಗಾನ ಬಯಲಾಟ ಅಕಾಡೆಮಿಯ ವತಿಯ ಪಣಂಬೂರಿನ ಕಾರ್ಯಾಗಾರದಲ್ಲಿ ಸಂಪನ್ಮೂಲ ತಂಡವಾಗಿ ಭಾಗವಹಿಸಿದ್ದಾರೆ.
ಯಕ್ಷಗಾನ ಬಯಲಾಟ ಅಕಾಡಮಿಯ ಶ್ರೀದೇವೀಮಾಹಾತ್ಮ್ಯ ಕಾರ‍್ಯಾಗಾರ, ಹಿಮ್ಮೇಳ ಕಾರ್ಯಾಗಾರ, ರಂಗಸಂಭ್ರಮ-2014 ಇವುಗಳಲ್ಲಿ ಸಹಭಾಗಿತ್ವ, ದಕ್ಷಿಣಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನದ ಯಕ್ಷೆಪಾಸನ ಶಿಬಿರದಲ್ಲಿ ಸಹಭಾಗಿತ್ವ, ಯಕ್ಷಸತ್ಸಂಗ 2015ರಲ್ಲ್ಲಿ ಸಹಭಾಗಿತ್ವ ವಹಿಸಿದ ಹೆಮ್ಮೆ ಈ ಮೇಳದ್ದು. ಮುಂಬೈ, ಬೆಂಗಳೂರು, ಸೋಂದಾ ಸೇರಿದಂತೆ ನಾನಾ ಕಡೆಗಳಲ್ಲಿ 10 ವರ್ಷಗಳಲ್ಲಿ ನೀಡಿದ ಪ್ರದರ್ಶನಗಳು ಒಟ್ಟು 275 ವಿದ್ಯಾರ್ಥಿಗಳಿಗೆ ವರ್ಷಂಪ್ರತಿ ವಿದ್ಯಾರ್ಥಿವೇತನ, ಪ್ರತಿಭಾ ಪುರಸ್ಕಾರಗಳ ಮೂಲಕ ಉತ್ತೇಜನ ನೀಡಲಾಗುತ್ತಿದೆ. ಹರಿನಾರಾಯಣ ಬೈಪಾಡಿತ್ತಾಯ, ರಾಜೇಶ್ ಐ., ಲೀಲಾವತಿ ಬೈಪಾಡಿತ್ತಾಯ ಮತ್ತು ಸರ್ಪಂಗಳ ಈಶ್ವರ ಭಟ್ ಇವರು ಮೇಳದ ಗುರುಗಳು.
ಶ್ರೀಕೃಷ್ಣಲೀಲೆ ಕಂಸವಧೆ, ಇಂದ್ರಜಿತು ಕಾಳಗ, ವೀರಮಣಿ ಕಾಳಗ, ಸುದರ್ಶನ ವಿಜಯ, ಪಾಂಚಜನ್ಯ, ಪಂಚವಟಿ, ವಾಲಿವಧೆ, ಕೃಷ್ಣಾರ್ಜುನ ಕಾಳಗ, ವೀರ ಬಬ್ರುವಾಹನ, ಮಹಿಷಮರ್ದಿನಿ, ಮಾಯಾ ತಿಲೋತ್ತಮೆ, ಜಾಂಬವತಿ ಕಲ್ಯಾಣ, ಕುಶಲವ, ಶ್ರೀರಾಮದರ್ಶನ, ಗರುಡ ಗರ್ವಭಂಗ, ನರಕಾಸುರ ಮೋಕ್ಷ, ಶ್ರೀದೇವಿಕೌಶಿಕೀ ಮಾಹಾತ್ಮ್ಯ, ಗಂಧರ್ವಕನ್ಯೆ, ದಕ್ಷಾಧ್ವರ, ಗಿರಿಜಾ ಕಲ್ಯಾಣ, ಶಶಿಪ್ರಭಾ ಪರಿಣಯ, ಸೀತಾ ಕಲ್ಯಾಣ, ಭಾರತರತ್ನ ಪ್ರಸಂಗಗಳನ್ನು ಈವರೆಗೆ ಪ್ರದರ್ಶಿಸಿದ್ದಾರೆ.
ಪೂರ್ವ ರಂಗದಲ್ಲಿ ವೃತ್ತಿಪರ ಮೇಳಗಳಲ್ಲಿ ಪ್ರದರ್ಶಿತ ಗೊಳ್ಳುತ್ತಿರುವ ಮತ್ತು ಗೊಳ್ಳದಿರುವ ಇತರ ಪ್ರಕಾರಗಳ ಪ್ರದರ್ಶನವೂ ಈ ಮಕ್ಕಳ ಮೇಳದ ಮಕ್ಕಳಿಂದ ನಡೆಯುತ್ತಿದೆ. ಈ ಮೇಳದ ವಿದ್ಯಾರ್ಥಿಗಳು ಎಲ್ಲಾ ಸಾಂಪ್ರದಾಯಿಕ ಒಡ್ಡೋಲಗಗಳನ್ನೂ ಪ್ರದರ್ಶಿಸುವುದು ಗಮನೀಯ ಸಾಧನೆ. ಶ್ರೀ ದುರ್ಗಾ ಮಕ್ಕಳ ಮೇಳಕ್ಕೆ ನಿಡಂಬೂರುಬೀಡು ಬಲ್ಲಾಳ ಪ್ರಶಸ್ತಿ-2016 ಲಭಿಸಿದೆ.
ಅಲ್ಲದೆ ಉಡುಪಿ ತೆಂಕುತಿಟ್ಟು ವೇದಿಕೆಯ ರಾತ್ರಿ ಆಟ ಕಾರ್ಯಕ್ರಮದಲ್ಲಿ ಸತತ 5 ವರ್ಷಗಳಿಂದ ಪೂರ್ವರಂಗ ಪ್ರದರ್ಶನ ನೀಡಿದೆ. ಜೊತೆಗೆ 2018ರ ಸಾಲಿನ ವಿಶ್ವೇಶತೀರ್ಥ ಪ್ರಶಸ್ತಿಗೆ ಆಯ್ಕೆಯಾಗಿದ್ದು ನವೆಂಬರ್ 25ರಂದು ಪ್ರಶಸ್ತಿ ಪ್ರದಾನ ನಡೆಯಲಿರುವುದು ಅಭಿನಂದನೀಯ ಸಂಗತಿಯಾಗಿದೆ. ಶ್ರೀಹರಿನಾರಾಯಣದಾಸ ಆಸ್ರಣ್ಣರ ಸಮರ್ಥ ಅಧ್ಯಕ್ಷತೆಯಲ್ಲಿ ಕಾರ‍್ಯದರ್ಶಿಗಳಾದ ವಾಸುದೇವ ಶೆಣೈ ಹಾಗೂ ಇತರ ಟ್ರಸ್ಟ್‌ನ ಟ್ರಸ್ಟಿಗಳ ಮಾರ್ಗದರ್ಶನದಲ್ಲಿ ಮಕ್ಕಳ ಮೇಳ ಸಾಧನೆಯಪಥದಲ್ಲಿ ಸಾಗುತ್ತಿರುವುದು ಶ್ಲಾಘನೀಯ.
Kateel-03111801 Kateel-03111802

Comments

comments

Comments are closed.

Read previous post:
Kinnigoli-10311804
ನೌಸೈನಿಕ್ ಶಿಬಿರ : ಗುರುಪ್ರಸಾದ್

ಕಿನ್ನಿಗೋಳಿ : ಐಕಳ ಪೊಂಪೈ ಕಾಲೇಜು ಎನ್ ಸಿ ಸಿ ನೌಕಾದಳದ ಕೆಡೆಟ್ ಕ್ಯಾಪ್ಟನ್ ಗುರುಪ್ರಸಾದ್ ತೃತೀಯ ಬಿ.ಕಾಂ ವಿದ್ಯಾರ್ಥಿ ಕಾಲೇಜು ಪ್ರಿನ್ಸಿಪಾಲ್ ಪ್ರೊ. ಜಗದೀಶ ಹೊಳ್ಳ, 5ನೇ ಕರ್ನಾಟಕ...

Close