ಬಾಯಾರು ರಘು ಶೆಟ್ಟರಿಗೆ ಮಂಡೆಚ್ಚ ಪ್ರಶಸ್ತಿ

ಕಿನ್ನಿಗೋಳಿ: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಥಮ ದರ್ಜೆ ಕಾಲೇಜಿನಲ್ಲಿ ಡಿಸೆಂಬರ್ 15ರ ಶನಿವಾರ ಬೆಳಿಗ್ಗೆ ಯಕ್ಷಝೇಂಕಾರ ಯಕ್ಷಗಾನ ಕೇಂದ್ರ ಹಾಗೂ ದಿ. ದಾಮೋದರ ಮಂಡೆಚ್ಚ ಸಂಸ್ಮರಣಾ ಸಮಿತಿಯ ಸಹಯೋಗದಲ್ಲಿ ದಿ. ದಾಮೋದ ಮಂಡೆಚ್ಚ ಪ್ರಶಸ್ತಿ ಪ್ರದಾನ ಹಾಗೂ ಕುಬಣೂರು ಶ್ರೀಧರ ರಾವ್ ಸಂಸ್ಮರಣೆ ನಡೆಯಲಿದೆ.
ಖ್ಯಾತ ಕಲಾವಿದ ರಘು ಶೆಟ್ಟಿ ಬಾಯಾರು ಅವರಿಗೆ ಮಂಡೆಚ್ಚ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು. ಕುಬಣೂರು ಸಂಸ್ಮರಣೆಯ ಜೊತೆಗೆ ಯಕ್ಷಝೇಂಕಾರ ಯಕ್ಷಗಾನ ಕೇಂದ್ರದ ವಿದ್ಯಾರ್ಥಿಗಳಿಂದ ತಾಳಮದ್ದಲೆ, ಪ್ರಶಸ್ತಿ ಪ್ರದಾನದ ಬಳಿಕ ಯಕ್ಷಗಾನ ವಿಚಾರಗೋಷ್ಠಿಗಳು ನಡೆಯಲಿವೆ. ಯಕ್ಷಗಾನ ಬಯಲಾಟ ಅಕಾಡಮಿ ಸದಸ್ಯರೂ ಆದ ಖ್ಯಾತ ಭಾಗವತ, ಪ್ರಸಂಗಕರ್ತ ಬೊಟ್ಟಿಕೆರೆ ಪುರುಷೋತ್ತಮ ಪೂಂಜರು ಯಕ್ಷಗಾನದಲ್ಲಿ ಭಾಗವತ ವಿಚಾರದಲ್ಲಿ ಹಾಗೂ ಧರ್ಮಸ್ಥಳ ಮೇಳದ ಖ್ಯಾತ ಭಾಗವತ, ಸಿರಿಬಾಗಿಲು ಪ್ರತಿಷ್ಟಾದನ ರಾಮಕೃಷ್ಣ ಮಯ್ಯರು ಯಕ್ಷಗಾನದಲ್ಲಿ ನಿತ್ಯೋಪಯೋಗಿ ರಾಗಗಳ ಬಗ್ಗೆ ಉಪನ್ಯಾಸ ನೀಡಲಿದ್ದಾರೆ.
ಕಟೀಲು ದೇಗುಲದ ಮೊಕ್ತೇಸರರಾದ ಸನತ್ ಕುಮಾರ ಶೆಟ್ಟಿ, ವಾಸುದೇವ ಆಸ್ರಣ್ಣ, ಹರಿಕೃಷ್ಣ ಪುನರೂರು, ಕಲ್ಲಾಡಿ ದೇವೀಪ್ರಸಾದ ಶೆಟ್ಟಿ, ಲೀಲಾವತಿ ಬೈಪಾಡಿತ್ತಾಯ, ಬಾಲಕೃಷ್ಣ ಶೆಟ್ಟಿ ಭಾಗವಹಿಸಲಿದ್ದಾರೆ.

ರಘು ಶೆಟ್ಟರಿಗೆ ಪ್ರಶಸ್ತಿ
ಮಂಡೆಚ್ಚ ಭಾಗವತರು ಅನೇಕ ದಶಕಗಳ ಕಾಲ ಕರ್ನಾಟಕ ಮೇಳದಲ್ಲಿ ಭಾಗವತರಾಗಿ, ಭಾಗವತಿಕೆಯಲ್ಲಿ ಸಂಗೀತ ಶೈಲಿಯ ಹರಿಕಾರರಾಗಿ ಪ್ರಸಿದ್ಧರಾದವರು. ಇವರ ಹೆಸರು ಸದಾ ಹಸಿರಾಗಿರಬೇಕೆಂದು ಇನ್ನೋರ್ವ ಮಾನವೀಯತೆಯ ಶಿಖರ ದಿ| ಕುಬಣೂರು ಶ್ರೀಧರರಾಯರು ಉಜಿರೆಯಲ್ಲಿ ಮಂಡೆಚ್ಚ ಪ್ರಶಸ್ತಿಯನ್ನು ಸ್ಥಾಪಿಸಿದರು. ಕಳೆದ ಅನೇಕ ವರ್ಷಗಳಿಂದ ಈ ಕಾರ್ಯಕ್ರಮವನ್ನು ಅವರು ನಡೆಸಿಕೊಂಡು ಬರುತ್ತಿದ್ದರು. ಇದೀಗ ಕುಬಣೂರು ದಿವಂಗತರಾದ ಮೇಲೆ ಅವರ ಒಡನಾಡಿಗಳು ಈ ಕಾರ್ಯಕ್ರಮವನ್ನು ಮುಂದುವರಿಸಿಕೊಂಡು ಹೋಗುತ್ತಿದ್ದು, ೨೦೧೮ನೇ ಸಾಲಿನ ಮಂಡೆಚ್ಚ ಪ್ರಶಸ್ತಿಯನ್ನು ಅರವತ್ತೆಂಟರ ಕಲಾಯೋಗಿ, ಮಂಡೆಚ್ಚರೊಂದಿಗೆ ಸುಮಾರು ಮೂರು ದಶಕಗಳ ಒಡನಾಡಿ, ಶ್ರೀ ಬಾಯಾರು ರಘು ಶೆಟ್ಟರಿಗೆ ಪ್ರಧಾನಿಸಲಾಗುತ್ತಿದೆ.
ಕಾಸರಗೋಡಿನ ಬಾಯಾರು ರಘು ಶೆಟ್ಟರದ್ದು ಐದು ದಶಕಗಳ ಮೇಳ ತಿರುಗಾಟ. ೧೯೬೪ರಲ್ಲಿ ಕರ್ನಾಟಕ ಮೇಳಕ್ಕೆ ಸೇರಿ, ಕರ್ನಾಟಕ ಮೇಳ ನಿಲ್ಲುವವರೆಗೂ ಅದೇ ಮೇಳದಲ್ಲಿ ೩೪ ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದರು. ಬಳಿಕ ಸುಂಕದಕಟ್ಟೆ ಮೇಳದಲ್ಲಿ ೧೪ ವರ್ಷ ಸೇವೆ ಸಲ್ಲಿಸಿರುವ ಇವರು ಕಳೆದ ೬ ವರ್ಷಗಳಿಂದ ಕಟೀಲು ಮೇಳದಲ್ಲಿ ಕಲಾವಿದನಾಗಿದ್ದಾರೆ. ಕಟೀಲು ಒಂದನೇ ಮೇಳದ ವ್ಯವಸ್ಥಾಪಕರಾಗಿಯೂ ಕಾರ್ಯನಿರ್ವಹಿಸುತ್ತಿರುವ ರಘು ಶೆಟ್ಟರದ್ದು ಯಕ್ಷಗಾನ ಕ್ಷೇತ್ರದಲ್ಲಿ ೫೪ ವರ್ಷಗಳ ಸುದೀರ್ಘ ಅನುಭವ.

Kinnigoli-13121801

Comments

comments

Comments are closed.

Read previous post:
Kinnigoli-10121803
ಬಸ್ಸು ಚಾಲಕ- ನಿರ್ವಾಹಕ ಸಂಘದ ವಾರ್ಷಿಕೋತ್ಸವ

ಕಿನ್ನಿಗೋಳಿ: ಕಿನ್ನಿಗೋಳಿ ವಲಯ ಬಸ್ಸು ಚಾಲಕ- ನಿವಾರ್ಹಕರ ಸಂಘ ಕೇವಲ ವಾರ್ಷಿಕೋತ್ಸವ ಕ್ರೀಡೆಗೆ ಮಾತ್ರ ಸೀಮಿತವಾಗಿರದೆ ಸಾಧಕರಿಗೆ ಗೌರವ ಹಾಗೂ ಅರ್ಹರಿಗೆ ಆರ್ಥಿಕ ನೆರವಿನಂತಹ ಜನ ಪರ ಕಾರ್ಯಕ್ರಮ...

Close