ಕಿನ್ನಿಗೋಳಿಯಲ್ಲಿ ಕೈಮಗ್ಗ ತರಬೇತಿ

ಕಿನ್ನಿಗೋಳಿ: ನಮ್ಮ ಕುಲಕಸುಬಿನ ಬಗ್ಗೆ ಅಭಿಮಾನ, ಶ್ರದ್ಧೆ ಇರಬೇಕು. ಕೈ ಮಗ್ಗದ ಬಟ್ಟೆಗಳಿಗೆ ಮಾರುಕಟ್ಟೆ ಒದಗಿಸುವ ಪ್ರಯತ್ನ ಯಶಸ್ವಿಯಾಗುತ್ತಿದ್ದು, ತರಬೇತಿಯ ಮೂಲಕ ಯುವ ಸಮುದಾಯಕ್ಕೆ ಕೈಮಗ್ಗದ ಬಟ್ಟೆಗಳ ಉತ್ಪಾದನೆಗೆ ಉತ್ತೇಜನ ನೀಡಲಾಗುತ್ತಿದೆ ಎಂದು ಹೆಗ್ಗೋಡು ಚರಕ ದೇಸೀ ಟ್ರಸ್ಟ್‌ನ ಖ್ಯಾತ ರಂಗಕರ್ಮಿ ಪ್ರಸನ್ನ ಹೆಗ್ಗೋಡು ಹೇಳಿದರು.
ಕಿನ್ನಿಗೋಳಿ ತಾಳಿಪಾಡಿ ಪ್ರಾಥಮಿಕ ನೇಕಾರರ ಸಹಕಾರ ಸಂಘದಲ್ಲಿ ಕೈಮಗ್ಗವನ್ನು ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಕಾರ್ಯಾಚರಿಸುತ್ತಿರುವ ಹೆಗ್ಗೋಡು ಚರಕ ದೇಸೀ ಟ್ರಸ್ಟ್ ಮತ್ತು ಕಾರ್ಕಳದ ಕದಿಕೆ ಟ್ರಸ್ಟ್ ಆಯೋಜಿಸಿದ ಹೊಸ ನೇಕಾರರಿಗೆ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಹಜ ಬಣ್ಣದ ಉಡುಪಿ ಸೀರೆಗಳನ್ನು ಮಾಡುವುದಕ್ಕಾಗಿ, ಸಹಜ ಬಣ್ಣದ ಸನ್ಮಾನ ಶಾಲು, ಟವೆಲ್‌ಗಳನ್ನು ತಯಾರಿಸುವ ಪ್ರಯತ್ನ ನಡೆದಿದೆ. ಇದಕ್ಕಾಗಿ ಹೊಸತಲೆಮಾರಿಗೆ ತರಬೇತಿ ನೀಡಲಾಗುತ್ತಿದೆ ಎಂದರು.
ಸಾಂಗತ್ಯ ಟ್ರಸ್ಟಿ ಶ್ರೀಕುಮಾರ್ ಮಾತನಾಡಿ ಪರಿಸರ ಸ್ನೇಹೀ, ಕೈಕಸುಬು ಉದ್ಯೋಗಕ್ಕೆ ಉಡುಪಿ ಸೀರೆಯನ್ನು ಪುನರ್ ನವೀಕರಣ ಮಾಡುವುದಕ್ಕಾಗಿ ಪ್ರಯತ್ನ ನಡೆಯುತ್ತಿದೆ. ಹೊಸ ಯುವಕರು ಬರಬೇಕು. ಆಸಕ್ತಿ ಮೂಡಿಸುವ ಪ್ರಯತ್ನ ನಡೆಯುತ್ತಿದೆ ಎಂದರು.
ಆರಂಭದಲ್ಲಿ ಉಡುಪಿ ಸೀರೆಯನ್ನು ನೇಯ್ದು ತಯಾರಿಸುವ ತರಬೇತಿ ನೀಡುತ್ತೇವೆ. ಹತ್ತರಷ್ಟು ಮಂದಿ ಕಿನ್ನಿಗೋಳಿಯಲ್ಲಿ ಬಂದಿದ್ದಾರೆ. ರಾಷ್ಟ್ರಪ್ರಶಸ್ತಿ ಪಡೆದ ತಾಳಿಪಾಡಿ ನೇಕಾರರ ಸಹಕಾರ ಸಂಘದ ವ್ಯಾಪ್ತಿಯಲ್ಲಿ 400ಕ್ಕಿಂತಲೂ ಹೆಚ್ಚು ಕೈಮಗ್ಗಗಳಿದ್ದವು. ಇಂದು ಹತ್ತರಷ್ಟು ಮಾತ್ರ ಇವೆ. ಬೀಡಿ ಉದ್ಯಮ ಹಿನ್ನಡೆ ಆಗುತ್ತಿರುವುದರಿಂದ ಸೀರೆ ತಯಾರಿಸುವುದನ್ನು ಕಲಿಸುವುದರಿಂದ ಪ್ರಯೋಜನವಾಗಲಿದೆ ಎಂದು ಕದಿಕೆ ಟ್ರಸ್ಟ್‌ನ ಮಮತಾ ರೈ ಹೇಳಿದರು.
ಕದಿಕೆ ಟ್ರಸ್ಟ್‌ನ ಚಿಕ್ಕಪ್ಪ ಶೆಟ್ಟಿ, ಪುರುಷೋತ್ತಮ ಅಡ್ವೆ, ನೇಕಾರರ ಪ್ರಮುಖ ವಿಶ್ವನಾಥ ಶೆಟ್ಟಿಗಾರ್, ಜವುಳಿ ಇಲಾಖೆಯ ಸಹಾಯಕ ನಿರ್ದೇಶಕ ಶಿವಶಂಕರ್, ತಾಳಿಪಾಡಿ ನೇಕಾರರ ಸಂಘದ ಅಧ್ಯಕ್ಷ ಆನಂದ ಶೆಟ್ಟಿಗಾರ್, ಆಡಳಿತ ನಿರ್ದೇಶಕ ಮಾಧವ ಶೆಟ್ಟಿಗಾರ್, ತಿರುವಂತನಪುರದ ತರಬೇತುದಾರ ಚಂದ್ರನ್ ಉಪಸ್ಥಿತರಿದ್ದರು.

Kinnigoli-18121803

Comments

comments

Comments are closed.

Read previous post:
Kinnigoli-18121802
ತೋಕೂರು : ವಿದ್ಯಾರ್ಥಿಗಳಿಗೆ ಸನ್ಮಾನ

ಕಿನ್ನಿಗೋಳಿ: ತೋಕೂರು ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್‌ನ 22ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಶೈಕ್ಷಣಿಕ ಸಾಧನೆ ಮಾಡಿದ ಸುಶ್ಮಿತಾ ಕುಲಾಲ್, ವೈಷ್ಣವಿ ಯು.ಕೆ, ಗೌತಮಿ ಡಿ....

Close