ಸಂಕಲಕರಿಯ ವಾಹನ ಅಪಘಾತ

ಕಿನ್ನಿಗೋಳಿ: ಬೊಲೇರೋ ವಾಹನ ಚಾಲಕನ ನಿಯಂತ್ರಣ ತಪ್ಪಿ ಉಡುಪಿ ಹಾಗೂ ದಕ್ಷಿಣಕನ್ನಡ ಜಿಲ್ಲೆಯ ಗಡಿ ಪ್ರದೇಶ ಐಕಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂಕಲಕರಿಯ ಬಳಿಯ ಶಾಂಭವಿ ನದಿಗೆ ಬಿದ್ದ ಘಟನೆ ನಡೆದಿದೆ.
ವಾಹನದಲ್ಲಿ ಒಂದೇ ಕುಟುಂಬದ ನಾಲ್ಕು ಮಂದಿ ಪ್ರಯಾಣಿಸುತ್ತಿದ್ದು ಸ್ಥಳೀಯರು ತಕ್ಷಣ ಸಹಾಯಕ್ಕೆ ಧಾವಿಸಿ ಮೂವರನ್ನ ರಕ್ಷಿಸಿದ್ದಾರೆ. ಆದರೆ ವಾಹನದಲ್ಲಿದ್ದ ಕಾರ್ಕಳ ತಾಲೂಕು ಬೋಳ ಗ್ರಾಮದ ಪದವು ನಿವಾಸಿ ಡಯಾನ (45) ಮಹಿಳೆ ಸಾವನ್ನಪ್ಪಿದ್ದಾರೆ.

ಮದುವೆಗೆ ಹೊರಟಿದ್ದರು
ಕಾರ್ಕಳ ತಾಲೂಕಿನ ಬೋಳ ಕೇಂದೊಟ್ಟು ಬರ್ಕೆಯ ಸ್ಟೇನಿಯವರು ತಮ್ಮ ಪತ್ನಿ ಡಯಾನಾ, ಮಕ್ಕಳಾದ ಶಲ್ಟನ್ ಹಾಗೂ ಶರ್ಮನ್ ಜತೆ ಮಂಗಳೂರಿನ ಮಿಲಾಗ್ರಿಸ್ ಚರ್ಚ್ ಹಾಲ್‌ನಲ್ಲಿ ನಡೆಯಲಿದ್ದ ತನ್ನ ಸೊಸೆಯ ಮದುವೆಗೆಂದು ಹೊರಟಿದ್ದು ಬೆಳಿಗ್ಗೆ ಸುಮಾರು 8.50ರ ಹೊತ್ತಿಗೆ ಅವರು ಚಲಾಯಿಸುತ್ತಿದ್ದ ಬೊಲೇರೋ ಜೀಪ್ ಸಂಕಲಕರಿಯ ಶಾಂಭವಿ ನದಿ ಸೇತುವೆಯ ಪಶ್ಚಿಮ ಭಾಗದ ತಡೆಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ಪಲ್ಟಿಯಾಗಿ ನದಿಗೆ ಮಗುಚಿತ್ತು. ಈ ನದಿಯ ಅಣೆಕಟ್ಟುವಿಗೆ ಹಲಗೆ ಹಾಕಿದ್ದರಿಂದ ನದಿ ತುಂಬಿ ತುಳಕುತ್ತಿತ್ತು.

ವಾಹನಗಳಲ್ಲಿ ರಕ್ಷಣೆಗೆ ಬಳಸುವ ಸೀಟ್‌ಬೆಲ್ಟ್ ಡಯಾನಾರ ಜೀವಕ್ಕೆ ಮುಳುವಾಯಿತು. ಡಯಾನಾ ಸೀಟ್ ಬೆಲ್ಟ್ ಧರಿಸಿದ್ದರಿಂದ ಜೀಪ್‌ನಿಂದ ಹೊರ ಬರಲಾಗಲಿಲ್ಲ. ಜೀಪ್ ಕೂಡಾ ಕವಚಿ ಬಿದ್ದ ಪರಿಣಾಮ ಮರಳಿನ ಭಾಗದಲ್ಲಿ ಡಯಾನಾ ಕುಳಿತಿದ್ದ ಸೀಟ್ ಇದ್ದುದರಿಂದ ಯುವಕರಿಗೂ ರಕ್ಷಣೆಗೆ ಕಷ್ಟವಾಗಿ, ಜೀಪ್‌ನ ಗ್ಲಾಸ್ ಒಡೆಯಲೂ ಅಸಾಧ್ಯವಾಗಿ ಡಯಾನಾ ಉಸಿರುಗಟ್ಟಿ ಸತ್ತರು.
ಸಕಾಲದಲ್ಲಿ ನೀರಿಗೆ ಧುಮುಕಿ ಮೂವರನ್ನು ರಕ್ಷಿಸಿದ ಸಂಕಲಕರಿಯ, ಪಟ್ಟೆ, ಉಳೆಪಾಡಿ ಹಾಗೂ ಏಳಿಂಜೆ ಪರಿಸರದ ಯುವಕರ ಈ ಸಾಧನೆ ಶ್ಲಾಘನೆಗೆ ಪಾತ್ರವಾಗಿದೆ. ಸುಮಾರು 50ಕ್ಕೂ ಮಿಕ್ಕಿ ಯುವಕರ ತಂಡ ರಕ್ಷಣಾ ಕಾರ್ಯ ಹಾಗೂ ಶವ ತೆಗೆಯುವಲ್ಲಿ ಶ್ರಮ ವಹಿಸಿತ್ತು. ಐಕಳ ಪೊಂಪೈ ಕಾಲೇಜಿನ ಉಪನ್ಯಾಸಕ ಸಂಕಲಕರಿಯದ ವಿಶ್ವಿತ್ಥ್ ಶೆಟ್ಟಿ ಎಂಬವರು ಉಟ್ಟ ಉಡುಗೆಯಲ್ಲಿಯೇ ನೀರಿಗೆ ಧುಮುಖಿದ್ದು, ಪಟ್ಟೆ ಕ್ರಾಸ್‌ನ ಗುಣಪಾಲ, ಉಳೆಪಾಡಿಯ ಆಶೋಕ ಮೂವರನ್ನು ರಕ್ಷಿಸಿದ್ದ ಪ್ರಮುಖರು. ನವೀನ್ ವಾಸ್, ಮುಂಡ್ಕೂರು ಗ್ರಾಮ ಪಂಚಾಯಿತಿ ಸದಸ್ಯ ಸೋಮನಾಥ ಪೂಜಾರಿ, ಐಕಳ ಗ್ರಾಮ ಪಂಚಾಯಿತಿ ಆಧ್ಯಕ್ಷ ದಿವಾಕರ ಚೌಟ, ಸಂಕಲಕರಿಯದ ಸುರೇಶ್ ಭಂಡಾರಿ, ಗಿರೀಶ್ , ಏಳಿಂಜೆಯ ಅಕ್ಷಿತ್ ಮತ್ತಿತರರು ಶ್ರಮ ವಹಿಸಿದ್ದರು.
ಸಂಕಲಕರಿಯ ನದಿ ಮಂಗಳೂರು ಮತ್ತು ಕಾರ್ಕಳದ ಗಡಿಭಾಗದಲ್ಲಿದ್ದು ಉಡುಪಿ ಹಾಗೂ ದಕ್ಷಿಣಕನ್ನಡವನ್ನು ಬೇರ್ಪಡಿಸುವ ಸೇತುವೆ ಇದಾಗಿದ್ದರೂ ನದಿಗೆ ಬಿದ್ದ ಜೀಪ್‌ನ ಈ ದೂರು ಯಾರು ಸ್ವೀಕರಿಸುವುದೆಂಬ ಗೊಂದಲ ಸೃಷ್ಠಿಯಾಗಿತ್ತು. ಮುಲ್ಕಿ ಆರಕ್ಷಕ ಠಾಣೆಯ ವೃತ್ತ ನಿರೀಕ್ಷಕ ಅನಂತ ಪದ್ಮನಾಭ ಹಾಗೂ ಕಾರ್ಕಳ ಠಾಣೆಯ ನಾಸಿರ್ ಹುಸೇನ್ ಕಂದಾಯ ಇಲಾಖೆಯ ಮಾಹಿತಿ ಪಡೆದು ಕೊನೆಗೂ ಜೀಪ್ ಬಿದ್ದ ಭಾಗ ಕಾರ್ಕಳ ಪೊಲೀಸ್ ಠಾಣಾ ವ್ಯಾಪ್ತಿಯದೆಂದು ಕೇಸು ದಾಖಲಿಸಲಾಯಿತು.
ಬೋಳದ ಕೇಂದೊಟ್ಟುವಿನ ಸ್ಟೇನಿಯವರು ಕೃಷಿಕರಾಗಿದ್ದು ದುರಂತದಲ್ಲಿ ಮೃತ ಪಟ್ಟ ಡಯಾನಾ ಎಡಪದವು ಪೆರಾರದವರು. 4 ಮಕ್ಕಳನ್ನು ಹೊಂದಿದ್ದು ಶನಿವಾರ ಜೀಪ್‌ನಲ್ಲಿದ್ದ ಶರ್ಮನ್, ಶಲ್ಟನ್‌ರವರನ್ನು ಹೊರತುಪಡಿಸಿ ಶರಲ್(ಹೆಣ್ಣು))ಹಾಗೂ ಶಾನ್ (ಗಂಡು)ಎಂಬ ಇನ್ನಿಬ್ಬರು ಅವಳಿ ಮಕ್ಕಳನ್ನು ಹೊಂದಿದ್ದರು. ಶಲ್ಟನ್ ಹೋಟೆಲ್ ಮ್ಯಾನೇಜ್ ಮೆಂಟ್ ಕೋರ್ಸ್ ಮಾಡುತ್ತಿದ್ದು, ಶರ್ಮನ್ ಮೂಡಬಿದ್ರೆ ಮಹಾವೀರ ಕಾಲೇಜಿನಲ್ಲಿ ಪಿಯುಸಿ ಬಳಿಕದ ಡಿಪ್ಲೊಮಾ ಓದುತಿದ್ದ. ಶರಲ್ ಮಂಗಳೂರಿನ ಅಗ್ನೆಸ್ ಕಾಲೇಜಿನಲ್ಲಿ ಪಿಯುಸಿ ಕಲಿಯುತ್ತಿದ್ದರೆ, ಶಾನ್ ಪುತ್ತೂರಿನ ಫಿಲೋಮಿನಾ ಕಾಲೇಜಿನಲ್ಲಿ ವ್ಯಾಸಂಗ ನಡೆಸುತ್ತಿದ್ದಾನೆ.
65 ವರ್ಷಗಳ ಹಳೆಯ ಸೇತುವೆ
ಸಂಕಲಕರಿಯ ಶಾಂಭವಿ ನದಿ ಸೇತುವೆ 65 ವರ್ಷಗಳ ಹಳೆಯದಾಗಿದ್ದು ಅಲ್ಲಲ್ಲಿ ಬಿರುಕು ಬಿಟ್ಟಿದ್ದು, ಸೂಕ್ತ ತಡೆಗೋಡೆಯೂ ಇಲ್ಲ. ಆದರೆ ಇದುವರೆಗೂ ಇಂತಹ ಘಟನೆ ಸಂಭವಿಸಿಲ್ಲ. ನದಿಗೆ ತಡೆಗೊಡೆ ಇಲ್ಲದಿರುವುದೇ ಈ ಅನಾಹುತಕ್ಕೆ ಕಾರಣ ಎನ್ನಲಾಗಿದೆ.

Kinnigoli-12011901 Kinnigoli-12011902 Kinnigoli-12011903 Kinnigoli-12011904 Kinnigoli-12011905

Comments

comments

Comments are closed.