2020, ಜನವರಿ 30, ಕಟೀಲು ಬ್ರಹ್ಮಕಲಶ

ರೂ. 45 ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ದಿ ಯೋಜನೆಗಳಿಗೆ ಚಾಲನೆ
ಇಂದಿನಿಂದ 12 ರಂಗಪೂಜೆ
ಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಮುಂದಿನ ವರುಷ, 2020ರ ಜನವರಿ 30ರಂದು ಬೆಳಿಗ್ಗೆ ಬ್ರಹ್ಮಕಲಶೋತ್ಸವ ಹಾಗೂ ತಾ.31ರಂದು ನಾಗಮಂಡಲ ಸೇವೆ ನಡೆಯಲಿದೆ ಎಂದು ಕಟೀಲು ದೇಗುಲದ ಆಡಳಿತ ಸಮಿತಿ ಅಧ್ಯಕ್ಷ ಕೊಡೆತ್ತೂರುಗುತ್ತು ಸನತ್ ಕುಮಾರ ಶೆಟ್ಟಿ ತಿಳಿಸಿದರು.
ಸೋಮವಾರ ಕಟೀಲು ದೇವರಿಗೆ ಅಷ್ಟಬಂಧ ನಡೆದು, ಸಾನ್ನಿಧ್ಯ ಕಲಶಾಭಿಷೇಕ, ಚಿನ್ನದ ರಥೋತ್ಸವ ಸಂಪನ್ನಗೊಂಡ ಸಂದರ್ಭ ಮುಂದಿನ ವರುಷ ನಡೆಯಲಿರುವ ಬ್ರಹ್ಮಕಲಶೋತ್ಸವದ ದಿನಾಂಕವನ್ನು ಹಾಗೂ ಕ್ಷೇತ್ರದಲ್ಲಿ ಮುಂದಿನ ದಿನಗಳಲ್ಲಿ ಕಾರ‍್ಯಗತಗೊಳ್ಳಲಿರುವ ವಿವಿಧ ಅಭಿವೃದ್ಧಿ ಯೋಜನೆಗಳ ಮಾಹಿತಿ ನೀಡಿದರು.
ಇಂದಿನಿಂದ ಹನ್ನೆರಡು ರಂಗಪೂಜೆ
ಮುಂದಿನ ಮೂರು ವರುಷಗಳಿಗಾಗುವಷ್ಟು ರಂಗಪೂಜೆಗಳು ಮುಂಗಡ ನೋಂದಣಿಯಾಗಿರುವುದರಿಂದ ಅಷ್ಟಬಂಧ ಸಾನ್ನಿಧ್ಯ ಕಲಶ ನಡೆದ ಬಳಿಕ ಅಂದರೆ ಮಂಗಳವಾರದಿಂದ ದಿನಂಪ್ರತಿ ಹನ್ನೆರಡು ರಂಗಪೂಜೆಗಳು ನಡೆಯಲಿವೆ ಎಂದು ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ ಹೇಳಿದರು. ಇದುವರೆಗೆ 9 ರಂಗಪೂಜೆಗಳು ನಡೆಯುತ್ತಿದ್ದು, ಭಕ್ತರಿಗೆ ಅನುಕೂಲವಾಗಲು ಇನ್ನು 12ರಂಗಪೂಜೆ ನಡೆಯಲಿವೆ. ಮುಂದಿನ ದಿನಗಳಲ್ಲಿ ಸರಳವಾಗಿ ಒಂದು ಸುತ್ತಿನ ಚಿನ್ನದ ರಥೋತ್ಸವ ನಡೆಸುವ ಚಿಂತನೆಯೂ ಇದೆ. ದೇವರಿಗೆ ರೇಷ್ಮೆ ಮತ್ತು ಹತ್ತಿಯ ಸೀರೆಗಳನ್ನಷ್ಟೇ ಉಡಿಸಲು ನಿರ್ಧರಿಸಲಾಗಿದೆ ಎಂದು ಅವರು ವಿವರ ನೀಡಿದರು.
ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ ಹಾಗೂ ಅನಂತಪದ್ಮನಾಭ ಆಸ್ರಣ್ಣ ವಿವಿಧ ಅಭಿವೃದ್ಧಿ ಯೋಜನೆಗಳ ವಿವರ ನೀಡಿದರು. ದೇವಸ್ಥಾನದ ಒಳ ಪ್ರಾಂಗಣದಲ್ಲಿ ಕುಸುರಿ ಕೆಲಸಗಳು, ಚಿತ್ರ ಚಿತ್ತಾರಗಳು ಮಾಡಿ ದೇವಳದ ಸೌಂದರ್ಯ ವೃದ್ಧಿಸುವುದು, ಚಿನ್ನದಧ್ವಜಸ್ಥಂಭ ನಿರ್ಮಾಣ, ಶ್ರೀ ದೇವರ ಚಿನ್ನದ ಮಂಟಪ, ತೀರ್ಥಮಂಟಪದ ಎದುರು ನಾಸಿಕ ನಡಪ್ಪರ್ ರಚನೆ, ಸರಳ ಮದುವೆಗಾಗಿ ದೇಗುಲದ ಎದುರು ಲಕ್ಷ್ಮೀಸ್ವಯಂವರ ಮಂಟಪ, ನೂತನ ಸುಸಜ್ಜಿತ, ಪರಿಸರಸ್ನೇಹಿ ಅಡುಗೆಶಾಲೆ, ಭೋಜನಶಾಲೆಗಳ ನಿರ್ಮಾಣ, ಕುದುರುವಿನಲ್ಲಿ ಯಜ್ಞವನ, ಕಾಲುದಾರಿ, ಉದ್ಯಾನವನ ನಿರ್ಮಾಣ, ರಥಬೀದಿಯಿಂದ ಕುದುರುವಿಗೆ ಸೇತುವೆ ನಿರ್ಮಾಣ, ಯಾತ್ರಿ ನಿವಾಸದನೇ ಮಹಡಿ ನಿರ್ಮಾಣ, ದೇಗುಲದ ಕಚೇರಿಯನ್ನು ಸ್ಥಳಾಂತರಿಸಿ, ಇನ್ನಷ್ಟು ಸುವ್ಯವಸ್ಥಿತಗೊಳಿಸುವುದು, ಭ್ರಾಮರೀ ವಸತಿ ನವೀಕರಣ, ಬೆಳ್ಳಿ ರಥದ ಕೋಣೆಯನ್ನು ಬ್ರಹ್ಮರಥದ ಪಕ್ಕದಲ್ಲಿ ರಚಿಸುವುದು, ಬಸ್ ಸ್ಟಾಂಡ್ ಬಳಿ ಶೌಚಾಲಯ ಸಂಕೀರ್ಣ, ಘನತ್ಯಾಜ್ಯ ವಿಲೇವಾರಿ ಘಟಕ, ಎಸ್‌ಟಿಪಿ ದ್ವಿತೀಯ ಹಂತ ವಿಸ್ತರಣೆ, ಸರಸ್ವತೀ ಸದನದ ಜಾಗವನ್ನು ತಗ್ಗಿಸಿ ಪಾರ್ಕಿಂಗ್ ನಿರ್ಮಾಣ, ಹೊಸದಾದ ದೊಡ್ಡ ಸಭಾಭವನ ನಿರ್ಮಾಣದ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುವುದು ಇವುಗಳಿಗೆ ಸುಮಾರು ರೂ. ೪೫ಕೋಟಿ ಖರ್ಚನ್ನು ಅಂದಾಜಿಸಲಾಗಿದೆ ಎಂದು ಮಾಹಿತಿ ನೀಡಿದರು.
ಹೊಸದಾದ ವಸ್ತು ಸಂಗ್ರಹಾಲಯ ನಿರ್ಮಾಣದ ಯೋಜನೆ ಆಗಲಿದ್ದು, ಭಕ್ತಾದಿಗಳು ಈ ಯೋಜನೆಗೆ ಅಪೂರ್ವವಾದ, ಅಮೂಲ್ಯವಾದ ವಸ್ತುಗಳನ್ನು ಕಾಣಿಕೆಯಾಗಿ ನೀಡಬಹುದು ಎಂದು ತಿಳಿಸಿದ ಶ್ರೀಹರಿ ಆಸ್ರಣ್ಣ, ವಾಹನ ನಿಲುಗಡೆಗೆ ಸಂಬಂಧಿಸಿ, ದೇವಸ್ಥಾನದ ೬೦ಸೆಂಟ್ಸ್ ಜಾಗದಲ್ಲಿ ಮಲ್ಟಿ ಲೇವಲ್‌ಕಾರ್ ಪಾರ್ಕಿಂಗ್ ಯೋಜನೆಗೆ ಸಿದ್ಧತೆ ನಡೆಸಲಾಗಿದೆ. ಕೆಲವು ವರುಷಗಳ ಒಳಗೆ ಈ ಯೋಜನೆ ಕಾರ‍್ಯಗತಗೊಳ್ಳುವುದು ಎಂದರು. ದೇವಳದಲ್ಲಿ ೨೫ಕೆಜಿಯಷ್ಟು ಚಿನ್ನವಿದ್ದು, ದೇವರ ತೀರ್ಥ ಮಂಟಪ, ಧ್ವಜಸ್ತಂಭ ಮತ್ತಿತರ ಯೋಜನೆಗಳಿಗೆ ಬಳಸಿಕೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.
ದೇಗುಲದ ಆನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ, ಕೊಡೆತ್ತೂರುಗುತ್ತು ಸುಧೀರ್ ಶೆಟ್ಟಿ ಉಪಸ್ಥಿತರಿದ್ದರು.

Comments

comments

Comments are closed.

Read previous post:
IMG_8578
ಜ. 23-28 ಕಟೀಲು ದೇವಳ ಅಷ್ಟಬಂಧ ಮತ್ತು ಸಾನಿಧ್ಯ ಕಲಶ

ಕಟೀಲು : ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದಲ್ಲಿ ಜನವರಿ 23 ರಿಂದ 28 ರವರೆಗೆ ಅಷ್ಟಬಂಧ ಮತ್ತು ಸಾನಿಧ್ಯ ಕಲಶ ನಡೆಯಲಿದೆ ಎಂದು ಕಟೀಲು ದೇವಳದ ಮೊಕ್ತೇಸರಸನತ್ ಕುಮಾರ್ ಶೆಟ್ಟಿ...

Close