ಅಮ್ಮನೆಡೆ ನಮ್ಮ ನಡಿಗೆ

ಕಿನ್ನಿಗೋಳಿ: ಮಳವೂರು ಶ್ರೀ ದುರ್ಗಾಪರಮೇಶ್ವರೀ ದೇವಳದಿಂದ ಆರನೇ ವರ್ಷದ ಅಮ್ಮನೆಡೆಗೆ ನಮ್ಮ ನಡಿಗೆ ಎಂಬ ಘೋಷ ವಾಕ್ಯದಡಿಯಲ್ಲಿ ಕಟೀಲು ದೇವಳಕ್ಕೆ ಪಾದಯಾತ್ರೆಯ ಸಂಕಲ್ಪಕ್ಕೆ ಮಳವೂರು ಕ್ಷೇತ್ರದಲ್ಲಿ ಬೆಳಿಗ್ಗೆ ಏಳು ಗಂಟೆಗೆ ಕಟೀಲು ದೇವಳದ ಅರ್ಚಕರಾದ ಆಸ್ರಣ್ಣ ಬಂಧುಗಳು ಹಾಗೂ ಗಣ್ಯರ ಉಪಸ್ಥಿತಿಯಲ್ಲಿ ಪಾದಯಾತ್ರೆಗೆ ಚಾಲನೆ ನೀಡಲಾಯಿತು. ಆದರೆ ಬೆಳಗ್ಗಿನ ಮೂರು ಗಂಟೆಯ ಹೊತ್ತಿಗೆ ಹೊರಟು ಆರು ಗಂಟೆಗೇ ಕಟೀಲು ತಲುಪಿದ ಭಕ್ತರ ಸಂಖ್ಯೆಯೇ ಸಾವಿರಕ್ಕೂ ಹೆಚ್ಚು ದಾಟಿತ್ತು (ಬಿಸಿಲಿನ ತಾಪ ನೀಗಿಸಲು).

ಪ್ರಾತಃ ಕಾಲ ಆರು ಗಂಟೆಗೇ ಕಟೀಲು ದೇವಿಯ ಕ್ಷೇತ್ರವನ್ನು ತಲುಪಿ ಧನ್ಯರಾಗುವ ಭಕ್ತರ ಸರತಿಯ ಸಾಲು ಮಧ್ಯಾಹ್ನ ಒಂದು ಗಂಟೆಯ ಹೊತ್ತಿನ ವರೆಗೂ ನಿಂತಿರಲಿಲ್ಲ. ಭಜನೆ ಹಾಡಿಕೊಂಡು, ಜೈಕಾರ ಕೂಗುತ್ತ ಭಕ್ತಸಮೂಹ ಮಳವೂರಿನಿಂದ ಕಟೀಲಿಗೆ ಮೆರವಣಿಗೆಯಂತೆ ಸಾಗಿಬಂತು.
ಪುಟ್ಟ ಮಕ್ಕಳನ್ನು ಹೆಗಲಲ್ಲಿ ಹೊತ್ತುಕೊಂಡು ಬರುತ್ತಿದ್ದ ಭಕ್ತರೂ ಇದ್ದರು. ವಿವಿಧ ಸಂಘಸಂಸ್ಥೆಗಳು ಕಟೀಲಿನ ಭಕ್ತಾಗಳು ಪಾದಯಾತ್ರಿಗಳಿಗೆ ಅಲ್ಲಲ್ಲಿ ಬೆಲ್ಲ ನೀರು, ಮಜ್ಜಿಗೆ, ಶರಬತ್ತು, ಮಜ್ಜಿಗೆ ವಿತರಿಸುವ ಸೇವೆಯನ್ನು ರಸ್ತೆಯುದ್ದಕ್ಕೂ ವ್ಯವಸ್ಥೆ ಮಾಡಿದ್ದರು. ಪೆರ್ಮುದೆ ಚರ್ಚ್ ವತಿಯಿಂದಲೂ ಪಾನೀಯ ವ್ಯವಸ್ಥೆ ಮಾಡಲಾಗಿದ್ದು ಸೌಹಾರ್ದತೆಯ ಸಂಕೇತವನ್ನು ಎತ್ತಿತೋರಿಸುತ್ತಿತ್ತು. ಕಟೀಲು ದೇವಳದ ಕಾಲೇಜಿನ ಎನ್.ಎಸ್.ಎಸ್. ವಿದ್ಯಾರ್ಥಿಗಳು ಮತ್ತು ನೂರಾರು ಜನರು ಸ್ವಯಂ ಸೇವಕರಾಗಿ ಪಾಲ್ಗೊಂಡರು.

ಎಲ್ಲ ಭಕ್ತರಿಗೆ ದೇವಳದ ಒಳಗೆ ಪ್ರಸಾದ ಸ್ವೀಕರಿಸಿ, ಅನ್ನಪ್ರಸಾದ ಪಡೆಯಲು ವ್ಯವಸ್ಥೆ ಮಾಡಲಾಗಿತ್ತು. ಬೆಳಿಗ್ಗೆ ಏಳೂವರೆ ಗಂಟೆಗೇ ಅನ್ನಪ್ರಸಾದ ವ್ಯವಸ್ಥೆ ಮಾಡಲಾಗಿದ್ದು, ಇಪ್ಪತ್ತೈದು ಸಾವಿರಕ್ಕೂ ಮಿಕ್ಕಿ ಜನ ಊಟ ಮಾಡಿ ಸಂತೃಪ್ತಿ ಪಟ್ಟಿದ್ದಾರೆ. ಒಟ್ಟಾರೆ ಐವತ್ತು ಸಾವಿರಕ್ಕೂ ಮಿಕ್ಕಿದ ಭಕ್ತರು ಪಾದಯಾತ್ರೆಯಲ್ಲಿ ಬಂದಿದ್ದರು. ದೂರದ ಬೆಂಗಳೂರು, ಪುತ್ತೂರು, ಉಡುಪಿಗಳಿಂದಲೂ ಬಂದ ಭಕ್ತರು ಪಾದಯತ್ರೆಯಲ್ಲಿ ಪಾಲ್ಗೊಂಡು ಧನ್ಯರಾದರು.
ಸರತಿ ಸಾಲಿನಲ್ಲಿ ದೇಗುಲದ ಒಳಗೆ ಭಕ್ತರನ್ನು ಬಿಡುತ್ತಿದ್ದುದರಿಂದ ನೂಕುನುಗ್ಗಲು ಆಗಲಿಲ್ಲ. ಕಟೀಲಿನಿಂದ ವಾಪಾಸು ಹೋಗಲು ಉಚಿತ ಬಸ್ಸಿನ ವ್ಯವಸ್ಥೆಯನ್ನು ಪಾದಯಾತ್ರೆ ಸಮಿತಿ ಮಾಡಿತ್ತು.
ಅಮ್ಮನಲ್ಲಿ ಆನಂದದ ಅನುಭೂತಿ
ಪಾದಯಾತ್ರೆಯ ಮೂಲಕ ಕಳೆದ ಆರು ವರುಷಗಳಿಂದ ಬರುತ್ತಿರುವವರು, ಐದು ವರುಷಗಳಿಂದ, ನಾಲ್ಕು ವರುಷಗಳಿಂದ ಹೀಗೆ ಈ ವರುಷ ಮೊದಲಾಗಿ ಬಂದವರು, ಭಜನಾ ಮಂಡಳಿಯ ಸದಸ್ಯರೊಂದಿಗೆ ಭಜನೆ ಹಾಡುತ್ತ ಬಂದವರು, ಕುಟುಂಬವಿಡೀ ಜೊತೆಯಾಗಿ ಬಂದವರು, ಗೆಳೆಯರು ಜೊತೆಯಾಗಿ ಬಂದವರು, ಆರೋಗ್ಯ, ವಿವಾಹ, ಕಷ್ಟಪರಿಹಾರ ಇತ್ಯಾದಿ ಹರಕೆ ಹೊತ್ತು ಬಂದವರು, ಸುಮ್ಮನೆ ಸೇವೆ ಎಂದು ಬಂದವರು, ಗೆಳೆಯರೆಲ್ಲ ಜೊತೆಯಾಗಿ ಬರುವ ಸಂಭ್ರಮ ಎಂದು ಬಂದವರು ಹೀಗೆ ನಾನಾ ತರಹದ ಭಕ್ತಜನರನ್ನು ಮಾತನಾಡಿಸಿದಾಗ ಎಲ್ಲರ ಅಭಿಪ್ರಾಯವೂ ಒಂದೇ, ಅಮ್ಮನ ಸೇವೆ. ಕಟೀಲಮ್ಮನೆಡೆ ಹೀಗೆ ಬರುವುದು ಸಂತೋಷ, ಆನಂದ, ಖುಷಿ ತರುತ್ತಿದೆ ಎಂಬುದೇ ಆಗಿತ್ತು. ಕಿಲೋ ಮೀಟರ್ ಗಟ್ಟಲೆ ಬಿಸಿಲನ್ನೂ ಲೆಕ್ಕಿಸದೆ ನಡೆದುಕೊಂಡು ಬಂದು ಕಟೀಲು ಶ್ರೀ ದೇವಿಯ ಸನ್ನಿಯನ್ನು ಸೇರಿ, ಅಮ್ಮ ತಾಯೇ ಕಾಪಾಡು ಎನ್ನುತ್ತ ಪುಳಕಗೊಳ್ಳುವ ಭಕ್ತ ಸಮೂಹವನ್ನು ಮಾತಾಡಿಸಿದಾಗ
ತಾಯಿಯೆಡೆಗೆ ಮಕ್ಕಳು ಜೊತೆಯಾಗಿ ಬರುವುದು ಸಂಭ್ರಮ. ಹಾಗೆ ಭಕ್ತರು ದೇವರಲ್ಲಿಗೆ ಬರುವುದು. ಹಾಗಾಗಿ ಈ ಸಂಭ್ರಮದಲ್ಲಿ ನಾವೂ ಪಾಲ್ಗೊಂಡಿದ್ದೇವೆ
– ವಿಜಯಕುಮಾರ ಶೆಟ್ಟಿ
ಇದು ನನ್ನದು ಆರನೇ ವರ್ಷದ ಪಾದಯಾತ್ರೆ. ಯಾವಾಗಲೂ ಕ್ಷೇತ್ರಕ್ಕೆ ಬರುತ್ತೇವೆ. ಕಟೀಲಿಗೆ ಯಾವಾಗಲೂ ಬರುತ್ತಿರುತ್ತೇವೆ. ಆದರೆ ಪಾದಯಾತ್ರೆಯಲ್ಲಿ ಬರುವುದಕ್ಕೆ ಹೆಚ್ಚು ಖುಷಿ ಇದೆ
ಸೀತಾರಾಮ ಶೆಟ್ಟಿ (73 ವರ್ಷ)
ಇದು ಮೂರನೇ ವರ್ಷದ ಪಾದಯಾತ್ರೆ. ನಾವು ಬೆಂಗಳೂರಿನಿಂದ ಇದಕ್ಕಾಗಿಯೇ ಐದು ಮಂದಿ ಬಂದಿದ್ದೇವೆ. ಅಲ್ಲಿ ನಾವು ಏರ್ ಫಿಲ್ಟರ್ ಕಂಪನಿ ನಡೆಸುತ್ತೇವೆ. ಮಂಜುನಾಥ, ಕಲಯ, ಶಿವರಾಜ್ ಹೀಗೆ ನಾವು ಪಾಲುದಾರರು, ಸ್ನೇಹಿತರು ಬಂದಿದ್ದೇವೆ.
ಸಿದ್ದು ಗೌಡ (27ವರ್ಷ)
ಯೆಯ್ಯಾಡಿಯ ಬ್ರೆಡ್ ಫಾಕ್ಟರಿಯಲ್ಲಿ ಕೆಲಸ. ೬ವರ್ಷದಿಂದ ಬರ‍್ತಾ ಇದ್ದೇವೆ. ಆರೋಗ್ಯ ಭಾಗ್ಯ ದೇವರೇ ಕೊಟ್ಟದ್ದು
ಉಮಾವತಿ (60ವರ್ಷ)
ಇದು ೨ನೇ ವರ್ಷ. ಕಳೆದ ಬಾರಿ ಕಾಲು ನೋಯುತ್ತಿತ್ತು, ಈ ವರ್ಷ ಹಾಗಿಲ್ಲ. ತಾಯಿ, ಮಗಳು ಜೊತೆಯಾಗಿ ಬಂದಿದ್ದೇವೆ
ಸಜನಾ, ಕಾವೂರು
೬ನೇ ವರ್ಷ ಬರುತ್ತಿದ್ದೇವೆ. ಗಂಡ ಎಂಸಿಎಫ್ ಉದ್ಯೋಗಿ ನಿವೃತ್ತರು. ಗಂಡ ಹೆಂಡತಿ ಜೊತೆಯಾಗಿ ಬಂದಿದ್ದೇವೆ
ಗೌರಮ್ಮ, ಕುಂಜತ್ ಬೈಲ್ (60ವರ್ಷ)
ನಮ್ಮ ಕುಟುಂಬದ ಎಲ್ಲರೂ ಅಜ್ಜ, ಮಕ್ಕಳು, ಮೊಮ್ಮಕ್ಕಳು ಅಂತ ಬಂದಿದ್ದೇವೆ, ಆರು ವರ್ಷದಿಂದ ಬಂದವರೂ ಇದ್ದಾರೆ. ಈ ವರ್ಷ ಮೊದಲ ಬಾರಿಗೆ ಬರುತ್ತಿರುವವರೂ ಇದ್ದ್ದಾರೆ. ನಾವು ಕಟೀಲಮ್ಮನ ಭಕ್ತರು
ಗೌತಮ್ ನಾಯಕ್, ಜಪ್ಪಿನಮೊಗರು
ಉಡುಪಿಯಿಂದ ನಾನು ಮತ್ತು ಮಗಳು ಬಂದಿದ್ದೇವೆ. ಆರೋಗ್ಯ ಕೊಡಲಿ ಅಂತ ದೇವರಲ್ಲಿ ಪ್ರಾರ್ಥಿಸಿದ್ದೇವೆ
ಇಂದಿರಾ ಉಡುಪಿ
ನಾನು ಬೀಜದ ಪಾಕ್ಟರಿಯಲ್ಲಿ ಕೆಲಸ ಮಾಡುತ್ತೇನೆ. ಮೂವರು ಮಕ್ಕಳಿದ್ದಾರೆ. ಎಂ.ಎ. ಐಟಿಐ ಎಂದು ಕಲಿತಿದ್ದಾರೆ. ಸರಿಯಾಗಿ ಕೆಲಸ ಇಲ್ಲ. ಹಾಗಾಗಿ ಮಕ್ಕಳಿಗೆ ಒಳ್ಳೆಯದು ಮಾಡಮ್ಮ ಎಂದು ಹರಕೆ ಹೊತ್ತು ಪಾದಯಾತ್ರೆಯಲ್ಲಿ ಬಂದಿದ್ದೇನೆ.
ಜಲಜ(55ವರ್ಷ)

ಜನರ ಸಕಲ ಕಷ್ಟ ನಿವಾರಣೆಗಾಗಿ ಕಟೀಲು ದೇವಿಯ ಸನ್ನಿದಿಗೆ ಭಕ್ತರೊಂದಿಗೆ ಕಳೆದ ಆರು ವರ್ಷದಿಂದ ನಮ್ಮ ಸಮಿತಿ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಮ್ಮನಡೆಗೆ ನಮ್ಮ ನಡೆ ಪಾದಯಾತ್ರೆ ಸಮಿತಿ ಅಧ್ಯಕ್ಷರಾದ ಸಂದೀಪ್ ಶೆಟ್ಟಿ ಮರವೂರು ಹೇಳಿದರು
ಅವರು ಲೋಕ ಕಲ್ಯಾಣಾರ್ಥ, ಸಕಲ ಕಷ್ಟ ನಿವಾರಣೆ ಹಾಗೂ ಗ್ರಹಚಾರ ದೂಷ ನಿವಾರಣೆಗಾಗಿ ಮರವೂರು ದುರ್ಗಾಪರಮೇಶ್ವರೀ ದೇವಳದಿಂದ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದವರೆಗೆ ನಡೆದ ಆರನೇ ವರ್ಷದ ಅಮ್ಮನಡೆಗೆ ನಮ್ಮ ನಡೆ ಪಾದಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿ ಪಾದಯಾತ್ರೆಯ ಮೂಲಕ ದೇವಳಗಳಿಗೆ ಹೋದರೆ ಸಕಲ ಕಷ್ಟಗಳು ನಿವಾರಣೆಯಾಗುತ್ತದೆ ಎಂಬ ನಂಬಿಕೆ ಹಿಂದಿನಿಂದಲೂ ಇದೆ, ಪಾದಯಾತ್ರೆ ಕೈಗೊಂಡು ಸಮಸ್ಯೆ ನಿವಾರಣೆಯಾದ ಅನೇಕ ಉದಾಹರಣೆಗಳು ಇದೆ, ಕಳೆದ ಆರು ವರ್ಷದ ಹಿಂದೆ ಪ್ರಾರಂಭವಾದ ಪಾದಯಾತ್ರೆಗೆ ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆ ಹೆಚ್ಚುತ್ತಿದೆ. ವಿವಿಧ ಸಂಘ ಸಂಸ್ಥೆ ಮತ್ತು ಸ್ವಯಂ ಸೇವಕರಿಂದ ಈ ಪಾದಯಾತ್ರೆ ಯಶಸ್ಸಾಗುತ್ತಿದೆ ಎಂದರು.
ಕಲ್ಲಡ್ಕ ಪ್ರಭಾಕರ ಭಟ್ ಪಾದಯಾತ್ರೆಗೆ ಚಾಲನೆ ನೀಡಿದರು. ಕಟೀಲು ದೇವಳದ ಆಡಳಿತ ಮೊಕ್ತೇಸರರಾದ ವಾಸುದೇವ ಆಸ್ರಣ್ಣ, ಸನತ್ ಕುಮಾರ್ ಶೆಟ್ಟಿ ಕೊಡೆತ್ತೂರುಗುತ್ತು, ಅರ್ಚಕ ಅನಂತಪದ್ಮನಾಭ ಆಸ್ರಣ್ಣ, ದ.ಕ. ಸಂಸದ ನಳಿನ್ ಕುಮಾರ್ ಕಟೀಲ್, ಮುಲ್ಕಿ ಮೂಡಬಿದಿರೆ ಶಾಸಕ ಉಮಾನಾಥ ಕೋಟ್ಯಾನ್, ಹರೀಶ್ ಪೂಂಜ, ಎ,ಜೆ.ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Kinnigoli-03021901 Kinnigoli-03021902

Comments

comments

Comments are closed.

Read previous post:
Kinnigoli-30011904
ದೇಶ ಸೇವೆ ಮಾಡುವ ಹೆಮ್ಮೆ ನಮ್ಮದಾಗಬೇಕು

ಕಿನ್ನಿಗೋಳಿ: ಸೈನ್ಯಕ್ಕೆ ಸೇರಲು ಮುಂದಾಗುವವರನ್ನು ಪ್ರೋತ್ಸಾಹಿಸಬೇಕು. ದೇಶ ಸೇವೆ ಮಾಡುವ ಹೆಮ್ಮೆ ನಮ್ಮದಾಗಬೇಕು ಎಂದು ನಿವೃತ್ತ ಸೈನಿಕ, ಮುಳುಗುತಜ್ಞ ಕಮಲಾಕ್ಷ ಬಂಗೇರ ಹೇಳಿದರು. ಕೊಡೆತ್ತೂರು ಕೋರ‍್ದಬ್ಬು ದೈವಸ್ಥಾನದ ವಾರ್ಷಿಕ...

Close