ಕಟೀಲು ಗ್ರಾಮ ಸಭೆ

ಕಿನ್ನಿಗೋಳಿ: ಕಟೀಲು ಗ್ರಾಮ ಪಂಚಾಯಿತಿಯ 2018-19 ರ ಸಾಲಿನ ದ್ವಿತೀಯ ಹಂತದ ಗ್ರಾಮ ಸಭೆ ಪಂಚಾಯಿತಿ ಅಧ್ಯಕ್ಷೆ ಗೀತಾ ಪೂಜಾರ್ತಿ ಅಧ್ಯಕ್ಷತೆಯಲ್ಲಿ ಕಟೀಲು ದೇವಳದ ಸರಸ್ವತಿ ಸದನದಲ್ಲಿ ನಡೆಯಿತು.
ಕಟೀಲು ದೇವಳದ ಯಾತ್ರಿ ನಿವಾಸಕ್ಕೆ ಪರವಾನಿಗೆ ಇದೆಯೋ ಇಲ್ಲವೋ ಎಂದು ಗ್ರಾಮಸ್ಥ ಸಂಜೀವ ಮಡಿವಾಳ ಕೇಳಿದಾಗ ಕಟೀಲು ಗ್ರಾಮ ಪಂಚಾಯಿತಿ ಪಿ.ಡಿ.ಒ ಪ್ರಕಾಶ್ ಬಿ ಉತ್ತರಿಸಿ ಕಟೀಲು ದೇವಳದಿಂದ ಪರವಾನಿಗೆ ಅರ್ಜಿ ಬಂದಿದೆ ಸೂಕ್ತ ದಾಖಲತಿ ಇಲ್ಲದೆ ಪರವಾನಿಗೆ ನೀಡಲಾಗುವುದಿಲ್ಲ ಎಂದಾಗ ಕಟೀಲು ದೇವಳ ಅರ್ಚಕ ಹರಿನಾರಾಯಣ ದಾಸ ಆಸ್ರಣ್ಣ ಮಾತನಾಡಿ ಯಾತ್ರಿ ನಿವಾಸ ಪ್ರವಾಸೋಧ್ಯಮ ಇಲಾಖೆಯಿಂದ ನಿರ್ಮಾಣಗೊಂಡಿದೆ. ಪರವಾನಿಗೆ ಇದುವರೆಗೆ ಆಗಿಲ್ಲ, ಅಜಾರು ವಿನಲ್ಲಿ ಅಂಗನವಾಡಿ, ಹಾಲಿನ ಡೈರಿ ಮತ್ತಿತರರ ಸಂಸ್ಥೆಗಳು ಕಾರ್ಯಾಚರಿಸುವ ಕಟ್ಟಡಕ್ಕೂ ಪರವಾನಿಗೆ ಇಲ್ಲ ಎಂದು ಹರಿನಾರಾಯಣ ದಾಸ ಆಸ್ರಣ್ಣ ಹೇಳಿದರು. ಈ ಸಂದರ್ಭ ಸಂಜೀವ ಮಡಿವಾಳ ಅರ್ಚಕರಾದ ಹರಿನಾರಾಯಣ ದಾಸ ಆಸ್ರಣ್ಣ ಮತ್ತು ಅನಂತಪದ್ಮನಾಭ ಆಸ್ರಣ್ಣ ಅವರ ನಡುವೆ ಮಾತಿನ ಚಕಮಕಿ ನಡೆಯಿತು. ಪರವಾನಿಗೆ ಇಲ್ಲದ ಎಲ್ಲಾ ಅನಧಿಕೃತ ಕಟ್ಟಡಗಳನ್ನು ತೆಗೆಯಿರಿ ಎಂದು ಗ್ರಾಮಸ್ಥರು ಆಗ್ರಹಿಸಿದರು. ಈ ಸಂದರ್ಭ ಎಲ್ಲಾ ಪರವಾನಿಗೆ ಇಲ್ಲದ ಅನಧಿಕೃತ ಕಟ್ಟಡಗಳ ಬಗ್ಗೆ ಪಂಚಾಯಿತಿ ಆಡಳಿತ ಕ್ರಮ ಕೈಗೊಳ್ಳಲು ನಿರ್ಣಯಿಸಲಾಯಿತು.
ಅಜಾರು ಸಮೀಪದಲ್ಲಿದ್ದ ಸಾರ್ವಜನಿಕ ಶೌಚಾಲಯವನ್ನು ನೆಲಸಮಗೊಳಿಸಲಾಗಿದೆ ಆದರೆ ಪರ್ಯಾಯ ವ್ಯವಸ್ಥೆ ಕಲ್ಪಿಸಿದ ನಂತರ ಇದನ್ನು ನೆಲಸಮಗೊಳಿಸುವುದೆಂದು ಹಿಂದಿನ ಗ್ರಾಮ ಸಭೆಯಲ್ಲಿ ನಿರ್ಣಯಿಸಲಾಗಿತ್ತು ಪರ್ಯಾಯ ವ್ಯವಸ್ಥೆ ಕಲ್ಪಿಸದೆ ಶೌಚಾಲಯ ಕೆಡವಲಾಗಿದೆ ಎಂದು ಸಂಜೀವ ಮಡಿವಾಳ ಕೇಳಿದಾಗ ದುರ್ಗಾ ಸಂಜೀವಿನಿ ಆಸ್ಪತ್ರೆಯವರು ಇದಕ್ಕೆ ಪರ್ಯಾಯವಾಗಿ ಬೇರೆ ಶೌಚಾಲಯ ನಿರ್ಮಿಸಿ ಕೊಡುವ ಭರವಸೆ ನೀಡಿದ್ದಾರೆ ಎಂದು ಪಿ.ಡಿ.ಒ ಪ್ರಕಾಶ್ ಉತ್ತರಿಸಿದರು.
ಚರ್ಚ್ ಮುಂಭಾಗದ ಅಜಾರು ರಸ್ತೆ ಸಮೀಪ ಜಿಲ್ಲಾ ಪಂಚಾಯಿತಿ ಬೋರ್‌ವೆಲ್ ಹಾನಿಗೊಳಿಸಿ ರಸ್ತೆಯನ್ನು ನಿರ್ಮಿಸಿದ್ದೀರಾ ಇದು ಆಕ್ರಮ ರಸ್ತೆಯಾಗಿದೆ ಎಂದು ಚಂದ್ರಶೇಖರ್ ಬರ್ಕೆ ಮತ್ತು ಸಂಜೀವ ಮಡಿವಾಳ ಆರೋಪಿಸಿದರು. ಇದಕ್ಕೆ ಉತ್ತರಿಸಿದ ಸದಸ್ಯ ರಮಾನಂದ ಪೂಜಾರಿ ಬೋರ್ ವೆಲ್ ನಿಷ್ಕ್ರೀಯವಾಗಿದ್ದು ಯಾರಿಗೂ ಪ್ರಯೋಜನ ಇರಲಿಲ್ಲ ಎಂದರು.
ಕಟೀಲು ಮುಖ್ಯ ರಸ್ತೆಯಲ್ಲಿ ಕಾರ್ಯಾಚರಿಸುವ ರೇಶನ್ ಅಂಗಡಿಯನ್ನು ಬೇರೆ ಕಡೆಗೆ ಸ್ಥಳಾಂತರಿಸಬೇಕು ಎಂದು ಹಿಂದಿನ ಗ್ರಾಮ ಸಭೆಯಲ್ಲಿ ಹೇಳಲಾಗಿದ್ದರೂ ಇನ್ನೂ ಕ್ರಮ ಕೈಗೊಂಡಿಲ್ಲ ಎಂದು ಸಂಜೀವ ಮಡಿವಾಳ ಹೇಳಿದರು. ಇದಕ್ಕೆ ಉತ್ತರಿಸಬೇಕಾದ ಆಹಾರ ಇಲಾಖೆಯವರು ಗೈರು ಹಾಜರಾದ ಕಾರಣ ಸಮಸ್ಯೆ ಬಗೆಹರಿಯಲು ಕಷ್ಟ ಸಾಧ್ಯ ವಿಶೇಷ ಸಭೆ ಕರೆದು ಅಧಿಕಾರಿಗಳನ್ನು ಬರಹೇಳಲಾಗೆ ಸಮಸ್ಯೆ ಬಗೆಹರಿಸಲಾಗುವುದು ಎಂದು ಪಿ.ಡಿ.ಒ ತಿಳಿಸಿದರು.
ಕಿನ್ನಿಗೋಳಿಯಿಂದ ಉಲ್ಲಂಜೆಗೆ ಸಂಪರ್ಕ ಕಲ್ಪಿಸುವ ರಸ್ತೆ ಸಂಚಾರ ಆಯೋಗ್ಯವಾಗಿದ್ದು ಕಟೀಲು ದೇವಳಕ್ಕೆ ಬರುವ ಭಕ್ತಾಧಿಗಳಿಗೆ ತೊಂದರೆಯಾಗುತ್ತಿದೆ. ಮುಂದಿನ ವರ್ಷ ಬ್ರಹ್ಮಕಲಶದ ಒಳಗೆ ಡಾಮರೀಕರಣಗೊಳಿಸಿ ಎಂದು ದೇವಿ ಪ್ರಸಾದ್ ಶೆಟ್ಟಿ ಹೇಳಿದಾಗ ಜಿಲ್ಲಾ ಪಂಚಾಯಿತಿ ಸದಸ್ಯೆ ಕಸ್ತೂರಿ ಪಂಜ ಉತ್ತರಿಸಿ ರಸ್ತೆ ಜಿಲ್ಲಾ ಪಂಚಾಯಿತಿಗೆ ಸೇರಿದೆ. ಆದರೆ ಒಂದು ಜಿಲ್ಲಾ ಪಂಚಾಯಿತಿ ಕ್ಷೇತ್ರಕ್ಕೆ ೨೨ ಲಕ್ಷ ಅನುದಾನವಿದ್ದು ಅದನ್ನು ಗ್ರಾಮ ಪಂಚಾಯಿತಿಗಳಿಗೆ ಹಂಚಬೇಕು ಒಂದೇ ಕಡೆ ಮೀಸಲು ಇಡಲು ಸಾಧ್ಯವಿಲ್ಲ, ಶಾಸಕರ ಅಥವಾ ಸಂಸದರ ಅನುದಾನ ಬೇಕಾಗಿದೆ. ಪ್ರಸ್ತುತ ಶಾಸಕ ಉಮಾನಾಥ ಕೋಟ್ಯಾನ್ ಈ ರಸ್ತೆಗೆ 75 ಲಕ್ಷ ರೂಪಾಯಿ ನೀಡುವ ಭರವಸೆಇದ್ದು ಶೀಘ್ರ ದುರಸ್ತಿಗೊಳ್ಳಲಿದೆ ಎಂದರು.
ಪಕ್ಷಿಕೆರೆ ಕೃಷಿ ಯಂತ್ರ ಧಾರ ಕೇಂದ್ರದಲ್ಲಿ ರೈತರಿಗೆ ಬಾಡಿಗೆಗೆ ಯಂತ್ರ ಸಿಗೊಲ್ಲ, ಕೇರಳ ರಾಜ್ಯಕ್ಕೆ ಯಂತ್ರವನ್ನು ಕೊಂಡೊಯ್ಯಲಾಗುತ್ತಿದೆ ಈ ಬಗ್ಗೆ ದೂರು ನೀಡಿದರೂ ಪ್ರಯೋಜನವಿಲ್ಲದಂತಾಗಿದೆ ಎಂದು ಪ್ರಗತಿಪರ ಕೃಷಿಕ ಪುರುಷೋತ್ತಮ ಕೋಟ್ಯಾನ್ ಹೇಳಿದಾಗ ಉತ್ತರಿಸಿದ ಕೃಷಿ ಅಧಿಕಾರಿ ಬಷೀರ್ ಮೇಲಾಧಿಕಾರಿ ಅವರ ಗಮನಕ್ಕೆ ತರಲಾಗಿದೆ ಎಂದರು.
ಕಟೀಲಿಗೆ ಕಾಯಂ ಆಗಿ ಗ್ರಾಮ ಕರಣಿಕ ಬೇಕು, ಪೈಪ್ ಲೈನ್ ಗೆಂದು ಅಗೆದ ರಸ್ತೆಯನ್ನು ಸರಿಪಡಿಸಿ, ಜುಮಾದಿಗುಡ್ಡೆಯಲ್ಲಿ ಹಲವರಿಗೆ ಹಕ್ಕು ಪತ್ರ ಇಲ್ಲ ಮತ್ತಿತರ ವಿಷಯಗಳ ಬಗ್ಗೆ ಚರ್ಚೆ ನಡೆಯಿತು.
ವಿವಿಧ ಇಲಾಖಾಧಿಕಾರಿಗಳು ಇಲಾಖಾ ಮಾಹಿತಿ ನೀಡಿದರು.
ತಾಲೂಕು ಪಂಚಾಯತ್ ಸದಸ್ಯ ಸುಕುಮಾರ್ ಸನಿಲ್, ಕಟೀಲು ಪಂಚಾಯಿತಿ ಉಪಾಧ್ಯಕ್ಷ ಕಿರಣ್ ಕುಮಾರ್ ಶೆಟ್ಟಿ, ಪಂಚಾಯಿತಿ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.

Kinnigoli-08021903

Comments

comments

Comments are closed.

Read previous post:
Kinnigoli-08021902
ಪಟ್ಟೆ : ರಿಕ್ಷಾ ನಿಲ್ದಾಣ ಮೇಲ್ಚಾವಣಿ ಉದ್ಘಾಟನೆ

ಕಿನ್ನಿಗೋಳಿ: ಐಕಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಏಳಿಂಜೆ ಪಟ್ಟೆ ಬಳಿ 1.5ಲಕ್ಷ ರೂಪಾಯಿ ಅನುದಾನದಲ್ಲಿ ನಿರ್ಮಾಣಗೊಂಡ ರಿಕ್ಷಾ ನಿಲ್ದಾಣದ ಮೇಲ್ಚಾವಣಿ ಮತ್ತು ಇಂಟರ್ ಲಾಕ್ ವಿಧಾನ ಪರಿಷತ್...

Close