ರಾಜಕಾರಣ ವೃತ್ತಿಯಾಗದೆ ವ್ರತವಾಗಬೇಕು

ಕಿನ್ನಿಗೋಳಿ : ಈಗಿನ ಕಾಲದಲ್ಲಿ ರಾಜಕಾರಣ ವೃತ್ತಿಯಂತಾಗುತ್ತಿದೆ. ಆದರೆ ಅದನ್ನು ವ್ರತವನ್ನಾಗಿಸುವ ಪ್ರಯತ್ನ ಜನಪ್ರತಿನಿಧಿಗಳು ಹಿಂದೆ ಸಮಾಜ ಸುಧಾರಣೆ, ಅಭಿವೃದ್ಧಿಯ ಬಗ್ಗೆ ಹೆಚ್ಚು ಗಮನಕೊಟ್ಟು ಜನಪರ ಕಾಳಜಿಯ ಕಾನೂನು ಯೋಜನೆಗಳನ್ನು ರೂಪಿಸುತ್ತಿದ್ದರು. ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಲಾದ ಕೋಟ ರಾಜಕಾರಣದ ನೋಟ ಕಾರ್ಯಕ್ರಮದಲ್ಲಿ ರಾಜಕಾರಣದ ಬಗ್ಗೆ ಉಪನ್ಯಾಸ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಕರ್ನಾಟಕ ರಾಜ್ಯದ ಬಜೆಟ್‌ನಲ್ಲಿ 11% ಪ್ರಾಥಾಮಿಕ ಮತ್ತು ಪ್ರೌಢ ಶಿಕ್ಷಣಕ್ಕಾಗಿ ಮೀಸಲಾಗಿರಿಸಿದೆ. 1947 ನೇ ಇಸವಿಯಲ್ಲಿ 9 ರಿಂದ 11% ವಿದ್ಯಾವಂತರಿದ್ದು ಇದೀಗ 80 ರಿಮದ 82 % ರಷ್ಟು ವಿದ್ಯಾವಂತರಿದ್ದರೂ ಅಪರಾಧ ಮಟ್ಟ ಕಡಿಮೆಯಾಗಿಲ್ಲದಿರುವುದು ವಿಪರ‍್ಯಾಸ. ಒಂದೇ ಒಂದು ತೊಟ್ಟು ನೀರು ಬರದ ಎತ್ತಿನ ಹೊಳೆ ಯೋಜನೆಗೆ ಹದಿಮೂರು ಸಾವಿರ ಕೋಟಿ ರೂಪಾಯಿ ಖರ್ಚು ಮಾಡುತ್ತಾರೆ. ಅದೇ ನೇತ್ರಾವತಿ ಇರುವ ದಕ್ಷಿಣ ಕನ್ನಡಕ್ಕೆ ಕುಡಿಯುವ ನೀರಿಗಾಗಿ ಬರೆ ಇನ್ನೂರು ಕೋಟಿ ರೂ. ಅನುದಾನ ಕೊಡುತ್ತಾರೆ, ಹಾಗಿದ್ದೂ ಆ ಹಣ ಖರ್ಚಾಗಿಲ್ಲ. ಕಳಪೆ ಕಾಮಗಾರಿಗಳಾಗದಂತೆ ನಾಗರಿಕರೂ ಕೆಲಸ ಆಗುವಲ್ಲಿ ನಿಂತು ಗಮನಿಸಿ, ತಮ್ಮ ತೆರಿಗೆ ಹಣ ಪೋಲಾಗದಂತೆ ನೋಡಿಕೊಳ್ಳಬೇಕು. ಕೆಲಸ ಸರಿಯಿಲ್ಲದಾಗ ಪ್ರಶ್ನಿಸುವ ಔದಾರ್ಯ ತೋರಿಸಬೇಕು ಈಗಿನ ರಾಜಕಾರಣದಲ್ಲಿ ಸಾಮಾಜಿಕ ಬದ್ದತೆ ಕಡಿಮೆಯಾಗಿದೆ ಎಂದು ತೋರುತ್ತದೆ ಎಂದರು.
ಕರಾವಳಿ ಜಿಲ್ಲೆಗಳ ಸಾಧನೆಗೆ ಶ್ರೀನಿವಾಸ ಮಲ್ಯ, ಟಿ. ಎ. ಪೈಯಂತಹ ಹಿರಿಯರು ನೀಡಿದ ಶೈಕ್ಷಣಿಕ, ಆರೋಗ್ಯ ಸಂಸ್ಥೆಗಳ ಮೂಲಕ ಕೊಟ್ಟ ಕೊಡುಗೆ ಕಾರಣ ಎಂದರು.
ಎಂ. ಸಿ.ನಾಣಯ್ಯರಂತಹ ಶಾಸಕರು ಕಾನೂನುಗಳನ್ನು ರೂಪಿಸುವ ಸಂದರ್ಭ ಅನೇಕ ಚರ್ಚೆಗಳ ಮೂಲಕ ಸಚಿವರ ಬೆವರಿಳಿಸುತ್ತಿದ್ದರು. ಪಾಪ ಅಂತಹವರು ಹಣ ಇಲ್ಲವೆಂಬ ಕಾರಣಕ್ಕೆ ಮತ್ತೆ ಶಾಸಕರಾಗಿಲ್ಲ. ವೈ.ಎಸ್.ವಿ ದತ್ತ, ಶಂಕರಮೂರ್ತಿ, ರಮೇಶ್ ಕುಮಾರ್, ಸುರೇಶ್ ಕುಮಾರ್ ಅವರಂತಹವರನ್ನು ಕಂಡಾಗ ರಾಜಕಾರಣ ಪೂರ್ತಿ ಕೆಟ್ಟಿಲ್ಲ ಎಂಬ ಸಮಾಧಾನವಿದೆ. ರಾಜಕಾರಣದ ಹೊರಗೆ ನಿಂತು ಕೆಟ್ಟಿದೆ ಎನ್ನುವ ಬದಲು ವಿದ್ಯಾವಂತರು, ಕೆಲಸ, ಸೇವೆ ಮಾಡಬೇಕು. ರಾಜಕಾರಣಕ್ಕೆ ಬಂದು ಸರಿಪಡಿಸುವ ಶುದ್ಧವಾಗಿಸುವ ಪ್ರಯತ್ನ ಮಾಡಬೇಕು. ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಅರ್ಹತೆ ಮೇಲೆಯೇ ಉದ್ಯೋಗ ಸಿಕ್ಕಿದ ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಾರೆ. ಅಂತಹವರು ನಮ್ಮೊಡನೆ ಇದ್ದಾರೆ ಎಂಬುದೇ ಆಶಾಕಿರಣ. ಭಿನ್ನ ಮತ್ತು ಉತ್ತಮ ರಾಜಕಾರಣಿಯನ್ನು ಜನ ಪ್ರೀತಿಸುತ್ತಾರೆ ಎನ್ನುವುದಕ್ಕೆ ರಾಮಕೃಷ್ಣ ಹೆಗಡೆ ರಾಜೀನಾಮೆ ಕೊಡಲು ಮುಂದಾದಾಗ ಮೈಲುಗಟ್ಟಲೆ ಸೇರಿದ ಜನ ಸೇರಿ ರಾಜೀನಾಮೆ ಕೊಡಬೇಡಿ ಎಂದ ಉದಾಹರಣೆಯಿದೆ. ಗ್ರಾಮಸಭೆಗಳಲ್ಲಿ ಆದ ನಿರ್ಣಯವನ್ನು ಯಾವ ಕೋರ್ಟಿಗೂ ಬದಲಾಯಿಸಲು ಸಾಧ್ಯವಿಲ್ಲ. ಗ್ರಾಮ ಸಭೆಗಳಲ್ಲಿ ಭಾಗವಹಿಸಿ ಎಂದರು.
ಕಟೀಲು ದೇವಳ ಕಾಲೇಜು ಪ್ರಿನ್ಸಿಪಾಲ್ ಪ್ರೊ. ಎಂ. ಬಾಲಕೃಷ್ಣ ಶೆಟ್ಟಿ, ಲಲಿತಕಲಾ ಸಂಘದ ಗಣಪತಿ ಭಟ್, ಜಿ.ಪಂ. ಮಾಜಿ ಸದಸ್ಯ ಈಶ್ವರ ಕಟೀಲ್, ಕಟೀಲು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕಿರಣ್ ಶೆಟ್ಟಿ, ಸದಸ್ಯ ಜನಾರ್ದನ ಕಿಲೆಂಜೂರು ಉಪಸ್ಥಿತರಿದ್ದರು.
ಉಪನ್ಯಾಸಕ ಡಾ. ಕೃಷ್ಣ ಕಾಂಚನ್ ಸ್ವಾಗತಿಸಿದರು. ಸಂತೋಷ್ ಆಳ್ವ ವಂದಿಸಿದರು. ಸನ್ನಿಧಿ ಕಾರ್ಯಕ್ರಮ ನಿರೂಪಿಸಿದರು.

Kinnigol-02031901

Comments

comments

Comments are closed.

Read previous post:
Kinnigol-28021908
ಕಟೀಲು ಮಲ್ಲಿಗೆಯಂಗಡಿ ರಸ್ತೆ ಶಿಲನ್ಯಾಸ

ಕಿನ್ನಿಗೋಳಿ : ಗ್ರಾಮೀಣ ಭಾಗದಲ್ಲಿ ಅನೇಕ ರಸ್ತೆಗಳು ಇನ್ನೂ ಕಾಂಕ್ರೀಟಿಕರಣಗೊಂಡಿಲ್ಲ ಮಂದಿನ ದಿನದಲ್ಲಿ ಹಂತ ಹಂತವಾಗಿ ಎಲ್ಲಾ ರಸ್ತೆಗಳನ್ನು ಅಭಿವೃದ್ದಿ ಪಡಿಸಲಾಗುವುದು ಎಂದು ಮೂಲ್ಕಿ ಮೂಡಬಿದಿರೆ ಶಾಸಕ ಉಮಾನಾಥ...

Close