ಸಸಿಹಿತ್ಲು ಬೀಚ್

ಕಿನ್ನಿಗೋಳಿ : ಹಳೆಯಂಗಡಿ ಬಳಿಯ ಸಸಿಹಿತ್ಲು ಮುಂಡಾ ಬೀಚ್‌ನಲ್ಲಿ ತೀವ್ರ ನದಿ ಕಡಲು ಕೊರೆತದಿಂದ ಹಳೆಯಂಗಡಿ ಗ್ರಾಮ ಪಂಚಾಯಿತಿ ನಿರ್ಮಿಸಿದ ಅಂಗಡಿ ಕೋಣೆ ಸಂಪೂರ್ಣವಾಗಿ ನೆಲಸಮಗೊಂಡಿದೆ. ಅಂಗಡಿ ಕೋಣೆಯ ಅವಶೇಷಗಳು ನದಿ ಪಾಲಾಗುವ ಸ್ಥಿತಿಯಲ್ಲಿದೆ.
ಅಂತಾರಾಷ್ಟ್ರೀಯ ಸರ್ಫಿಂಗ್ ಬೀಚ್ ಎಂದು ಪ್ರಖ್ಯಾತವಾದ ಮುಂಡ ಬೀಚ್‌ನ್ನು ಪ್ರವಾಸಿ ತಾಣವಾಗಿ ನಿರ್ಮಿಸುವ ಇರಾದೆಯಿಂದ ಹಳೆಯಂಗಡಿ ಗ್ರಾಮ ಪಂಚಾಯಿತಿ ಶಾಂಭವಿ ಮತ್ತು ನಂದಿನಿ ಸಂಗಮದ ಪ್ರದೇಶವಾದ ಅಳಿವೆ ಪ್ರದೇಶದ ಪಕ್ಕದಲ್ಲಿ ಬೀಚ್ ಅಭಿವೃದ್ಧಿ ಸಮಿತಿಯ ಮೂಲಕ ಮೂರು ಅಂಗಡಿ ಕೋಣೆಗಳನ್ನು ನಿರ್ಮಿಸಿ ಬರುವ ಪ್ರವಾಸಿಗರಿಗೆ ಉತ್ತಮ ಸೌಕರ್ಯ ಸೌಲಭ್ಯಗಳನ್ನು ಕಲ್ಪಿಸಿತ್ತು.
ಕಳೆದ ಮಳೆಗಾಲದ ನಂತರ ನದಿ ಕಡಲು ಕೊರೆತ ಪ್ರಾರಂಭವಾಗಿ ಬೃಹತ್ ಗಾಳಿ ಮರಗಳು, ಬೆಂಚುಗಳ ಸಹಿತ ಸಮುದ್ರ ಪಾಲಾಗಿತ್ತು. ಮಾರ್ಚ್ ತಿಂಗಳಲ್ಲಿ ಶ್ರೀ ಭಗವತಿ ವೆಜ್ ರೆಸ್ಟೋರಂಟ್‌ನ ಪಂಚಾಂಗದ ಬಳಿ ನದಿ ಕೊರೆತ ಬಂದಿತ್ತು. ಇದೀಗ ಅಂಗಡಿ ಕೋಣೆ ನದಿ ಪಾಲಾಗಿರುವುದರಿಂದ ಸುಮಾರು 5 ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.
ಜನರಿಗೆ ಉತ್ತಮ ವ್ಯವಸ್ಥೆಗಳನ್ನು ಕಲ್ಪಿಸಲು ಇತ್ತೀಚೆಗೆ ಬೀಚ್ ಪ್ರವೇಶ ದ್ವಾರದಲ್ಲಿ ಪ್ರವೇಶ ಶುಲ್ಕ ಕೂಡಾ ವಿಧಿಸಿತ್ತು. ಇದರಿಂದ ಪಂಚಾಯಿತಿಗೆ ಆದಾಯ ಬರುತ್ತಿತ್ತು. ಬರುವ ಆದಾಯದಿಂದ ಬೀಚನ್ನು ಅಭಿವೃದ್ದಿ ಪಡಿಸುವ ಕಲ್ಪನೆ ಹೊಂದಿತ್ತು. ಆದರೆ ಸರಿಯಾದ ವ್ಯವಸ್ಥೆ ಕಲ್ಪಿಸದೆ ಶುಲ್ಕ ಕೇಳುವುದು ಯಾವ ತರದ ನ್ಯಾಯ ಎಂದು ಪ್ರವಾಸಿಗರು ಪ್ರಶ್ನಿಸುತ್ತಿದ್ದಾರೆ. ಸರಿಯಾದ ಅಭಿವೃದ್ದಿ ಮಾಡಲು ಹಳೆಯಂಗಡಿ ಗ್ರಾಮ ಪಂಚಾಯಿತಿಗೆ ತಾಂತ್ರಿಕ ಕಾರಣದ ಕೊರತೆಯೂ ಇದೆ. ಇದನ್ನು ಸರಿಪಡಿಸಲು ಸಂಭಂದಪಟ್ಟ ಇಲಾಖೆ ಶೀಘ್ರ ಪರಿಹಾರ ಕೈಗೊಳ್ಳಬೇಕಾಗಿದೆ.
ಕದಿಕೆ ಸೇತುವೆ ಹಾಗೂ ಮುಕ್ಕ ಸೇತುವೆ ಕೆಳಬಾಗದಲ್ಲಿ ಸೇತುವೆ ನಿರ್ಮಾಣ ಕಾಲದಲ್ಲಿ ತುಂಬಿಸಿದ್ದ ಮಣ್ಣನ್ನು ಸೂಕ್ತ ರೀತಿಯಲ್ಲಿ ತೆಗೆಯದೆ ಇರುವುದು. ನದಿಯಲ್ಲಿ ಅರ್ಧಂಬರ್ಧ ಹೂಳೆತ್ತುವಿಕೆ, ಹೊಗೆ ಇಲೇವಾರಿ ಹಾಗೂ ತಾಂತ್ರಿಕ ಸಮಸ್ಯೆಯಿಂದ ಕೂಡಿದ ಕಡಲಿಗೆ ಕಲ್ಲು ಹಾಕುವ ನಿಷ್ಪ್ರಯೋಜಕ ಯೋಜನೆಯಿಂದ ಈ ಸಮಸ್ಯೆ ತಲೆದೋರಿದೆ. ಕೆಲವು ತಿಂಗಳುಗಳ ಹಿಂದೆಯೇ ಪಂಚಾಯಿತಿ ಆಡಳಿತ ಹಾಗೂ ಗ್ರಾಮಸ್ಥರು ಜನಪ್ರತಿನಿಧಿಗಳನ್ನು ಹಾಗೂ ಜಿಲ್ಲಾಡಳಿತಕ್ಕೆ ಮನವಿ ಮತ್ತು ಸ್ಥಳ ಭೇಟಿ ಮಾಡಿಸಿ ಬೀಚಿನ ವಸ್ತು ಸ್ಥಿತಿ ಅರಿವು ಮಾಡಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.
ಇನ್ನಾದರೂ ಪಂಚಾಯಿತಿ, ಜಿಲ್ಲಾಡಳಿತ ಹಾಗೂ ಸರಕಾರ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಅಲ್ಲದೆ ನದಿ ಕೊರೆತ ಮುಂದುವರಿದಲ್ಲಿ ಇನ್ನುಳಿದ ಎರಡು ಅಂಗಡಿ ಕೋಣೆಗಳು, ಸಾರ್ವಜನಿಕ ಶೌಚಾಲಯ, ಬೀಚ್‌ನ ವಿಹಾರ ತಾಣ ಸಹಿತ ಸಂಪೂರ್ಣವಾಗಿ ನದಿ ಸಮುದ್ರ ಪಾಲಾಗುವುದು ನಿಶ್ಚಿತ ಎಂದು ಸ್ಥಳೀಯರು ಹಾಗೂ ಮೀನುಗಾರರು ಆತಂಕ ವ್ಯಕ್ತಪಡಿಸಿದ್ದಾರೆ.

ಸ್ಪಂದನೆ ಕೊಡದ ಇಲಾಖೆಗಳು
ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡ ಪ್ರದೇಶವನ್ನು ಉಳಿಸಿಕೊಳ್ಳಲು ಪಂಚಾಯಿತಿಯು ಬೇರೆ ಬೇರೆ ಮೂಲಗಳಿಂದ ಪ್ರಯತ್ನ ಸೌಕರ್ಯ ನೀಡಲು ಬದ್ದವಾಗಿದೆ ಆದರೆ ನಮ್ಮ ಮನವಿಗೆ ಸಂಭಂದಪಟ್ಟ ಇಲಾಖೆಗಳು ಸ್ಪಂದಿಸುತ್ತಿಲ್ಲ.
ಎಚ್.ವಸಂತ ಬೆರ್ನಾಡ್
ಅಧ್ಯಕ್ಷರು ಬೀಚ್ ಅಭಿವೃದ್ಧಿ ಸಮಿತಿ

2 ವರ್ಷದಿಂದ ಸರ್ಫಿಂಗ್ ಸ್ಪರ್ಧೆ ಆಡಚಣೆ
ಕಳೆದ ವರ್ಷ ವಿಧಾನ ಸಭೆ ಚುನಾವಣೆ ಹಾಗೂ ಈ ವರ್ಷ ಲೋಕಸಭಾ ಚುನಾವಣೆಯಿಂದಾಗಿ ಸರ್ಫಿಂಗ್ ಸ್ಪರ್ಧೆಗೆ ಅಡಚಣೆ ಉಂಟಾಗಿದೆ

Kinnigoli-11041905
ಧರಶಾಹಿಯಾದ ಅಂಗಡಿ ಕೋಣೆ

Kinnigoli-11041906
ಮಾರ್ಚ್ ತಿಂಗಳಲ್ಲಿ (18ನೇ ತಾರೀಖು) ಇದ್ದ ಅಂಗಡಿ ಕೋಣೆ

Kinnigoli-11041907

ಮಾರ್ಚ್ ತಿಂಗಳಲ್ಲಿ (28ನೇ ತಾರೀಖು) ಇದ್ದ ಅಂಗಡಿ ಕೋಣೆ ಹಿಂಬದಿ

Comments

comments

Comments are closed.

Read previous post:
Mulki-12041901
ಶ್ರೀ ವಿಠೋಭ ರುಖುಮಾಯಿ ಮಂದಿರಕ್ಕೆ ಭೇಟಿ

ಮೂಲ್ಕಿ: ಲೋಕ ಸಭಾ ಚುಣಾವಣೆಯ ಪ್ರಯುಕ್ತ ಸಂಸದ ನಳಿನ್ ಕುಮಾರ್ ಕಟೀಲು ಗುರುವಾರ ಮೂಲ್ಕಿಯಲ್ಲಿ ಮತಯಾಚನೆ ನಡೆಸಿದರು _ ಸಂದರ್ಭ ಮೂಲ್ಕಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ, ಬಾಳೆಹಿತ್ಲು...

Close