KINNIGOLI

ನಮ್ಮ ಕಿನ್ನಿಗೋಳಿ

ಮೂಲ್ಕಿಯಿಂದ ಮೂಡಬಿದ್ರೆಗೆ ಹೋಗುವ ಮಾರ್ಗದಲ್ಲಿ ಒಂಭತ್ತು ಕಿ.ಮೀ. ಕ್ರಮಿಸಿದ ಮೇಲೆ ನಡುವೆ ಸಿಗುವ ನಗರವೇ ಕಿನ್ನಿಗೋಳಿ. ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ತಾಲೂಕಿನಲ್ಲಿರುವ ಕಿನ್ನಿಗೋಳಿ ಮೊದಲಿನಿಂದಲೂ ಒಂದಲ್ಲ ಒಂದು ಮಹತ್ತ್ವ ಪಡೆದು ಸುತ್ತ ಮುತ್ತಲಿನ ಪರಿಸರದಲ್ಲಿ ತನ್ನ ಹೆಸರನ್ನು ಗುರುತಿಸಿ ಕೊಂಡಿರುವ ಒಂದು ಗ್ರಾಮೀಣ ಪ್ರದೇಶವಾಗಿದೆ. ಮೂಲ್ಕಿ ಹೋಬಳಿಗೆ ಸೇರಿದ ತಾಳಿಪಾಡಿ ಹಾಗೂ ಮೆನ್ನಬೆಟ್ಟು ಗ್ರಾಮಗಳೆಂದು ಹೆಸರಿದ್ದರೂ ಜನ ಇದನ್ನು ಗುರುತಿಸುವುದು ಮಾತ್ರ ಕಿನ್ನಿಗೋಳಿಯಿಂದಲೇ. ಯಾಕೆ ಈ ಹೆಸರು ಬಂದಿತು ಎಂದು ಇಲ್ಲಿಯ ಹಿರಿಯರಲ್ಲಿ ಕೇಳಿದಾಗ ತಮ್ಮ ನೆನಪನ್ನು ಬಿಚ್ಚಿಟ್ಟು ಹೇಳುತ್ತಾರೆ. ಈಗಿನ ಮಾರ್ಕೆಟ್ ಇರುವಲ್ಲಿ ಮೊದಲು ವಿಸ್ತಾರವಾಗಿ ಚಾಚಿಕೊಂಡ ಗೆಲ್ಲುಗಳು ಹಾಗೂ ಬಿಳಲು ಬಿಟ್ಟ ಆಲದ ಮರ ಇತ್ತು. ಈ ಪರಿಸರದಲ್ಲಿ ಅಂಥ ಮರವೇ ಇರಲಿಲ್ಲ. ತುಳು ಭಾಷೆಯಲ್ಲಿ ಆಲದ ಮರವನ್ನು ಗೋಳಿ ಮರ ಎಂದು ಕರೆಯುತ್ತಾರೆ. ಈ ಮರಗಳಲ್ಲಿ ಎರಡು ಜಾತಿ ಇದ್ದು ಈ ಮರ ಸಣ್ಣ ಜಾತಿಯಾದಾಗಿದ್ದು ತುಳುವಿನಲ್ಲಿ ಕಿನ್ನಿ ಅಂದರೆ ಸಣ್ಣದು, ಕಿನ್ನಿಗೋಳಿ ಅಂದರೆ ಸಣ್ಣ ಆಲದ ಮರ ಎಂದರ್ಥ. ಅಲ್ಲದೆ ಈ ಪರಿಸರದಲ್ಲಿ ಇಂತಹ ಸಣ್ಣ ಜಾತಿಯ ತುಂಬಾ ಆಲದ ಮರಗಳಿದ್ದವು ಅಲ್ಲದೇ ಇಂಥಹ ಮರಗಳ ಆಕರ್ಷಣೆಯಿಂದಾಗಿ ಜನರು ಸ್ಥಳ ಗುರುತಿಗಾಗಿ ಈ ಊರನ್ನು ಕಿನ್ನಿಗೋಳಿ ಎಂದು ಕರೆದಿರಬಹುದು. ಇತಿಹಾಸದಿಂದ ಈ ಪ್ರದೇಶ ಆಳುಪರ ಮತ್ತು ಬಂಗರಸರ ಆಳ್ವಿಕೆಗೆ ಒಳಪಟ್ಟಿತ್ತು ಎಂದು ತಿಳಿದು ಬರುತ್ತದೆ. ಮಹಾತ್ಮಾ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರು ಕಿನ್ನಿಗೋಳಿಗೆ ಭೇಟಿ ನೀಡಿದ್ದರು. ರಾಷ್ಟ್ರೀಯ, ಸತ್ಯಾಗ್ರಹ ಚಳುವಳಿಯಲ್ಲೂ ಕಿನ್ನಿಗೋಳಿಯವರು ಕೂಡಾ ಭಾಗವಹಿಸಿದ ದೃಷ್ಟಾಂತಗಳಿವೆ.

ಜನಜೀವನ ಮತ್ತು ಉದ್ಯೋಗ:
ಪೇಟೆಯಲ್ಲಿ ಕ್ರೈಸ್ತ ಮತ್ತು ಗೌಡ ಸಾರಸ್ವತರ ಜನಸಂಖ್ಯೆ ಜಾಸ್ತಿಯಾಗಿದೆ. ಹಳ್ಳಿ ಪರಿಸರದಲ್ಲಿ ಬಂಟರು, ಬಿಲ್ಲವರು, ಬ್ರಾಹ್ಮಣರು, ವಿಶ್ವಕರ್ಮರು, ಶೆಟ್ಟಿಗಾರರು, ರಾಣೆಯಾರ್, ಕೊರಗರು, ಮುಸ್ಲಿಮರು ಹಾಗೂ ಇತರ ವರ್ಗದ ಜನರು ವಾಸಿಸುತಿದ್ದಾರೆ. ಮೂಲತ: ಇಲ್ಲಿನ ಭಾಷೆ ತುಳು. ಹೆಚ್ಚಿನವರು ಸಾಮಾನ್ಯವಾಗಿ ತುಳು, ಕೊಂಕಣಿ ಕನ್ನಡವನ್ನು ಸಲೀಸಾಗಿ ಮಾತನಾಡುತ್ತಾರೆ. ಮುಂಬಯಿ ನಂಟಿನಿಂದ ಮತ್ತು ವಿದ್ಯಾವಂತರ ತವರೂರಾದ್ದರಿಂದ ಹಿಂದಿ ಹಾಗೂ ಇಂಗ್ಲೀಷ್ ಭಾಷೆಯು ಇಲ್ಲಿ ಜನಜನಿತ.
ಹಲವು ವರ್ಷಗಳ ಹಿಂದೆ ನೇಕಾರಿಕೆಯಲ್ಲಿ ಎತ್ತಿದ ಕೈಯಾಗಿದ್ದ ಕಿನ್ನಿಗೋಳಿಯಲ್ಲಿ ತಯಾರಾದ ಸೀರೆಗಳಿಗೆ ಬಹಳ ಬೇಡಿಕೆ ಇತ್ತು. ಈಗಿನ ಯಾಂತ್ರಿಕ ನೇಕಾರಿಕೆಯಿಂದಾಗಿ ಕೈ ಮಗ್ಗಗಳ ಸಂಖ್ಯೆ ಕ್ಷೀಣಿಸುತ್ತಾ ಬರುತ್ತಿರುವುದು ವಿಷಾದನೀಯ ಸಂಗತಿ.
ಹಿಂದೆ ವೀಳ್ಯದೆಲೆ, ಶುಂಠಿ, ಗೇರು ಬೀಜ, ಗೆಣಸು, ಮೆಣಸು ಹಾಗೂ ತರಕಾರಿ ವ್ಯಾಪಾರಕ್ಕೆ ಕೇಂದ್ರ ಸ್ಥಳವಾಗಿತ್ತು. ಹೊಸ ತಲೆಮಾರಿನ ಯುವಜನರು ವಿದ್ಯಾವಂತರಾಗಿ ಬೆಂಗಳೂರು ಮುಂಬಯಿ, ಅರಬ್ ಮತ್ತು ಪಾಶ್ಚಿಮಾತ್ಯ ದೇಶಗಳ ನಂಟು ಬೆಳೆಸಿದ್ದರಿಂದ ವ್ಯವಸಾಯವು ಈಗ ಅವಸಾನದ ಅಂಚಿಗೆ ಬರುತ್ತಿದೆ. ಕೂಲಿಯಾಳುಗಳ ಕೊರತೆ ಕಾಣ ಬರುತ್ತಿದೆ. ಕೃಷಿ ಕ್ಷೇತ್ರದಲ್ಲಿಯೂ ಉತ್ತರಕರ್ನಾಟಕದ ಕೂಲಿಯಾಳುಗಳನ್ನು ನೆಚ್ಚುಕೊಳ್ಳುವ ಕಾಲ ಬಂದೊದಗಿದೆ. ಚಿನ್ನಾಭರಣಗಳ ವ್ಯಾಪಾರಕ್ಕೂ ಕೇಂದ್ರ ಸ್ಥಳವಾಗಿದೆ.

ಧಾರ್ಮಿಕ ಕೇಂದ್ರಗಳು
ಕಿನ್ನಿಗೋಳಿ ಕೊಸೆಸಾಂವ್ ಅಮ್ಮನವರ ಇಗರ್ಜಿ ೧೮೫೫ರಲ್ಲಿ ಸ್ಥಾಪನೆಯಾಗಿದೆ ಎಂದು ಇತಿಹಾಸ ಹೇಳುತ್ತಿದೆ. ಮೂರುಕಾವೇರಿಯ ಶ್ರೀ ಮಹಮ್ಮಾಯಿ ದೇವಸ್ಥಾನ, ಶ್ರೀ ರಾಮ ಮಂದಿರ,ಯುಗಪುರುಷದ ಶ್ರೀ ರಾಘವೇಂದ್ರ ಮಠ, ಕಿನ್ನಿಗೋಳಿ ಜುಮ್ಮಾ ಮಸೀದಿ ಕಿನ್ನಿಗೋಳಿ ಪರಿಧಿಯಲ್ಲಿ ಬರುವ ಧಾರ್ಮಿಕ ಕೇಂದ್ರಗಳು. ನಾಲ್ಕು ಕಿಲೋಮೀಟರ್ ದೂರವಿರುವ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳ ಕಿನ್ನಿಗೋಳಿ ಸಮಸ್ತರ ಆರಾಧ್ಯ ದೇವರು. ಸುರಗಿರಿ ಶ್ರೀ ಮಹಾಲಿಂಗೇಶ್ವರ ದೇವಳ, ಪುನರೂರು ವಿಶ್ವನಾಥ ದೇವಳ, ಎಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಳ, ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನ ತಾಳಿಪಾಡಿ ಮಠ, ಏಳಿಂಜೆ ಶ್ರೀ ಲಕ್ಷ್ಮೀ ಜನಾರ್ಧನ ಮಹಾಗಣಪತಿ ದೇವಸ್ಥಾನ, ತೋಕೂರು ಶ್ರೀ ಸುಬ್ರಹ್ಮಣ್ಯ ದೇವಳ, ಶಿಬರೂರು ಕೊಡಮಣಿತ್ತಾಯ, ಅರಸು ಕುಂಜಿರಾಯ ದೈವಸ್ಥಾನಗಳು ಪರಿಸರದಲ್ಲಿಯೇ ಇವೆ.

ಕಲೆ ಸಾಹಿತ್ಯ
ಮೂವತ್ತು ವರ್ಷಗಳ ಹಿಂದೆ ತಿಂಗಳಿಗೊಮ್ಮೆ ಯಕ್ಷಗಾನ ತಾಳಮದ್ದಲೆಗಳು ನಡೆಯುತ್ತ್ತಿದ್ದವು. ಈಗ “ಯಕ್ಷಲಹರಿ” ಎಂಬ ಸಂಸ್ಥೆ ಯುಗಪುರುಷದ ಸಹಕಾರದಲ್ಲಿ ವರ್ಷಕ್ಕೊಮ್ಮೆ ಕಾಲಮಿತಿಯ “ಯಕ್ಷಗಾನ ತಾಳಮದ್ದಳೆ ಸಪ್ತಾಹ” ನಡೆಸುತ್ತಿದೆ. ಯಕ್ಷಗಾನ ಪ್ರಸಂಗಗಳ ಛಂದಸ್ಸಿನ ಹೊಸ ಕಲ್ಪನೆಗಳನ್ನು ಸಂಶೋಧಿಸಿದ ಹಾಗೂ “ಯಕ್ಷಗಾನ ಛಂದೋಬಂಧಿ” ಎಂಬ ಲಕ್ಷಣ ಗ್ರಂಥ ರಚಿಸಿದ ಡಾ|| ಶಿಮಂತೂರು ನಾರಾಯಣ ಶೆಟ್ಟರು ಕಿನ್ನಿಗೋಳಿಯವರು. ಕಳೆದ ಹದಿಮೂರು ವರ್ಷಗಳಿಂದ “ವಿಜಯಾ ಕಲಾವಿದರು” ತುಳು ನಾಟಕ ಸಂಸ್ಥೆ ತುಳು ನಾಟಕ ಪ್ರದರ್ಶನದ ಜೊತೆ ರಂಗಭೂಮಿಯ ಸೇವೆ ಮಾಡುತ್ತಿದೆ. ಕಿನ್ನಿಗೋಳಿಯ ಸಾಹಿತಿಗಳಲ್ಲಿ ಅಚ್ಚುತ ಗೌಡ ಕಿನ್ನಿಗೋಳಿ (ಅ.ಗೌ.ಕಿ.) ಕೊಡೆತ್ತೂರು ಅನಂತ ಪದ್ಮನಾಭ ಉಡುಪ, ಕೆ.ಜಿ. ಮಲ್ಯ, ಸುಮುಖಾನಂದ ಜಲವಳ್ಳಿ ಪ್ರಮುಖರು.
ಮಂಗಳೂರು ತಾಲೂಕು ಮಟ್ಟದ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನವು ಕಿನ್ನಿಗೋಳಿಯ ಯುಗಪುರುಷ ಸಭಾ ಭವನದಲ್ಲಿ ನಡೆದಿತ್ತು. ದಕ್ಷಿಣ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಹರಿಕೃಷ್ಣ ಪುನರೂರು ಅಧ್ಯಕ್ಷರಾಗಿ ಪದ್ಮಾ ಶೆಣೈ ಸಮ್ಮೇಳನಾಧ್ಯಕ್ಷ ಹಾಗೂ ಕೆ. ಭುವನಾಭಿರಾಮ ಉಡುಪ ಸಮ್ಮೇಳನ ಕಾರ್ಯಾಧ್ಯಕ್ಷರಾಗಿದ್ದರು.
ವೈದ್ಯಕೀಯ ಕ್ಷೇತ್ರದಲ್ಲಿ ಸಂಶೋಧಕರಾದ ಪದ್ಮಶ್ರೀ ಡಾ|| ಕೆ.ಎಸ್. ಉಡುಪ ಹಾಗು ಡಾ||ಕೆ. ಭಾಸ್ಕರ ಉಡುಪ ಅವರು ಕಿನ್ನಿಗೋಳಿಯ ಪತಿಭಾವಂತರು. ಸ್ವಾತಂತ್ರ್ಯ ಹೋರಟಗಾರ ಸಮಾಜ ಸೇವಕ ಸಂಜೀವನಾಥ ಐಕಳ, ಹಾಸ್ಯ ರಂಗದ ಹೆಸರಾಂತ ಕಲಾವಿದ ರಿಚಾರ್ಡ್ ಲೂವಿಸ್, ಬೆಥನಿ ಕನ್ಯಾ ಮಠದಲ್ಲಿ ಸೇವೆ ಸಲ್ಲಿಸಿದ ಮದರ್ ಮಕ್ರಿನ, ರೆ| ಸಿಸ್ಟರ್ ಆಗ್ನೆಲ್ಲ, ರೆ|ಸಿಸ್ಟರ್ ಬರ್ತಾ ಬಳ್ಳಾರಿ ಬಿಷಪ್ ಹೆನ್ರಿ ಡಿಸೋಜ ಮತ್ತು ಗುಲ್ಬರ್ಗಾ ಬಿಷಪ್ ರಾಬರ್ಟ್ ಮಿರಾಂದ ಕಿನ್ನಿಗೋಳಿಯ ಶಾಂತಿ ಪ್ರತಿಪಾದಕರು.

ಶಿಕ್ಷಣ ಸೌಲಭ್ಯ
ಶೈಕ್ಷಣಿಕ ಕ್ಷೇತ್ರದಲ್ಲಿ ಕಿನ್ನಿಗೋಳಿಯದ್ದು ಮಹತ್ತರ ಸಾಧನೆ. ಶತಕದ ಹಿಂದಿನಿಂದ ಕಿನ್ನಿಗೋಳಿ ಇಗರ್ಜಿ ನಡೆಸುತ್ತಿರುವ ಸೈಂಟ್ ಮೇರಿಸ್ ಶಾಲೆ ಮುಕುಟವಿದ್ದಂತೆ. ಬೆಂಗಳೂರಿನ ನಾರಾಯಣ ಹೃದಯ ಚಿಕಿತ್ಸಾಲಯದ ವಿಶ್ವವಿಖ್ಯಾತಿ ಹೊಂದಿದ ಡಾ|| ದೇವಿಪ್ರಸಾದ್ ಶೆಟ್ಟಿ ಈ ಶಾಲೆಯ ಹಳೆ ವಿದ್ಯಾರ್ಥಿ ಮೂಲತಃ ಇಲ್ಲನವರು ಎಂಬುದು ಹೆಮ್ಮೆಯ ವಿಷಯ. ಬೆಥನಿ ಸಂಸ್ಥೆ ನಡೆಸುತ್ತಿರುವ ಲಿಟ್ಲ್ ಫ್ಲವರ್ ಶಾಲೆ ಒಂದೊಮ್ಮೆ ಬಹಳ ಹೆಸರುವಾಸಿಯಾದ ಕನ್ನಡ ಮಾಧ್ಯಮದ ಹೆಣ್ಣು ಮಕ್ಕಳ ಶಾಲೆಯಾಗಿತ್ತು. ಈಗ ಕಿನ್ನಿಗೋಳಿ ಪರಿಸರದಲ್ಲಿ ಹತ್ತಕ್ಕಿಂತ ಹೆಚ್ಚು ಹೈಸ್ಕೂಲು ಶಾಲೆಗಳಿವೆ, 6ಆಂಗ್ಲ ಮಾಧ್ಯಮ ಶಾಲೆಗಳಲ್ಲಿ 3ಕೇಂದ್ರೀಯ ಮಾದರಿಯ ಆಂಗ್ಲ ಮಾಧ್ಯಮ ಶಾಲೆಗಳಿವೆ. ಸಮೀಪದ ಪೊಂಪೈ ಕಾಲೇಜು ಐಕಳದಲ್ಲಿ ಇದೀಗ ಸ್ನಾತಕೋತ್ತರ ತರಗತಿಗಳು ಕೂಡಾ ಪ್ರಾರಂಭವಾಗಿದೆ.
ಕಿನ್ನಿಗೋಳಿ ನಗರ ಆರ್ಥಿಕತೆ ಹಾಗೂ ಬ್ಯಾಕಿಂಗ್ ಕ್ಷೇತ್ರದಲ್ಲಿ ನಾಗಲೋಟದಲ್ಲಿ ಓಡುತ್ತಿದೆ ಎಂದರೆ ತಪ್ಪಾಗಲಾರದು. ಕಿನ್ನಿಗೋಳಿ ಪರಿಸರದ ಎಲ್ಲಾ ವರ್ಗದ ಜನರು ಮುಂಬಯಿ, ಅರಬ್ ಹಾಗೂ ಪಾಶ್ಚಿಮಾತ್ಯ ದೇಶಗಳಲ್ಲಿರುವುದರಿಂದ ಹಣದ ಒಳ ಹರಿವು ಇಲ್ಲಿ ಜಾಸ್ತಿಯಗಿದೆ. ಒಂದೊಮ್ಮೆ ಬ್ಯಾಂಕಿಗ್ ಕ್ಷೇತ್ರದಲ್ಲಿ ಏಶಿಯಾದಲ್ಲಿಯೇ ಅತೀ ಹೆಚ್ಚು ಠೇವಣಿ ಇರುವ ಪ್ರದೇಶವಾಗಿತ್ತು. ಕಿನ್ನಿಗೋಳಿ ಪರಿಸರದಲ್ಲಿ 8 ರಾಷ್ಟ್ರೀಕೃತ ಬ್ಯಾಂಕುಗಳು 7ಖಾಸಗಿ ಹಾಗೂ ಸಹಕಾರಿ ಬ್ಯಾಂಕುಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತದೆ. ಹೆಚ್ಚು ಅನಿಸುವಷ್ಟು ವ್ಯಾಪಾರಿ ಮಳಿಗೆ, ಅಂಗಡಿಗಳು, ಹೊಟೇಲುಗಳು, ಬಾರುಗಳು ಕಿನ್ನಿಗೋಳಿ ಪೇಟೆಯಲ್ಲಿದೆ. ಹೀಗಿದ್ದರೂ ವ್ಯಾಪಾರ ಮಾತ್ರ ಬಿರುಸಾಗಿದೆ ಕಾರಣ ನಿಡ್ಡೋಡಿ ಮುಚ್ಚೂರು ನೀರುಡೆ, ಕಟೀಲು ಎಕ್ಕಾರು, ಉಲ್ಲಂಜೆ, ಶಿಬರೂರು, ಪಕ್ಷಿಕೆರೆ, ಪಂಜ, ಕೆಂಚನಕೆರೆ, ಶಿಮಂತೂರು, ಎಳತ್ತೂರು ಕೊಲ್ಲೂರು ಬಳಕುಂಜೆ ಕುಕ್ಕಟ್ಟೆ, ಮುಂಡ್ಕೂರು, ಕಡಂದಲೆ ಸಚ್ಚರಿಪೇಟೆ, ಏಳಿಂಜೆ ದಾಮಸ್ ಕಟ್ಟೆ, ಐಕಳ ಕುದ್ರಿಪದವು ಮುಂತಾದ ಊರುಗಳಿಂದ ಜನರು ವ್ಯಾಪಾರಕ್ಕೆಂದು ಕಿನ್ನಿಗೋಳಿಯನ್ನು ಆಶ್ರಯಿಸುವುದರಿಂದ ಇದುವೇ ಎಲ್ಲರಿಗೂ ಕೇಂದ್ರ ಸ್ಥಾನವಾಗಿದೆ. ಎಸ್.ಇ.ಝಡ್ ನಿರಾಶ್ರಿತರು ಹಾಗೂ ವಿದ್ಯಾವಂತರು ಪ್ರಶಾಂತವಾದ ಗಲಭೆಗಳಿಲ್ಲದ ಸಕಲ ಸವಲತ್ತುಗಳ್ಳು ಒಳಗೊಂಡ ಕಿನ್ನಿಗೋಳಿ ಪರಿಸರವನ್ನು ಆಶ್ರಯಿಸಿದ್ದರಿಂದ ರಿಯಲ್ ಎಸ್ಟೇಟ್ ವ್ಯಾಪಾರವು ಏರುಗತಿಯಲ್ಲಿದೆ. ಮಂಗಳೂರು ತಾಲೂಕಿನಲ್ಲಿ ಕಿನ್ನಿಗೋಳಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರದೇಶ. ಈಗಾಗಲೇ ಮುಂಬಯಿಲ್ಲಿರುವಂತೆ ಪ್ಲಾಟ್ ಸಂಸ್ಕೃತಿ ಬೆಳೆಯುತ್ತಿದೆ. ಕಳೆದ ಕೆಲವು ವರ್ಷಗಳಿಂದ ಇಲ್ಲಿ ವಾಣಿಜ್ಯ ಚಟುವಟಿಕೆ ಬಿರುಸು ಕಂಡಿದ್ದು ಬೃಹತ್ ವಾಣಿಜ್ಯ ಹಾಗೂ ವಸತಿ ಸಮುಚ್ಚಯಗಳು ತಲೆ ಎತ್ತಿವೆ.

ಹಿಂದೆ ಕಿನ್ನಿಗೋಳಿ ಮಂಡಲ ಪಂಚಾಯಿತಿ ಕ್ಷೇತ್ರವಾಗಿದ್ದು ಕಿನ್ನಿಗೋಳಿ ಹಾಗೂ ಮೆನ್ನಬೆಟ್ಟು ವ್ಯಾಪ್ತಿಯ ಜನಸಂಖ್ಯಾ ಎರಿಕೆಯಿಂದಾಗಿ ಅಭಿವೃದ್ದಿಯ ದೃಷ್ಟಿಯಿಂದ ಎರಡು ಪಂಚಾಯಿತಿಗಳು ಸೇರಿ ಕಿನ್ನಿಗೋಳಿ ನಗರ ಪಂಚಾಯಿತಿಯನ್ನಾಗಿ ಮಾರ್ಪಡಿಸಲು ಸರಕಾರದ ಅನುಮೋದನೆಗಾಗಿ ಕಾಯುತ್ತಿದೆ. ಸಮೀಪದ ಐಕಳ ಹಾಗೂ ಕೆಮ್ರಾಲ್ ಪಂಚಾಯಿತಿಗಳು ಕೂಡಾ ಕಿನ್ನಿಗೋಳಿಗೆ ಸೇರಿದರೆ ಈ ಕನಸು ಈಡೇರಬಹುದು. ಪ್ರತಿ ಮನೆಗೆ ನಳ್ಳಿ ಸಂಪರ್ಕದ ಮೂಲಕ ಕುಡಿಯುವ ನೀರು ಯಶಸ್ವಿಯಾಗಿ ಪೂರೈಸಿದ ಏಕೈಕ ಗ್ರಾಮ ಪಂಚಾಯಿತಿಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ದೇಶ ವಿದೇಶಗಳಿಂದ ಸರಕಾರಿ ಹಾಗೂ ಸರಕಾರೇತರ ಸಂಘ ಸಂಸ್ಥೆಗಳು, ನಿಯೋಗಗಳು ಈ ಪಂಚಾಯಿತಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ.
ಇಂತಹ ಅದ್ಬುತ ಹಿನ್ನೆಲೆಯುಳ್ಳ ಕಿನ್ನಿಗೋಳಿ ಕೋಮು ಸಾಮರಸ್ಯ, ಸ್ನೇಹ ಸೌಹಾರ್ದತೆ, ಸಹಕಾರಗಳ ನೆಲೆವೀಡಾಗಿದ್ದು ಈ ಮನೋಭಾವನೆ ಇನ್ನೂ ಮುಂದುವರಿಯಲಿ ಎಂಬುದು ನಮ್ಮ ಆಶಯ.

KInnigoli KInnigoli-Town